ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾಂತರಾಜ ವರದಿ ತಕ್ಷಣ ಜಾರಿಗೊಳಿಸಬೇಕು, ರಾಜ್ಯದ ಅತೀ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ರಾಜಕೀಯ ಶಕ್ತಿ ಹೆಚ್ಚಿಸುವಂತೆ ಅತೀ ಹಿಂದುಳಿದ ಮಠಾಧೀಶರ ಮಹಾಸಭಾ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ಪ್ರಣವಾನಂದ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಕೀಯ ಪಕ್ಷಗಳು ಹಿಂದುಳಿದ ವರ್ಗಗಳನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸಿಕೊಂಡೇ ಬರುತ್ತಿವೆ. ಅದರಲ್ಲೂ ಪಕ್ಷಕ್ಕಾಗಿ ದುಡಿದ ಸಮುದಾಯದ ನಾಯಕರನ್ನು ಇಂದಿನ ನಾಯಕರು ತಮ್ಮ ಸ್ವಾರ್ಥಕ್ಕಾಗಿ ದೂರ ಇಟ್ಟಿದ್ದಾರೆ. ಕೆ.ಸಿ.ಕೊಂಡಯ್ಯ, ಶಿವಮೂರ್ತಿ ನಾಯ್ಕ, ಜನಾರ್ದನ ಪೂಜಾರಿಯಂತಹ ನಾಯಕರ ಮೂಲೆಗುಂಪು ಮಾಡಿರುವುದರಿಂದ ಅತೀ ಹಿಂದುಳಿದ ಸಮುದಾಯಗಳು ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿಯುವಂತಾಗಿದೆ ಎಂದು ದೂರಿದರು.
ಅತೀ ಹಿಂದುಳಿದ ವರ್ಗಗಳ ಪ್ರತಿ ನಿಗಮನಕ್ಕೆ ಕನಿಷ್ಠ 500 ಕೋಟಿ ರು. ಅನುದಾನ ನೀಡಬೇಕು. ಅತೀ ಹಿಂದುಳಿದ ವರ್ಗಗಳಿಗೆ ಕಲಿಕೆ, ಸೌಖ್ಯ, ರಕ್ಷಣೆ ಹಿನ್ನೆಲೆಯಲ್ಲಿ ಚಾಲ್ತಿ ಇರುವ ಕುಲ ಕಸುಬುಗಳನ್ನು ವ್ಯವಸ್ಥಿತಗೊಳಿಸಬೇಕು. ನಿಷೇಧಿಸಿರುವ ಕುಲ ಕಸುಬುಗಳನ್ನು ಮರಳಿ ಆರಂಭಿಸಲು ಅವಕಾಶ ಮಾಡಿಕೊಡಬೇಕು ಅಥವಾ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಅತೀ ಹಿಂದುಳಿದ ವರ್ಗಗಳಿಂದ ಜಾತಿ ಮೀಸಲಾತಿ ಹಾಗೂ ಒಳ ಜಾತಿ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವ ಅತೀ ಹಿಂದುಳಿದ ವರ್ಗಗಳ ಬೇಡಿಕೆಯನ್ನು ಪ್ರಥಮಾದ್ಯತೆ ಮೇಲೆ ಈಡೇರಿಸಬೇಕು ಎಂದು ಆಗ್ರಹಿಸಿದರು.ಕೋಲಾರದ ಕೌನ್ಸಿಲರ್ ಶ್ರೀನಿವಾಸ ಬರ್ಬರ ಹತ್ಯೆ ಪ್ರಕರಣ ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಉನ್ನತ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ನಮ್ಮೆಲ್ಲಾ ಬೇಡಿಕೆಗಳನ್ನು ಆಳುವ ಸರ್ಕಾರಗಳು ಹಾಗೂ ರಾಜಕೀಯ ಪಕ್ಷಗಳು ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ಮುಂದಿನ ದಿನಗಳಲ್ಲಿ ಮಹಾಸಭಾದಿಂದ ತೀವ್ರ ಸ್ವರೂಪದ ಹೋರಾಟ ನಡೆಸುವ ದಿನಗಳೂ ದೂರವಿಲ್ಲ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಸಿದರು.
