ರಾಜ್ಯ ಸರ್ಕಾರದ ಆದೇಶವು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಅರ್ಹತೆ ಅನುಗುಣವಾಗಿ ನೇಮಿಸಿಕೊಳ್ಳುವಂತೆ ಪ್ರಾಂಶುಪಾಲರ ನೇತೃತ್ವದ ಎಸ್ಒಪಿ ಸಮಿತಿಗೆ ಅಧಿಕಾರ ನೀಡಿದೆ.

ಕನಕಗಿರಿ:

ಇಲ್ಲಿನ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಪೂರ್ಣ ದಾಖಲಾತಿ ನೀಡಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕನನ್ನು ಸೇವೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ ಹೊರಗುಳಿದ ಅತಿಥಿ ಉಪನ್ಯಾಸಕ ತಂಡ ಸೋಮವಾರ ಕಾಲೇಜಿನ ನೋಡಲ್ ಅಧಿಕಾರಿ ವೀರೇಶ ಕೆಂಗಲ್ ಅವರಿಗೆ ಮನವಿ ಸಲ್ಲಿಸಿತು.

ಈ ಕುರಿತು ಬಾಳಪ್ಪ ಸುಳೇಕಲ್ ಮಾತನಾಡಿ, ರಾಜ್ಯ ಸರ್ಕಾರದ ಆದೇಶವು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಅತಿಥಿ ಉಪನ್ಯಾಸಕರನ್ನು ಅರ್ಹತೆ ಅನುಗುಣವಾಗಿ ನೇಮಿಸಿಕೊಳ್ಳುವಂತೆ ಪ್ರಾಂಶುಪಾಲರ ನೇತೃತ್ವದ ಎಸ್ಒಪಿ ಸಮಿತಿಗೆ ಅಧಿಕಾರ ನೀಡಿದೆ. ಆದರೆ, ಕಾಲೇಜಿಗೆ ಓರ್ವ ಉಪನ್ಯಾಸಕ ಎಸ್ಒಪಿ ನಿಯಮ ಗಾಳಿಗೆ ತೂರಿ ಅಪೂರ್ಣ ಪ್ರಮಾಣದ ದಾಖಲಾತಿ ಸಲ್ಲಿಕೆ ಮಾಡಿ ಅತಿಥಿ ಉಪನ್ಯಾಸಕನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಇದು ಕಾನೂನು ಬಾಹಿರವಾದರೂ ಕಾಲೇಜಿನ ಎಸ್ಒಪಿ ತಂಡ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಆರೋಪಿಸಿದರು.

ಮಾ‌. ೨೩ರಂದು ಈ ಅತಿಥಿ ಉಪನ್ಯಾಸಕ ನೀಡಿದ ದಾಖಲೆ ಮೇಲೆ ಅನುಮಾನ ಉಂಟಾಗಿದ್ದು, ತಾವು ಈ ಹಿಂದೆ ಬೇರೆ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ಸೇವಾ ಅನುಭವದ ದಾಖಲೆಯನ್ನು ತಮಗೆ ಅನುಗುಣವಾಗುವ ರೀತಿಯಲ್ಲಿ ಸೃಷ್ಟಿಸಿ ಸಮಿತಿಗೆ ಸಲ್ಲಿಕೆ ಮಾಡಲಾಗಿದೆ. ಸಮಿತಿ ಸಹ ಅದನ್ನು ಗಂಭೀರವಾಗಿ ಪರಿಶೀಲಿಸದೆ ನೇಮಿಸಿಕೊಂಡು ಸೇವೆಯಲ್ಲಿ ಮುಂದುವರಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರನ್ನು ಸೇವೆಯಲ್ಲಿ ಮುಂದುವರಿಸುತ್ತಿದ್ದು, ಆಯಾ ಕಾಲೇಜುಗಳ ಸಮಿತಿ ಅವರ ದಾಖಲೆ ಪರಿಶೀಲಿಸುವ ಹಂತದಲ್ಲಿದೆ. ಆದರೆ ಈ ಕಾಲೇಜಿನಲ್ಲಿ ತರಾತುರಿಯಾಗಿ ನಮ್ಮನ್ನು ತೆಗೆದು ಹಾಕಿರುವುದು ಬೇಸರ ತಂದಿದೆ. ಕಾಲೇಜು ಆಡಳಿತ ಮಂಡಳಿಗೆ ಅಪೂರ್ಣ ದಾಖಲೆ ನೀಡಿದ ಓರ್ವ ಅತಿಥಿ ಉಪನ್ಯಾಸಕನ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು. ಇಲ್ಲವಾದರೆ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಎಸ್ಒಪಿ ಸಮಿತಿಯ ಸಹಾಯಕ ಪ್ರಾಧ್ಯಾಪಕರಾದ ರಕ್ಷಿತ್ ಎ, ಡಾ. ವೀರೇಶ್ ಕೆಂಗಲ್, ಸರ್ವ ಮಂಗಳಮ್ಮ ಟಿ.ಆರ್, ಸಂಗಮೇಶ ಹನುಮನಾಳ, ಹೊರಗುಳಿದ ಅತಿಥಿ ಉಪನ್ಯಾಸಕ ಮಾರುತೇಶ, ಮಾಹಿತಿ ಹಕ್ಕು ಕಾಯಿದೆ ಕಾರ್ಯಕರ್ತ ಕನಕಪ್ಪ ವಜ್ರಬಂಡಿ, ಎಬಿವಿಪಿ ಕಾರ್ಯಕರ್ತ ಕಿರಣಕುಮಾರ ಇದ್ದರು.

ಈ ಹಿಂದೆ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ ನಮಗೆ ಕಾಲಾವಕಾಶ ಕೇಳಿದರೆ ನಾನಾ ಕಾರಣ ಹೇಳಿ ಕಾಲೇಜಿನಿಂದ ಹೊರಗುಳಿಯುವಂತೆ ಮಾನಸಿಕ ಕಿರಕುಳ ನೀಡಿದ ಪರಿಣಾಮ ರಾಜೀನಾಮೆ ನೀಡಿದ್ದೇವೆಯೇ ಹೊರತು ಸ್ವ-ಇಚ್ಛೆಯಿಂದ ರಾಜೀನಾಮೆ ನೀಡಿಲ್ಲ. ಸ್ಥಳೀಯರಿಗೆ ಹಾಗೂ ಕಾಲೇಜಿನ ಅಭಿವೃದ್ಧಿಗೆ ದಶಕಗಳ ಕಾಲ ದುಡಿದವರಿಗೆ ಎಸ್ಒಪಿ ಸಮಿತಿ ಅವಕಾಶ ನೀಬೇಕು.

ಗೋಪಾಲರೆಡ್ಡಿ, ಸೇವೆಯಿಂದ ಹೊರಗುಳಿದ ಉಪನ್ಯಾಸಕ