ರೈತರಿಗೆ ಉಚಿತ ತೆಂಗು ಪೋಷಕಾಂಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ

ಕನ್ನಡಪ್ರಭ ವಾರ್ತೆ ಕುಮಟಾ

ಕರಾವಳಿಯ ಪ್ರಮುಖ ಬೆಳೆಗಳಲ್ಲೊಂದಾದ ತೆಂಗುಬೆಳೆ ಸದ್ಯ ಇಳುವರಿ ಕಡಿಮೆಯಾಗಿದೆ. ತೆಂಗುಬೆಳೆಗಾರರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ತೆಂಗು ಅಭಿವೃದ್ಧಿ ಮಂಡಳಿಯ ಸಹಾಯ ಪಡೆದು, ವೈಜ್ಞಾನಿಕ ವಿಧಾನ ಮತ್ತು ಉಚಿತ ತೆಂಗು ಪೋಷಕಾಂಶ ಬಳಕೆಯಿಂದ ತೆಂಗು ಬೆಳೆ ಹೆಚ್ಚಿಸಿಕೊಳ್ಳಬಹುದು ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.

ತೆಂಗು ಅಭಿವೃದ್ಧಿ ಮಂಡಳಿ ಬೆಂಗಳೂರು ಮತ್ತು ಎವಿಪಿ ರೈತ ಉತ್ಪಾದಕ ಸಂಸ್ಥೆಯ ಸಹಯೋಗದಲ್ಲಿ ಕೃಷಿ ಇಲಾಖೆ ಆವರಣದಲ್ಲಿರುವ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಸಭಾಂಗಣದಲ್ಲಿ ರೈತರಿಗೆ ಉಚಿತ ತೆಂಗು ಪೋಷಕಾಂಶ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ತೆಂಗು ಬೆಳೆ ಹೆಚ್ಚಿಸಲು ಎವಿಪಿ ರೈತ ಉತ್ಪಾದಕ ಸಂಸ್ಥೆಯು ಹಲವಾರು ವರ್ಷಗಳಿಂದ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಈಗ ದೊಡ್ಡ ಪ್ರಮಾಣದಲ್ಲಿ ಕ್ಷೇತ್ರದ ರೈತರಿಗೆ ಉಚಿತವಾಗಿ ತೆಂಗು ಪೋಷಕಾಂಶ ವಿತರಿಸುತ್ತಿರುವುದು ಅತ್ಯುತ್ತಮ ಕಾರ್ಯ. ಬೆಳೆ ಹಾನಿ, ರೋಗಬಾಧೆ ಮುಂತಾದ ರೈತರ ಸಮಸ್ಯೆ ಪರಿಹಾರಕ್ಕೆ ಆಯಾ ಇಲಾಖೆ ಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ ಎಂದರು.


ಸಂಪನ್ಮೂಲ ವ್ಯಕ್ತಿ ಡಾ. ಜಿ.ವಿ. ನಾಯಕ ಮಾತನಾಡಿ, ವೈಜ್ಞಾನಿಕ ವಿಧಾನದಿಂದ ಎಲೆ ಚುಕ್ಕಿ ರೋಗ ನಿಯಂತ್ರಿಸುವ ವಿಧಾನ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಎವಿಪಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಗಣಪತಿ ಎಸ್.ನಾಯ್ಕ ಮಾತನಾಡಿ, ಕೂಜಳ್ಳಿ ಹಾಗೂ ಇತರ ೩ ಕ್ಲಸ್ಟರ್‌ಗಳಿಂದ ೩೮೦ ಹೆಕ್ಟೇರ್ ಪ್ರದೇಶದ ೧೦೨೪ ರೈತರಿಗೆ ಎರಡನೇ ಸಾಲಿನ ತೆಂಗು ಪೋಷಕಾಂಶಗಳಾದ ಬೇವಿನ ಹಿಂಡಿ ಡಯಾಂಚ, ಎಕ್ಸೊಗುನಾಜಲ, ಬೇವಿನ ಎಣ್ಣೆ ನೀಡಲಾಗುತ್ತಿದೆ. ಮಂಡಳಿಯ ಪ್ರಮುಖ ಯೋಜನೆಗಳಾದ ತೆಂಗು ಪ್ರಾತ್ಯಕ್ಷಿಕಾ ತೋಪು ನಿರ್ಮಾಣ, ಕೇರಾ ಸುರಕ್ಷಾ ವಿಮೆ, ತೆಂಗು ಹೊಸ ತೋಟ ನಿರ್ಮಾಣ, ರೈತರ ಹೊಲದ ಮಣ್ಣು ಪರೀಕ್ಷೆ ಇತರ ಯೋಜನೆಗಳ ಕುರಿತು ವಿವರಿಸಿ ರೈತರು ಎವಿಪಿ ಸಂಸ್ಥೆಯ ಮಲಕ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.

ತೆಂಗು ಅಭಿವೃದ್ಧಿ ಮಂಡಳಿಯ ತಾಂತ್ರಿಕ ಅಧಿಕಾರಿ ಕಿಶೋರಕುಮಾರ, ಎವಿಪಿ ಸಲಹಾ ಸಮಿತಿ ಸದಸ್ಯ ಎಸ್.ವಿ. ಹೆಗಡೆ ಭದ್ರನ್, ಎವಿಪಿ ನಿರ್ದೇಶಕ ಕೃಷ್ಣ ನಾಯ್ಕ, ತಿಮ್ಮಣ್ಣ ಭಟ್, ಈಶ್ವರ ಎಂ.ಕೊಡಿಯ, ಗ್ರೂಪ್ ಮುಖಂಡರಾದ ಸುಬ್ರಾಯ ಶಾನಭಾಗ, ಶಾಂತರಾಮ ಉಪಸ್ಥಿತರಿದ್ದರು.

ಕೃಷ್ಣ ನಾಯ್ಕ ಸ್ವಾಗತಿಸಿದರು. ಎಚ್.ಶಿವರಾಮ ವಂದಿಸಿದರು. ೩೦೦ಕ್ಕೂ ಅಧಿಕ ರೈತರು ತೆಂಗಿನ ಉಚಿತ ಪೋಷಕಾಂಶ ಗೊಬ್ಬರವನ್ನು ಪಡೆದುಕೊಂಡರು.