ಸಾರಾಂಶ
ಬೆಂಗಳೂರು : ರಾಜಧಾನಿಯಲ್ಲಿ ಅಪರಾಧ ನಿಯಂತ್ರಣಕ್ಕಾಗಿ ರಾತ್ರಿ ಗಸ್ತು ಹೆಚ್ಚಳ ಮಾಡುವುದಾಗಿ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಮಾಸಿಕ ಜನಸಂಪರ್ಕ ದಿವಸ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸ್ಥಳೀಯ ಸಮಸ್ಯೆಗಳು, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರ ದಟ್ಟಣೆ ಸಮಸ್ಯೆ ಸೇರಿದಂತೆ ನಾನಾ ವಿಚಾರಗಳಿಗೆ ಸಂಬಂಧಿಸಿದ ಅಹವಾಲುಗಳನ್ನು ಆಲಿಸಿ ಮಾತನಾಡಿದರು.
ವಸಂತನಗರ ಪ್ರದೇಶದಲ್ಲಿ ಮಹಿಳಾ ಪೇಯಿಂಗ್ ಗೆಸ್ಟ್‌ಗಳು (ಪಿಜಿ) ಹೆಚ್ಚಾಗಿವೆ. ಕೆಲಸ ಮುಗಿಸಿ ತಡರಾತ್ರಿ ಪಿಜಿಗೆ ಬರುವ ಮಹಿಳೆಯರನ್ನು ಕೆಲ ಯುವಕರು ಚುಡಾಯಿಸಿ ತೊಂದರೆ ನೀಡುತ್ತಾರೆ. ಹೀಗಾಗಿ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾ ಅಳಡಿಸಬೇಕು. ಪೊಲೀಸರ ರಾತ್ರಿ ಗಸ್ತು ಹೆಚ್ಚಿಸಬೇಕು. ವೈಯಾಲಿಕಾವಲ್‌ನಲ್ಲಿ ಕೆಲ ಪುಂಡರು ರಾತ್ರಿ ವೇಳೆ ವಿನಾಕಾರಣ ಸಾರ್ವಜನಿಕರಿಗೆ ತೊಂದರೆ ನೀಡುತ್ತಾರೆ. ಅಂಗಡಿ-ಮುಂಗಟ್ಟುಗಳ ಎದುರು ನಿಂತು ಅಸಭ್ಯವಾಗಿ ವರ್ತಿಸುತ್ತಾರೆ. ಇದಕ್ಕೆಲ್ಲಾ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ದಯಾನಂದ, ಅಪರಾಧ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ರಾತ್ರಿ ಗಸ್ತು ಹೆಚ್ಚಳ, ಜತೆಗೆ ಅಗತ್ಯವಿರುವ ಕಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುವುದು. ಈ ಸಂಬಂಧ ಶೀಘ್ರದಲ್ಲೇ ಸ್ಥಳಗಳನ್ನು ಗುರುತಿಸಿ ಹೆಚ್ಚುವರಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದಾಗಿ ಹೇಳಿದರು.
ಸಂಚಾರ ಸಮಸ್ಯೆ ಬಗ್ಗೆ ದೂರು: ಪ್ಯಾಲೆಸ್ ಗುಟ್ಟಹಳ್ಳಿಯ ವಿನಾಯಕ ಸರ್ಕಲ್‌ನ ಎರಡೂ ಕಡೆಗಳಲ್ಲಿ ವಾಹನಗಳನ್ನು ನಿಲುಗಡೆ ಮಾಡುವುದರಿಂದ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಸ್ತೆ ಬದಿ ಅಳವಡಿಸಿರುವ ವಿದ್ಯುತ್ ಬೀದಿ ದೀಪಗಳು ಕೆಟ್ಟಿವೆ. ಹೀಗಾಗಿ ರಾತ್ರಿ ವೇಳೆ ಓಡಾಡಲು ಮಸ್ದ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ಆಯುಕ್ತರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಸಂಚಾರ ಸಮಸ್ಯೆ ಬಗ್ಗೆ ಗಮನಹರಿಸುವಂತೆ ಸಂಚಾರ ವಿಭಾಗದ ಡಿಸಿಪಿಗೆ ಸೂಚಿಸಿದರು. ಇನ್ನು ಬೀದಿ ದೀಪಗಳ ಸಂಬಂಧ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಕೇಂದ್ರ ವಿಭಾಗದ ಡಿಸಿಪಿ ಎಚ್. ಶೇಖರ್, ಸಂಚಾರ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರ್ ಸೇರಿದಂತೆ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.