ಮಹಾಸಭಾದ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಸವ ನಾಗಿದೇವ ಸ್ವಾಮೀಜಿ ಮಾತನಾಡಿ, ನಮ್ಮ ಸಮಾಜಕ್ಕಾಗಿ, ಸಂವಿಧಾನ ಬದ್ಧ ಹಕ್ಕಿಗಾಗಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಅತೀ ಹಿಂದುಳಿದ ಮಠಾಧೀಶರ ಮಹಾಸಭಾದ ಮೂಲಕ ಧ್ವನಿ ಎತ್ತಿದ್ದೇವೆ. ಒಳ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದ ಬಿಜೆಪಿಯು ಅಧಿಕಾರ ಮುಗಿಸಿತು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಭರವಸೆ ನೀಡಿದ್ದು, ಇನ್ನೂ ಅದನ್ನು ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ನಮ್ಮ ಹೋರಾಟವೂ ಅನಿವಾರ್ಯವಾಗಿದೆ ಎಂದು ಸೂಚ್ಯವಾಗಿ ಹೇಳಿದರು.ಮಹಾಸಭಾದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಶ್ರೀ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಶ್ರೀ ಮರುಳ ಶಂಕರ ಸ್ವಾಮೀಜಿ ಇತರರಿದ್ದರು. ದೇವಸ್ಥಾನಗಳ ಸಂಪ್ರದಾಯ ಉಲ್ಲಂಘನೆ ಸರಿಯಲ್ಲ
ಪ್ರತಿಯೊಂದು ದೇವಸ್ಥಾನಗಳಲ್ಲೂ ಅದರದ್ದೇ ಆದ ಆಚಾರ, ಸಂಪ್ರದಾಯಗಳಿರುತ್ತವೆ. ಅವುಗಳನ್ನು ಉಲ್ಲಂಘಿಸಿ ಗರ್ಭಗುಡಿ ಪ್ರವೇಶಿಸುವುದು, ಪೂಜೆ ಮಾಡಬೇಕೆಂಬುದು ಸರಿಯಲ್ಲ ಎಂದು ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ಆಚಾರ, ಸಂಪ್ರದಾಯಗಳ ಉಲ್ಲಂಘಿಸಿ ಗರ್ಭಗುಡಿ ಪ್ರವೇಶ ಬಯಸುವುದು, ಪೂಜೆ ಮಾಡಬೇಕೆಂಬುದಾಗಿ ಬಯಸುವ ಸ್ವಾಮೀಜಿಗಳು ತಮ್ಮ ಸಮುದಾಯದ ದೇವಸ್ಥಾನಗಳಲ್ಲಿ ಇಷ್ಟ ಬಂದಂತೆ ಮಾಡಬಹುದು. ಆದರೆ, ಬೇರೆ ದೇವಸ್ಥಾನಗಳಿಗೆ ಹೋಗಿ, ಅಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ರಾಜಕೀಯ ಕಾರಣಕ್ಕಾಗಿ ದೇಶ ವಿಭಜನೆಯ ಹೇಳಿಕೆಯ ಕೆಲವರು ನೀಡುತ್ತಿರುವುದು ಖಂಡನೀಯ. ತಮ್ಮ ಸ್ವಾರ್ಥಕ್ಕಾಗಿ, ರಾಜಕೀಯ ಉದ್ದೇಶಗಳಿಗಾಗಿ ಇಂತಹ ಹೇಳಿಕೆ ನೀಡುವುದು ಯಾವೊಬ್ಬ ರಾಜಕಾರಣಿಗೂ ಶೋಭೆ ತರುವುದಿಲ್ಲ ಎಂದು ತಿಳಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))