ಸಾರಾಂಶ
ಶಿಕ್ಷಕರು ಸರ್ಕಾರ ಹಾಗೂ ದಾನಿಗಳ ಸಹಕಾರ ಪಡೆದು ಶಾಲಾ ಕಾಲೇಜುಗಳ ಕಟ್ಟಡಗಳು ನಿರ್ಮಿಸಿ, ಮೂಲಭೂತ ಸೌಲತ್ತುಗಳನ್ನು ಒದಗಿಸಿ, ಶಾಲೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣವನ್ನು ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.
ಕನ್ನಡಪ್ರಭ ಮಾಲೂರು
ತಾಲೂಕಿನ ಶಾಲಾ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು ಶ್ರೇಷ್ಠ ದಾರ್ಶನಿಕ ಶಿಕ್ಷಣ ತಜ್ಞ ತತ್ವಜ್ಞಾನಿ ಮಾಜಿ ರಾಷ್ಟ್ರಪತಿ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಹಾಗೂ ಶಿಕ್ಷಣ ತಜ್ಞೆ ಸಾವಿತ್ರಿಬಾಯಿ ಫುಲೆ ಅವರ ಆದರ್ಶಗಳು ಅಳವಡಿಸಿಕೊಂಡು ಮಕ್ಕಳಿಗೆ ಗುಣಾತ್ಮಕ ಶಿಕ್ಷಣವನ್ನು ನೀಡುವ ಕಡೆ ಪ್ರಾಮಾಣೀಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಮಾಲೂರು ಬೆಂಗಳೂರು ರಸ್ತೆಯ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ ಭಾರತ ರತ್ನ ಡಾ. ಎಸ್ ರಾಧಾಕೃಷ್ಣನ್ ರವರ ೧೩೬ ನೇ ಜನ್ಮ ದಿನೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ದಾಖಲಾತಿ ಹೆಚ್ಚಿಸಿಸರ್ಕಾರ ಹಾಗೂ ದಾನಿಗಳ ಸಹಕಾರ ಪಡೆದು ಶಾಲಾ ಕಾಲೇಜುಗಳ ಕಟ್ಟಡಗಳು ನಿರ್ಮಿಸಿ, ಮೂಲಭೂತ ಸೌಲತ್ತುಗಳನ್ನು ಒದಗಿಸಿ, ಶಾಲೆಗೆ ಬರುವ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣವನ್ನು ನೀಡಬೇಕು. ರಾಜ್ಯ ಸರ್ಕಾರ ಈಗಾಗಲೇ ಸರ್ಕಾರಿ ನೌಕರರು ಹಾಗೂ ಶಿಕ್ಷಕರಿಗೆ ೭ನೇ ವೇತನ ಆಯೋಗ ಅನುಷ್ಠಾನಗೊಳಿಸಿ ವೇತನ ಹೆಚ್ಚಳ ಮಾಡಿದೆ ಇದನ್ನು ಅರಿತುಕೊಂಡು ಇಚ್ಛಾಶಕ್ತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರು ಮಕ್ಕಳ ದಾಖಲಾತಿಯನ್ನು ಹೆಚ್ಚಿಸಬೇಕು ಎಂದರು.
ಶಿಕ್ಷಕರ ಕಲ್ಯಾಣ ಕಾರ್ಯಕ್ರಮಗಳ ಅನುಕೂಲಕ್ಕಾಗಿ ಪಟ್ಟಣದ ಮಾರುತಿ ಬಡಾವಣೆಯಲ್ಲಿ ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದ ಗುರುಭವನ ಕಾಮಗಾರಿ ಪ್ರಾರಂಭಿಸಲಾಗಿದ್ದು, ೫ ಕೋಟಿ ರೂಗಳ ವೆಚ್ಚದಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಶಿಕ್ಷಕರಿಗೆ ಅಭಿನಂದನೆ
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಅಭಿನಂದಿಸಲಾಯಿತು. ತಾಪಂ ಇಒ ಅಧಿಕಾರಿ ವಿ ಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಮುನೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಷಣ್ಮುಖಯ್ಯ, ಓಸಾಟ್ ಸಂಸ್ಥೆಯ ಈರಣ್ಣ ಗೌಡ, ಮುಖ್ಯಾಧಿಕಾರಿ ನವೀನ್ ಚಂದ್ರ, ಕ್ಷೇತ್ರ ಸಮನ್ವಯ ಅಧಿಕಾರಿ ಟಿ ವೆಂಕಟಸ್ವಾಮಿ, ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಸುರೇಶ್, ನಿರ್ದೇಶಕರಾದ ಎಂಜಿ ನಾಗರಾಜ್, ಇನ್ನಿತರರು ಹಾಜರಿದ್ದರು.