ಸಾರಾಂಶ
ಶೃಂಗೇರಿ: ತಾಲೂಕಿನಾದ್ಯಂತ ಮಂಗಳವಾರವೂ ಮುಂದುವರಿದ ವರುಣನ ಆರ್ಭಟಕ್ಕೆ ರಸ್ತೆ ಚರಂಡಿಗಳೆಲ್ಲಾ ತುಂಬಿ ಹರಿದು, ಜನಜಿವನ ಅಸ್ತವ್ಯಸ್ತವಾಯಿತು.
ಶೃಂಗೇರಿ: ತಾಲೂಕಿನಾದ್ಯಂತ ಮಂಗಳವಾರವೂ ಮುಂದುವರಿದ ವರುಣನ ಆರ್ಭಟಕ್ಕೆ ರಸ್ತೆ ಚರಂಡಿಗಳೆಲ್ಲಾ ತುಂಬಿ ಹರಿದು, ಜನಜಿವನ ಅಸ್ತವ್ಯಸ್ತವಾಯಿತು.
ಮದ್ಯಾಹ್ನದಿಂದಲೇ ಗುಡುಗು ಸಿಡಿಲಿನ ಆರ್ಭಟದೊಂದಿಗೆ ಸುರಿದ ಮಳೆಯ ರಭಸಕ್ಕೆ ಶೃಂಗೇರಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಾದ ಮೆಣಸೆ, ವಿದ್ಯಾರಣ್ಯಪುರ, ಮರ್ಕಲ್, ಧರೆಕೊಪ್ಪ, ಕೆರೆ, ನೆಮ್ಮಾರು ಸುತ್ತಮುತ್ತಲ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ನಲುಗಿದವು.ಸೋಮವಾರವೂ ತಾಲೂಕಿನಲ್ಲಿ ಭಾರಿ ಮಳೆ ಸುರಿದಿತ್ತು, ಕಳೆದ ನಾಲ್ಕೈದು ದಿನಗಳಿಂದ ಗುಡುಗು ಸಿಡಿಲಿನ ಆರ್ಭಟ, ಧಾರಾಕಾರವಾಗಿ ಸುರಿ ಯುತ್ತಿರುವ ಮಳೆಯಿಂದ ಜನಜೀವನ ತತ್ತರಿಸುವಂತೆ ಮಾಡಿದೆ. ನದಿ, ಹಳ್ಳ, ಕಿರುನದಿಗಳಲ್ಲಿ ನೀರು ಮತ್ತೆ ತುಂಬಿ ಹರಿಯುತ್ತಿದೆ. ಕಟಾವಿಗೆ ಸಿದ್ಧವಾಗುತ್ತಿರುವ ಬತ್ತದ ಗದ್ದೆಗಳಲ್ಲಿ ಮತ್ತೆ ನೀರು ತುಂಬಿ ನಿಲ್ಲುತ್ತಿರುವುದರಿಂದ ಬತ್ತದ ಫಸಲು ಹಾನಿಗೊಳಗಾಗುತ್ತಿವೆ. ವ್ಯಾಪಕ ಮಳೆಯಿಂದ ಬತ್ತಕ್ಕೆ ಬೆಂಕಿ ರೋಗ ಕಾಣಿಸಿಕೊಳ್ಳುತ್ತಿದೆ.
ಈ ಭಾಗದಲ್ಲಿ ಕಳೆದ ದಶಕಗಳಿಂದ ಅಡಕೆ ಹಳದಿ ಎಲೆ ರೋಗದಿಂದ ಬಹುತೇಕ ಅಡಕೆ ತೋಟಗಳು ನಾಶಗೊಂಡಿದ್ದು, ಉಳಿದ ತೋಟಗಳಿಗೆ ಅಡಕೆ ಎಲೆ ಚುಕ್ಕಿ ರೋಗ ತಗುಲಿ ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನ ಸುತ್ತಮುತ್ತಲು ವ್ಯಾಪಕವಾಗಿ ಹರಡುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಅಳಿದುಳಿದ ಅಡಕೆ ತೋಟಗಳು ಕೊಳೆ ರೋಗಕ್ಕೆ ತುತ್ತಾಗಿವೆ. ಮಳೆಯಿಂದ ಕಾಳುಮೆಣಸು, ಕಾಫಿ ಬೆಳೆಗಳು ನಾಶಗೊಳ್ಳುತ್ತಿದೆ. ಒಟ್ಟಾರೆ ಮಳೆಯ ಆರ್ಭಟ ಮುಂದುವರಿಯುತ್ತಿರುವುದರಿಂದ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತಿದೆ.22 ಶ್ರೀ ಚಿತ್ರ 2-ಶೃಂಗೇರಿಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದ ರಸ್ತೆಯ ಮೇಲೆ ನೀರು ತುಂಬಿ ಹರಿಯುತ್ತಿರುವುದು.