ಬಸ್‌ ಪ್ರಯಾಣ ದರ ಹೆಚ್ಚಳ ಅನಿವಾರ್ಯ: ರಾಮಲಿಂಗಾರೆಡ್ಡಿ

| Published : Jun 20 2024, 01:05 AM IST / Updated: Jun 20 2024, 11:33 AM IST

KSRTC Bus
ಬಸ್‌ ಪ್ರಯಾಣ ದರ ಹೆಚ್ಚಳ ಅನಿವಾರ್ಯ: ರಾಮಲಿಂಗಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಡೀಸೆಲ್‌ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಮೇಲಿನ ಹೊರೆ ಹೆಚ್ಚಾಗಿದ್ದು, ದರ ಹೆಚ್ಚಳ ಅನಿವಾರ್ಯವಾಗಿದೆ. ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ತಿಳಿಸದರು.

 ಬೆಂಗಳೂರು :  ಡೀಸೆಲ್‌ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಮೇಲಿನ ಹೊರೆ ಹೆಚ್ಚಾಗಿದ್ದು, ದರ ಹೆಚ್ಚಳ ಅನಿವಾರ್ಯವಾಗಿದೆ. ದರ ಹೆಚ್ಚಿಸುವ ಕುರಿತಂತೆ ನಿಗಮದಿಂದ ಈವರೆಗೆ ಯಾವುದೇ ಪ್ರಸ್ತಾವನೆ ಸಲ್ಲಿಕೆಯಾಗಿಲ್ಲ. ಪ್ರಸ್ತಾವನೆ ಬಂದರೆ ಪರಿಶೀಲಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಎಂಟಿಸಿಯಲ್ಲಿ 2014ರ ನಂತರ ಪ್ರಯಾಣ ದರ ಹೆಚ್ಚಳ ಮಾಡಿಲ್ಲ. ಅದೇ ರೀತಿ ಕೆಎಸ್ಸಾರ್ಟಿಸಿ, ವಾಯುವ್ಯ ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳಲ್ಲಿ 2020ರ ನಂತರ ಪ್ರಯಾಣ ದರ ಹೆಚ್ಚಿಸಿಲ್ಲ. ಈ ನಡುವೆ ಡೀಸೆಲ್‌, ಬಸ್‌ಗಳ ಬಿಡಿಭಾಗಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. 

ಸಿಬ್ಬಂದಿಗಳ ವೇತನ ವೆಚ್ಚವೂ ಹೆಚ್ಚಾಗಿದೆ. ಹಾಗಾಗಿ ಪ್ರಯಾಣ ದರ ಹೆಚ್ಚಳದ ಅನಿವಾರ್ಯತೆ ಎದುರಾಗಿದೆ ಎಂದರು.ಪ್ರಯಾಣ ದರ ಹೆಚ್ಚಳ ಎನ್ನುವುದು ರಾಜಕೀಯ ವಿಷಯವಾಗುತ್ತಿರುವ ಕಾರಣ, ಆ ಬಗ್ಗೆಯೂ ಚಿಂತನೆ ನಡೆಸಬೇಕಿದೆ. ಒಂದು ವೇಳೆ ಪ್ರಯಾಣ ದರ ಹೆಚ್ಚಳವಾಗದಿದ್ದರೆ ರಾಜ್ಯ ಸರ್ಕಾರ ವಿಶೇಷ ಅನುದಾನ ನೀಡಬೇಕಾಗುತ್ತದೆ. ಈ ಬಗ್ಗೆ ಶೀಘ್ರದಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು. ಅದಕ್ಕೂ ಮುನ್ನ ಕಳೆದ ವರ್ಷ ‘ಶಕ್ತಿ’ ಯೋಜನೆ ಸಂಬಂಧ ಬಾಕಿ ಇರುವ ಇನ್ನೂ 1,100 ಕೋಟಿ ರು.ಗಳನ್ನು ಕೊಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ. ಸರ್ಕಾರ ನಿಗಮಗಳ ನೆರವಿಗೆ ಬರದಿದ್ದರೆ ಪ್ರಯಾಣ ದರ ಏರಿಕೆ ಮಾಡಬೇಕಾಗುವ ಪರಿಸ್ಥಿತಿಯಿದೆ ಎಂದರು.

ಪ್ರಸ್ತಾವನೆ ಬಂದರೆ ಕ್ರಮ:ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಪ್ರಯಾಣದರ ಏರಿಕೆ ಕುರಿತಂತೆ ಪ್ರಸ್ತಾವನೆ ಸಲ್ಲಿಸಿಲ್ಲ. ಮಂಡಳಿಗಳು ಪ್ರಸ್ತಾವನೆ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಮಂಡಳಿಗಳು ಶೇ. 25ರಿಂದ 30ರಷ್ಟು ಪ್ರಯಾಣ ದರ ಏರಿಕೆಯ ಪ್ರಸ್ತಾವನೆ ಸಲ್ಲಿಸಿದರೂ,ಅಷ್ಟು ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ನಿಗಮಗಳಿಂದ ಪ್ರಯಾಣ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಿದರೆ ರಾಜ್ಯ ಸರ್ಕಾರ ಅದನ್ನು ಒಪ್ಪುವ ಸಾಧ್ಯತೆಗಳಿವೆ ಎಂದು ತಿಳಿಸಿತ್ತು. ಡೀಸೆಲ್‌ ಬೆಲೆ ಹೆಚ್ಚಳದಿಂದಾಗಿ ನಿಗಮಗಳಿಗೆ ಪ್ರತಿದಿನ 40 ಲಕ್ಷ ರು.ಹೆಚ್ಚುವರಿ ವೆಚ್ಚವಾಗುತ್ತಿದೆ. ಈಗಾಗಲೇ 5 ಸಾವಿರ ಕೋಟಿ ರು.ಗೂ ಹೆಚ್ಚಿನ ಹೊಣೆಗಾರಿಕೆಯನ್ನು ಹೊಂದಿರುವ ಸಾರಿಗೆ ನಿಗಮಗಳು ಡೀಸೆಲ್‌ ದರ ಏರಿಕೆಯಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿವೆ.