ಮುರುಡೇಶ್ವರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

| Published : May 21 2024, 12:30 AM IST

ಸಾರಾಂಶ

ಮುರುಡೇಶ್ವರ ವಿಶ್ವವಿಖ್ಯಾತ ಪ್ರವಾಸಿ ಕ್ಷೇತ್ರವಾಗಿದ್ದು, ಇಲ್ಲಿನ ಪ್ರಕೃತಿದತ್ತವಾದ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ.

ಭಟ್ಕಳ: ಬೇಸಿಗೆ ರಜೆ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದ್ದು, ದಿನದಿಂದ ದಿನಕ್ಕೆ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ.

ಮುರುಡೇಶ್ವರ ವಿಶ್ವವಿಖ್ಯಾತ ಪ್ರವಾಸಿ ಕ್ಷೇತ್ರವಾಗಿದ್ದು, ಇಲ್ಲಿನ ಪ್ರಕೃತಿದತ್ತವಾದ ಸೌಂದರ್ಯವನ್ನು ವೀಕ್ಷಿಸುವುದೇ ಒಂದು ಸುಂದರ ಅನುಭವ. ಈಶ್ವರನ ದೇವಸ್ಥಾನ, ಬೃಹದಾಕಾರದ ರಾಜಗೋಪುರ, ಬೃಹದಾಕಾರದ ಈಶ್ವರನ ಮೂರ್ತಿ, ಸುಂದರರಾಮೇಶ್ವರ ದೇವಸ್ಥಾನ, ಪಂಚ ಶಿವಕ್ಷೇತ್ರ ಆದ ಬಗ್ಗೆ ಈಶ್ವರನ ಬೃಹಾದಾಕಾರದ ಮೂರ್ತಿಯ ಕೆಳಭಾಗದ ಗುಹೆಯೊಳಗಿನ ಸುಂದರ ಚಿತ್ರಣ, ಶನೇಶ್ಚರ ದೇವಸ್ಥಾನ, ಸೂರ್ಯಾಸ್ತ ವೀಕ್ಷಣೆ, ಸುತ್ತಲೂ ಇರುವ ಸುಂದರ ಸಮುದ್ರ ಹೀಗೆ ಮುರುಡೇಶ್ವರದ ಸೊಬಗನ್ನು ವೀಕ್ಷಿಸಲು ಪ್ರವಾಸಿಗರ ದಂಡೇ ಇಲ್ಲಿಗೆ ಹರಿದು ಬರುತ್ತಿದೆ. ಸಮುದ್ರ ತೀರದಲ್ಲಂತೂ ಕಿಕ್ಕಿರಿದು ಪ್ರವಾಸಿಗರು ಸೇರುತ್ತಿದ್ದು, ಸಮುದ್ರದ ನೀರನ್ನು ನೋಡಿ ಈಜುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ಆಳ ಸಮುದ್ರಕ್ಕೆ ಹೋಗುವುದು ಅಪಾಯ ಎಂದು ಎಚ್ಚರಿಕೆ ನೀಡಿದರೂ ಕೆಲ ಪ್ರವಾಸಿಗರು ಇದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಮುರುಡೇಶ್ವರದ ಸಮುದ್ರದಲ್ಲಿ ಸ್ಪೀಡ್ ಬೋಟಿಂಗ್, ಸೀ ವಾಕ್ ಮುಂತಾದ ಜಲ ಕ್ರೀಡೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮುರುಡೇಶ್ವರಕ್ಕೆ ಬಂದವರು ಮಗದೊಮ್ಮೆ ಬರಬೇಕು ಎನ್ನುವ ಆಶಯ ಇಟ್ಟುಕೊಂಡೇ ಹೋಗತ್ತಿರುವುದು ವಿಶೇಷ.

ಮುರುಡೇಶ್ವರಕ್ಕೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೆಲದಿನಗಳಿಂದ ಪಾರ್ಕಿಂಗ್, ಸುಗಮ ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ. ಕಳೆದ ಕೆಲ ದಿನಗಳಿಂದ ಸ್ಥಳೀಯ ಪೊಲೀಸರಿಗೆ ವಾಹನ ದಟ್ಟಣೆ ಸುಧಾರಿಸಿ ಸುಗಮ ಸಂಚಾರದ ವ್ಯವಸ್ಥೆ ಮಾಡಿಕೊಡುವುದೇ ಕಾಯಕವಾಗಿದೆ. ದೇವಸ್ಥಾನದಲ್ಲಿ ಭಕ್ತರಿಗೆ ತ್ವರಿತ ದೇವರ ದರ್ಶನ, ಪೂಜೆ ಮುಂತಾದವುಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿದೆ. ಮುರುಡೇಶ್ವರದ ಪ್ರಸಿದ್ಧಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ. ಮುರುಡೇಶ್ವರ ವೇಗವಾಗಿ ಬೆಳೆಯುತ್ತಿರುವುದರಿಂದ ಮತ್ತು ಇಲ್ಲಿ ಮತ್ತಷ್ಟು ಪ್ರವಾಸೋದ್ಯಮಕ್ಕೆ ಅವಕಾಶ ಇರುವುದರಿಂದ ಸರ್ಕಾರ ಗಮನ ಹರಿಸಬೇಕೆಂಬ ಆಗ್ರಹ ಕೇಳಿ ಬಂದಿದೆ.