ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಬೆಂಕಿ ಹಚ್ಚಿ ಭೀಕರವಾಗಿ ಕೊಂದ ಪ್ರಕರಣದ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿ ಪ್ರೇಮಾಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಬೆಂಕಿ ಹಚ್ಚಿ ಭೀಕರವಾಗಿ ಕೊಂದ ಪ್ರಕರಣದ ಸಂಬಂಧ ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿ ಪ್ರೇಮಾಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ.

ಆರೋಪಿ ಪ್ರೇಮಾಳನ್ನು ಗುರುವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಅಂಜನಾನಗರದಲ್ಲಿರುವ ಮನೆಗೆ ಕರೆದೊಯ್ದು ಸ್ಥಳ ಮಹಜರು ನಡೆಸಿದ್ದು, ಈ ವೇಳೆ ಪ್ರೇಮಾ ಯಾವ ರೀತಿ ಕೃತ್ಯ ಎಸಗಿದೆ ಎಂಬುದನ್ನು ಪೊಲೀಸರಿಗೆ ವಿವರಿಸಿದ್ದು, ಇದರ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಿರಣ್‌ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲಿಗೆ ನೈಲಾನ್‌ ಹಗ್ಗದಿಂದ ಬಿಗಿದು ಬಳಿಕ ಬಕೆಟ್‌ನಲ್ಲಿದ್ದ ಸೀಮೆಎಣ್ಣೆ ಮತ್ತು ಪೆಟ್ರೋಲ್‌ ಸುರಿದು ಯಾವ ರೀತಿ ಬೆಂಕಿ ಹಚ್ಚಿ ಕೊಲೆ ಮಾಡಲಾಯಿತು ಎಂದು ಎಳೆಎಳೆಯಾಗಿ ವಿವರಿಸಿದ್ದಾಳೆ. ಇನ್ನು ಕೃತ್ಯಕ್ಕೆ ಬಳಸಿದ್ದ ವಾಟರ್‌ ಕ್ಯಾನ್‌ ಮತ್ತು ಬಕೆಟ್‌ ಸೇರಿ ಇತರೆ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮತ್ತೊಂದಿಷ್ಟು ವಸ್ತುಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಜತೆಗೆ ಪೆಟ್ರೋಲ್‌ ಮತ್ತು ಸೀಮೆಎಣ್ಣೆ ಖರೀದಿಸಿದ ಸ್ಥಳಗಳಿಗೂ ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಬಳಿಕ ಪೊಲೀಸರು ಪಂಚನಾಮೆ ಕೂಡ ಮಾಡಿದ್ದಾರೆ. ನಂತರ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಆಕೆಯನ್ನು ಶುಕ್ರವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಇದೆ.

ಏನಿದು ಪ್ರಕರಣ: ಹಳೆಯ ಪ್ರೇಯಸಿಯಿಂದಾಗಿ ತನ್ನಿಂದ ಅಂತರ ಕಾಯ್ದುಕೊಂಡಿದ್ದಕ್ಕೆ ತುಮಕೂರು ಮೂಲದ ಕಿರಣ್‌ನನ್ನು (27) ಪ್ರಿಯತಮೆ ಪ್ರೇಮಾ(27) ಮಂಗಳವಾರ ಮಧ್ಯಾಹ್ನ ತನ್ನ ಮನೆಗೆ ಕರೆಸಿಕೊಂಡು ಪ್ರೇಮ ನಿವೇದನೆಯ ನೆಪದಲ್ಲಿ ಆತನ ಕಣ್ಣಿಗೆ ಬಟ್ಟೆ ಕಟ್ಟಿ, ಕೈ ಕಾಲಿಗೆ ಹಗ್ಗದಿಂದ ಬಿಗಿದು ಬಳಿಕ ಪೆಟ್ರೋಲ್‌ ಮತ್ತು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಳು. ಈ ಸಂಬಂಧ ಕಿರಣ್‌ ತಂದೆ ನರಸಿಂಹಯ್ಯ ಅವರು ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಿಸಿಕೊಂಡು ಯುವತಿಯನ್ನು ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.