ಸಾರಾಂಶ
ಬಾಲಕ ಬಾಲಕಿಯರ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮೈಸೂರು, ಬೆಂಗಳೂರು, ಬೆಳಗಾವಿ, ಮಂಡ್ಯ, ಪುತ್ತೂರು, ಹಾಸನ, ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ ಸೇರಿದಂತೆ ರಾಜ್ಯದಾದ್ಯಂತ ವಿವಿಧೆಡೆಯ 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸರ್ಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಏರಿಕೆ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದ್ದಾರೆ.ಮಂಗಳೂರು ಮಹಾನಗರ ಪಾಲಿಕೆ ಹಾಗೂ ವಿ ವನ್ ಅಕ್ವಾಟಿಕ್ ಕ್ಲಬ್ ಸಹಯೋಗದಲ್ಲಿ ಭಾನುವಾರ ನಗರದ ಎಮ್ಮೆಕೆರೆ ಅಂತಾರಾಷ್ಟ್ರೀಯ ಮಟ್ಟದ ಈಜುಕೊಳದಲ್ಲಿ ‘ಮೇಯರ್ ಕಪ್’ ರಾಜ್ಯ ಮಟ್ಟದ ಈಜು ಸ್ಪರ್ಧೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕರ್ನಾಟಕದ ಕ್ರೀಡಾಪಟುಗಳು ಅಧಿಕ ಸಂಖ್ಯೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಬೇಕು ಎಂಬ ಉದ್ದೇಶದಿಂದ ಮೀಸಲಾತಿ ಪ್ರಮಾಣವನ್ನು ಏರಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಮಾತನಾಡಿ, ಈ ರಾಜ್ಯ ಮಟ್ಟದ ಈಜು ಸ್ಪರ್ಧೆಯಿಂದ ಹೆಚ್ಚು ಯುವ ಆಟಗಾರರು ಮುನ್ನೆಲೆಗೆ ಬರಲು ಸಾಧ್ಯವಾಗಲಿದೆ ಎಂದರು.ಉದ್ಘಾಟನೆ ನೆರವೇರಿಸಿ ಮಾತನಾಡಿದ ಮೇಯರ್ ಮನೋಜ್ ಕುಮಾರ್, ಈಜು ಕ್ರೀಡೆಯಾಗಿ ಹೆಚ್ಚು ಜನಪ್ರಿಯವಾಗಿರುವ ಜತೆಗೆ ಮನುಷ್ಯನಿಗೆ ದೈಹಿಕ ಕ್ಷಮತೆ, ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಸಹಕಾರಿಯಾಗಲಿದೆ ಎಂದರು.ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಪಡೆದ ಶರತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಿ.ವೇದವ್ಯಾಸ ಕಾಮತ್, ವಿ ವನ್ ಅಕ್ವಾಟಿಕ್ ಕ್ಲಬ್ ಅಧ್ಯಕ್ಷ ಮಧುರಾಜ್, ನಿರ್ದೇಕರಾದ ನವೀನ್, ರೂಪಾ ಜಿ.ಪ್ರಭು, ತರಬೇತುದಾರ ಲೋಕರಾಜ ವಿಟ್ಲ ಇದ್ದರು.
ಬಾಲಕ ಬಾಲಕಿಯರ ಒಟ್ಟು 14 ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಮೈಸೂರು, ಬೆಂಗಳೂರು, ಬೆಳಗಾವಿ, ಮಂಡ್ಯ, ಪುತ್ತೂರು, ಹಾಸನ, ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ ಸೇರಿದಂತೆ ರಾಜ್ಯದಾದ್ಯಂತ ವಿವಿಧೆಡೆಯ 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದರು.