ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಪೋಷಕರು ಕಲಿಸಿದ ಸಂಸ್ಕಾರವೇ ಮಕ್ಕಳು ಉನ್ನತ ಸ್ಥಾನಕ್ಕೇರಲು ಕಾರಣ. ಸಂಸ್ಕಾರ ಮರೆತ ಮಕ್ಕಳಿಂದ ಇಂದು ವೃದ್ದಾಶ್ರಮಗಳು ಹೆಚ್ಚಾಗಲು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಎನ್ ರವೀಂದ್ರ ಅಭಿಪ್ರಾಯ ಪಟ್ಟರು.ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪೋಷಕರಿಗೆ ಮಕ್ಕಳೇ ಸರ್ವಸ್ವತಾಯಿ-ತಂದೆಗಳಿಗೆ ತಮ್ಮ ಮಕ್ಕಳೇ ಸರ್ವಸ್ವ ವಾಗಿರುತ್ತಾರೆ. ಅದೇ ರೀತಿ ಮಕ್ಕಳು ಸಹಾ ತಾಯಿ-ತಂದೆಯೇ ನಮ್ಮ ಸರ್ವಸ್ವ ಎಂದು ಎಲ್ಲರೂ ಭಾವಿಸಿದರೆ ಶಾಂತಿಯುತ ಮತ್ತು ನೆಮ್ಮದಿಯುತ ಸಮಾಜವು ನಿರ್ಮಾಣವಾಗುತ್ತದೆ. ಹಿರಿಯ ನಾಗರೀಕರನ್ನು ಗೌರವಯುತವಾಗಿ ನಡೆಸಿಕೊಂಡಾಗ ಮಾತ್ರ ಅಂತಹ ಸಮಾಜ ಪರಿಪೂರ್ಣ ಸಮಾಜವಾಗುತ್ತದೆ. ಆಧುನಿಕತೆಯ ಜೀವನ ಶೈಲಿ ಕುಟುಂಬಗಳು ಮತ್ತು ಸಂಬಂಧಗಳ ನಡುವೆ ಬಿರುಕುಂಟು ಮಾಡುತ್ತಿದೆ. ತಂದೆತಾಯಿಗಳಿಂದ ಪಡೆದದ್ದನ್ನು ಅವರ ಸಂಧ್ಯಾಕಾಲದಲ್ಲಿ ವಾಪಸ್ ನೀಡುವ ಕೆಲಸವನ್ನು ಮಕ್ಕಳು ಮಾಡಬೇಕು ಎಂದು ತಿಳಿಸಿದರು.
ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ .ಹಿರಿಯರ ಬದುಕು ಕೇವಲ ಆದರ್ಶವಾಗಿಸದೇ, ಸಮಾಜಮುಖಿಯಾಗಿ ಕೆಲಸ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ.ಈ ಬಾರಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯನ್ನು, ‘ಘನತೆಯ ಬಾಳಿನೊಂದಿಗೆ ವಯೋಪಕ್ವತೆ: ವಿಶ್ವದಾದ್ಯಂತ ಹಿರಿಯ ಜೀವಿಗಳಿಗೆ ಆರೈಕೆ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸದೃಢಗೊಳಿಸುವುದರ ಮಹತ್ವ’ಎಂಬ ವಿಶ್ವಸಂಸ್ಥೆಯ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.ಹಿರಿಯರ ಅನುಭವ ದಾರಿದೀಪಬಾಲ್ಯ , ಯೌವ್ವನ, ವೃದ್ಧಾಪ್ಯ, ಮಾನವನ ಜೀವನದ ಸಹಜ ಘಟ್ಟಗಳು. ಹಿರಿಯ ನಾಗರಿಕರ ಸಾಧನೆಗಳು ಯುವಜನರಿಗೆ ಸ್ಪೂರ್ತಿ ನೀಡಲೆಂಬ ಸದುದ್ಧೇಶದಿಂದ ಹಿರಿಯ ನಾಗರಿಕನ್ನು ಗೌರವಿಸಿ ಸನ್ಮಾನಿಸಲಾಗುತ್ತದೆ. ನಮ್ಮ ಆತ್ಮಸಾಕ್ಷಿಯೇ ನ್ಯಾಯಾಲಯವಿದ್ದಂತೆ ಎಂದು ಮಹಾತ್ಮಾಗಾಂಧೀಜಿಯವರು ಹೇಳಿದ್ದರು. ಸಮಾಜದಲ್ಲಿ ಇಂದೂ ಮೌಢ್ಯಗಳು, ಕಂದಾಚಾರಗಳಿವೆ. ಇವುಗಳಿಗೆ ಜೋತುಬೀಳದೇ ವೈಚಾರಿಕತೆಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದರು.
ಮಕ್ಕಳು ತಂದೆ, ತಾಯಿಯನ್ನು ಸರಿಯಾಗಿ ಪಾಲನೆ ಪೋಷಣೆ ಮಾಡದೆ ನಿರ್ಲಕ್ಷವಹಿಸಿದರೆ, ಅಂತಹ ಹಿರಿಯ ನಾಗರಿಕರು ಉಪ ವಿಭಾಗಾಧಿಕಾರಿಗೆ ಲಿಖಿತ ದೂರು ನೀಡಿದರೆ ತಮ್ಮ ಮಕ್ಕಳಿಗೆ ನೊಂದಣಿ ಮಾಡಿಕೊಟ್ಟಿರುವ ಹಿಂದಿನ ಆಸ್ತಿ ಪತ್ರಗಳು ರದ್ದಾಗಿ ತಮ್ಮ ಹೆಸರಿಗೆ ಆಸ್ತಿಯನ್ನು ಹಿಂಪಡೆಯಲು ಅವಕಾಶವಿದೆ. ಅಲ್ಲದೆ ಪ್ರತಿ ತಿಂಗಳ ಜೀವನ ನಿರ್ವಹಣೆಗಾಗಿ ಜೀವನಾಂಶವನ್ನು ಪಡೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ ಎಂದರು.ಸರ್ಕಾರಿ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಿ
ಅಂಕಿ ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 147263 ಹಿರಿಯ ನಾಗರೀಕರಿದ್ದು, ಅವರಲ್ಲಿ 57830 ಮಂದಿ ಗುರುತಿನ ಚೀಟಿ ಪಡೆದಿದ್ದಾರೆ. ಸಂಧ್ಯಾ ಸುರಕ್ಷತಾ ಯೋಜನೆಯಲ್ಲಿ 85985 ಜನ ಪಲಾನುಭವಿಗಳು, ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನವನ್ನು 23647 ಜನ ಫಲಾನುಭವಿಗಳು ಪಡೆಯುತ್ತಿದ್ದಾರೆ. ಅರ್ಹರು ಯಾರಿಗಾದರೂ ಸರ್ಕಾರದ ಯೋಜನೆಗಳು ದೊರೆಯದಿದ್ದರೆ ಅವರು ಅರ್ಜಿ ಸಲ್ಲಿಸಿದಲ್ಲಿ ಇಲಾಖೆ ಅವರಿಗೆ ಮಾಡಿ ಕೊಡಲು ಸಿದ್ದವಾಗಿದೆ ಎಂದು ತಿಳಿಸಿದರು.ಹಿರಿಯ ನಾಗರೀಕರಿಗೆ ನಡೆದ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ನೀಡಲಾಯಿತು. ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದಶಕ ವೆಂಕಟೇಶರೆಡ್ಡಿ, ಜಿ.ಪಂ.ಲೆಕ್ಕಾಧಿಕಾರಿ ಈಶ್ವರಪ್ಪ, ಸಿಡಿಪಿಓ ಗಂಗಾಧರ್,ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಬಿ.ವಿ.ಕೃಷ್ಣಪ್ಪ, ನಿವೃತ್ತ ಅಧಿಕಾರಿ ಶಾಂತರಸು, ಸಾಯಿ ಇಂಟರ್ನಾ ನ್ಯಾಷನಲ್ ಚಾರಿಟಬಲ್ ಟ್ರಸ್ಟ್ ನ ನಾರಾಯಣಮೂರ್ತಿ ದ್ವಾರಕಮಾಯಿ ವೃದ್ದಾಶ್ರಮದ ಮುರಳಿ ಮತ್ತಿತರರು ಇದ್ದರು.