ಸಾರಾಂಶ
ಪಂಚನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುಗ್ರಾಮೀಣ ಕಾಲೇಜುಗಳು ವಿದ್ಯಾರ್ಥಿಗಳ ಕೊರತೆಯಿಂದ ನಲುಗುತ್ತಿದ್ದು, ಪೋಷಕರು ತಮ್ಮ ಮಕ್ಕಳನ್ನು ಗ್ರಾಮೀಣ ಭಾಗದ ಕಾಲೇಜುಗಳಿಗೆ ಸೇರಿಸುವ ಮೂಲಕ ಕಾಲೇಜನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ತಾಲೂಕಿನ ಗಡಿ ಗ್ರಾಮವಾದ ಪಂಚನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2 ಕೋಟಿ ರು. ವೆಚ್ಚದ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಬಯಲು ಪ್ರದೇಶವಾದ ಕಡೂರು ತಾಲೂಕು ಸದಾ ಬರಗಾಲಕ್ಕೆ ತುತ್ತಾಗುತ್ತಿರುತ್ತದೆ. ಹಾಗಾಗಿ ಇದರ ಪರಿಹಾರಕ್ಕೆ ಜನತೆಗೆ ಶಿಕ್ಷಣದ ಅಗತ್ಯ ಹೆಚ್ಚಾಗಿದೆ ಹಾಗಾಗಿ ಶಿಕ್ಷಣ ಕೇತ್ರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಶೈಕ್ಷಣಿಕ ಅಭಿವೃದ್ಧಿ ಕೇವಲ ಪಟ್ಟಣ ಪ್ರದೇಶಕ್ಕೆ ಕೇಂದ್ರಿಕೃತವಾಗಬಾರದೆಂದು ಗ್ರಾಮೀಣ ಭಾಗದ ಕಾಲೇಜುಗಳ ಅಭಿವೃದ್ಧಿಗೂ ಹೆಚ್ಚಿನ ಅನುದಾನ ನೀಡಲಾಗುತ್ತಿದೆ.ಈಗಾಗಲೇ ಯಗಟಿ ಗ್ರಾಮದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 5 ಕೋಟಿ ಅನುದಾನ ನೀಡಲಾಗಿದೆ. ಪಂಚನಹಳ್ಳಿ ಪ್ರಥಮ ದರ್ಜೆ ಕಾಲೇಜಿಗೆ ಹೆಚ್ಚುವರಿ ಕೊಠಡಿಗಳು ಮತ್ತು ಆಡಿಟೋರಿಯಂ ನಿರ್ಮಾಣಕ್ಕೆ 2 ಕೋಟಿ ರು. ಜೊತೆಗೆ 50 ಲಕ್ಷ ಹೆಚ್ಚುವರಿ ಅನುದಾನ ಬಂದಿದೆ. ಶೌಚಾಲಯ ನಿರ್ಮಾಣಕ್ಕೆ 15 ಲಕ್ಷ ನೀಡಲಾಗಿದೆ ಎಂದರು.
ಜನರ ಬೇಡಿಕೆಯಂತೆ ವಿದ್ಯಾರ್ಥಿನಿಯರ ವಸತಿ ನಿಲಯ ತೆರೆಯಲು ಮತ್ತು ಪಂಚನಹಳ್ಳಿ ಸಮುದಾಯ ಆರೋಗ್ಯ ಕೇಂದ್ರ ದಿಂದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ವರೆಗೆ ಡಬಲ್ ರೋಡ್ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಪ್ರಯತ್ನಿಸ ಲಾಗುವುದು ಎಂದರು.ಗ್ರಾಪಂ ಅಧ್ಯಕ್ಷ ಪಿ.ಆರ್.ರಂಗನಾಥ್ ಮಾತನಾಡಿ, ಪಂಚನಹಳ್ಳಿ ಪ್ರಥಮ ದರ್ಜೆ ಕಾಲೇಜಿಗೆ ಬಹು ದಿನಗಳ ಇತಿಹಾಸವಿದೆ. ಕಡೂರಿನಲ್ಲಿ ಪ್ರಥಮ ದರ್ಜೆ ಕಾಲೇಜು ಆರಂಭಕ್ಕೂ ಮುಂಚೆ ಪಂಚನಹಳ್ಳಿಯಲ್ಲಿ ಕಾಲೇಜು ಆರಂಭವಾಗಿತ್ತು. ಹಾಗಾಗಿ ವಿದ್ಯಾರ್ಥಿಗಳ ಕೊರತೆ ನೀಗಿಸಿ ಕಾಲೇಜನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಗ್ರಾಮದ ಪ್ರತಿಯೊಬ್ಬರ ಮೇಲಿದೆ. ಕಾಲೇಜು ರಾಜಕೀಯದಿಂದ ದೂರ ಉಳಿಯಬೇಕು. ನೌಕರರು ಸಮನ್ವಯತೆಯಿಂದ ಕೆಲಸ ಮಾಡಿದರೆ ಶೈಕ್ಷಣಿಕ ಕೇಂದ್ರ ಗಳು ಅಭಿವೃದ್ಧಿ ಹೊಂದಲು ಸಾದ್ಯ ಎಂದು ಹೇಳಿದರು.
