ಸರ್ಕಾರ ರಾತ್ರಿ ಹೊತ್ತು ವಿದ್ಯತ್ ನೀಡುವುದರಿಂದ ರೈತರು ತಮ್ಮ ಜೀವ ಕೈಯಲ್ಲಿ ಹಿಡಿದು ಜಮೀನಿಗೆ ನೀರು ಹರಿಸಲು ಹೋಗಬೇಕಾಗಿದೆ. ಬದಲಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಲಭ್ಯವಾದರೆ ಚಿರತೆಯ ಭೀತಿಯಿಂದ ಸ್ವಲ್ಪ ನಿರಾಳವಾಗಬಹುದು. ಆದರೆ ಬೆಸ್ಕಾಂ ಸ್ಪಂದಿಸುತ್ತಿಲ್ಲ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಎಲ್ಲೆಡೆ ಚಿರತೆಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ವಿದ್ಯುತ್ ನೀಡದಂತೆ ರೈತರು ತಮ್ಮ ಬೇಸಾಯಕ್ಕಾಗಿ ಜಮೀನುಗಳಿಗೆ ಹಗಲು ಸಮಯದಲ್ಲಿ ವಿದ್ಯುತ್ ಪೂರೈಕೆ ಮಾಡುವಂತೆ ಸೆಸ್ಕ್ ಅಧಿಕಾರಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸೂಚನೆ ನೀಡಿದರು.ತಾಲೂಕಿನ ದೊಡ್ಡಬ್ಯಾಡರಹಳ್ಳಿ ಗ್ರಾಪಂನಲ್ಲಿ ನಡೆಯುತ್ತಿರುವ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ರೈತರು ಶಾಸಕ ಬಳಿ ಮನವಿ ಮಾಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ದೊಡ್ಡಬ್ಯಾಡರನಹಳ್ಳಿ ಡೇರಿ ಅಧ್ಯಕ್ಷ ಚಂದ್ರು ಅವರು ಕಳೆದ ಹಲವು ವರ್ಷಗಳಿಂದ ನಾವು ಚಿರತೆ ಹಾವಳಿ ಸಮಸ್ಯೆ ಎದುರಿಸುತ್ತಿದ್ದೇವೆ. ಅರಣ್ಯ ಇಲಾಖೆ ಸಿಬ್ಬಂದಿ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ. 800 ಎಕರೆಗೂ ಹೆಚ್ಚಿನ ವ್ಯಾಪ್ತಿಯ ಕಾಡಿರುವ ಪ್ರದೇಶವಿದೆ ಎಂದರು.ಈ ಕಾಡಿಗೆ ಅಂಟಿಕೊಂಡಂತೆ ಗ್ರಾಮಗಳಿವೆ. ಚಿರತೆಗಳು ಪದೆಪದೇ ಕಾಣಿಸಿಕೊಳ್ಳುತ್ತಿವೆ. ಅರಣ್ಯ ಇಲಾಖೆ ಚಿರತೆಗಳನ್ನು ಸೆರೆ ಹಿಡಿದು ಕಾಡಿಗೆ ಬಿಡುತ್ತವೆ ಎಂಬುದಾಗಿ ಹೇಳುತ್ತಾರೆ. ಆದರೆ, ಆ ಚಿರತೆಗಳು ಮತ್ತೆ ಊರುಗಳಿಗೆ ಬಂದು ಪ್ರಾಣಿಗಳ ಮೇಲೆ ದಾಳಿ ನಡೆಸುತ್ತಿವೆ ಎಂದು ಸಮಸ್ಯೆಯನ್ನು ವಿವರಿಸಿದರು.
ಸರ್ಕಾರ ರಾತ್ರಿ ಹೊತ್ತು ವಿದ್ಯತ್ ನೀಡುವುದರಿಂದ ರೈತರು ತಮ್ಮ ಜೀವ ಕೈಯಲ್ಲಿ ಹಿಡಿದು ಜಮೀನಿಗೆ ನೀರು ಹರಿಸಲು ಹೋಗಬೇಕಾಗಿದೆ. ಬದಲಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಲಭ್ಯವಾದರೆ ಚಿರತೆಯ ಭೀತಿಯಿಂದ ಸ್ವಲ್ಪ ನಿರಾಳವಾಗಬಹುದು. ಆದರೆ ಬೆಸ್ಕಾಂ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು.ಎಚ್.ಡಿ.ಕೋಟೆಯಲ್ಲಿ ಹುಲಿ ದಾಳಿಯ ಹಿನ್ನೆಲೆಯಲ್ಲಿ ಸರ್ಕಾರ ಹಗಲು ಹೊತ್ತು ವಿದ್ಯುತ್ ಪೂರೈಸುವುದಕ್ಕೆ ಕ್ರಮಕೈಗೊಂಡಿತು. ಅದೇ ರೀತಿಯಲ್ಲಿ ನಮ್ಮ ಭಾಗದಲ್ಲೂ ಕ್ರಮಕೈಗೊಂಡರೆ, ರೈತರಿಗೆ ಅನುಕೂಲವಾಗುವುದು’ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸ್ಥಳದಲ್ಲಿ ಇದ್ದ ವಿದ್ಯುತ್ ಇಲಾಖೆಯ ಪಾಂಡವಪುರ ಇಇ ವಿನುತಾ, ಎಇಇ ರವೀಂದ್ರಕುಮಾರ್ ಹಾಗೂ ಎಇ ಸುಷ್ಮಾ ಅವರು ರೈತರಿಂದ ಮಾಹಿತಿಪಡೆದು ಅಗತ್ಯ ಕ್ರಮಕೈಗೊಳ್ಳುವುದಾಗಿ, ಶಾಸಕರಿಗೆ ಹಾಗೂ ಗ್ರಾಮಸ್ಥರಿಗೆ ಭರವಸೆ ನೀಡಿದರು.