ತಾಪಂ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ ಮಾತನಾಡಿ, ಗಡಿ ಗ್ರಾಮ ಪಂಚನಹಳ್ಳಿ ಮತ್ತು ಗ್ರಾಮಗಳ ಅಭಿವೃದ್ದಿಗೆ ನಮ್ಮ ಶಾಸಕ ಕೆ. ಎಸ್. ಆನಂದ್ ರವರು ಆದ್ಯತೆ ನೀಡುತ್ತಿದ್ದು ಕಾಲೇಜಿಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕು ಎಂದರು.ಪ್ರಾಚಾರ್ಯ ಡಿ.ಬಿ.ದೇವರಯ್ಯ, ಗ್ರಾಪಂ ಉಪಾಧ್ಯಕ್ಷೆ ರೂಪ ಶ್ರೀನಿವಾಸ್,ತಾಪಂ ಮಾಜಿ ಉಪಾಧ್ಯಕ್ಷ ಪಿ.ಸಿ.ಪ್ರಸನ್ನ, ಓಂಕಾರಪ್ಪ, ತಿಮ್ಮಲಾಪುರ ದಿನೇಶ್, ಪಿ.ಜಿ.ಸಿದ್ದರಾಮಪ್ಪ, ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಚಂದ್ರಶೇಖರ್, ಪಿ.ಎಂ. ಪಾಪಣ್ಣ, ಲಿಂಗರಾಜು, ಮರುಳಪ್ಪ, ಗ್ರಾಪಂ ಮತ್ತು ಕಾಲೇಜು ಸಿಡಿಸಿಸಿ ಸದಸ್ಯರು ಇದ್ದರು.
--ಬಾಕ್ಸ್ --ಅಭಿವೃದ್ಧಿಯಲ್ಲಿ ರಾಜಕೀಯ ಬೇಡ
ಗ್ರಾಮಗಳ ಅಭಿವೃದ್ಧಿಗೆ ರಾಜಕೀಯ ಬೇಡ ಅದನ್ನು ಚುನಾವಣಾ ಸಮಯದಲ್ಲಿ ಮಾತ್ರ ಮಾಡೋಣ ಎಂದು ಶಾಸಕ ಕೆ. ಎಸ್ ಆನಂದ್ ಹೇಳಿದರು. ಪಂಚನಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮಗಾರಿ ಚಾಲನೆ ವೇಳೆ ಮಾತನಾಡಿ, ನಾಲ್ಕು ಜಿಲ್ಲೆಗಳ ಗಡಿ ಗ್ರಾಮ ಪಂಚನಹಳ್ಳಿ ಹಾಗು ಸುತ್ತಮುತ್ತಲ ಗ್ರಾಮಗಳು ತೀರಾ ಹಿಂದುಳಿದಿವೆ. ಇದನ್ನು ಅರಿತು ರಾಜಕೀಯ ಮಾಡದೆ ಪಕ್ಷಾತೀತ ವಾಗಿ ಅಭಿವೃದ್ಧಿಗೆ ಆದ್ಯತೆ ನೀಡುತಿದ್ದೇನೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ರಾಜಕೀಯವನ್ನು ಚುನಾವಣೆಗೆ ಮಾತ್ರ ಬಳಸೋಣ ಎಂದರು.9ಕೆಕೆಡಿಯು1.
ಪಂಚನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕೊಠಡಿ ಮತ್ತು ಆಡಿಟೋರಿಯಮ್ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು.