ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಹೆಚ್ಚಳ ಕಳವಳಕಾರಿ: ನ್ಯಾಯಾಧೀಶ ಶಿವನಗೌಡ್ರ

| Published : Sep 23 2025, 01:05 AM IST

ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಹೆಚ್ಚಳ ಕಳವಳಕಾರಿ: ನ್ಯಾಯಾಧೀಶ ಶಿವನಗೌಡ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿವರ್ಷ ವಿಶ್ವಾದ್ಯಂತ ಸೆ. 10ರಂದು ವಿಶ್ವ ಆತ್ಮಹತ್ಯೆ ತಡೆ ದಿನ 2003ರಿಂದ ಆಚರಿಸಲಾಗುತ್ತಿದೆ. ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯುವುದು ಈ ದಿನದ ಉದ್ದೇಶವಾಗಿದೆ.

ಗದಗ: ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚು ಕಂಡುಬರುತ್ತಿದ್ದು, ಅದರಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಲ್ಲಿ ಕಂಡುಬರುತ್ತಿರುವುದು ಕಳವಳಕಾರಿಯಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಸಿ.ಎಸ್. ಶಿವನಗೌಡ್ರ ತಿಳಿಸಿದರು.

ನಗರದ ಕೆಎಲ್‌ಇ ಸಂಸ್ಥೆಯ ಜ. ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಗದಗ ವೈದ್ಯಕೀಯ ಮಹಾವಿದ್ಯಾಲಯ- ಮನೋವೈದ್ಯಕೀಯ ವಿಭಾಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಯುವ ರೆಡ್‌ಕ್ರಾಸ್ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿವರ್ಷ ವಿಶ್ವಾದ್ಯಂತ ಸೆ. 10ರಂದು ವಿಶ್ವ ಆತ್ಮಹತ್ಯೆ ತಡೆ ದಿನ 2003ರಿಂದ ಆಚರಿಸಲಾಗುತ್ತಿದೆ. ಹೆಚ್ಚುತ್ತಿರುವ ಆತ್ಮಹತ್ಯೆಗಳನ್ನು ತಡೆಯುವುದು ಈ ದಿನದ ಉದ್ದೇಶವಾಗಿದೆ. ಜೀವನ ಅತ್ಯಮೂಲ್ಯ ಆದ್ದರಿಂದ ಆತ್ಮಹತ್ಯೆಯ ನಿರ್ಧಾರಕ್ಕೆ ಯಾರೂ ಬರಬೇಡಿ. ಆತ್ಮಹತ್ಯೆ ಆಲೋಚನೆಗಳು ಬಂದ ಸಮಯದಲ್ಲಿ ಚಿಕಿತ್ಸೆ ಹಾಗೂ ಆಪ್ತ ಸಮಾಲೋಚನೆಯ ಸೇವೆ ಪಡೆಯಿರಿ ಹಾಗೂ ಟೆಲಿ-ಮನಸ್ ಉಚಿತ ಸಹಾಯವಾಣಿ 14416ಕ್ಕೆ ಕರೆ ಮಾಡಿ ಸಹಾಯ ಪಡೆಯಿರಿ ಎಂದರು.

ಪ್ರಾಂಶುಪಾಲ ಪ್ರೊ. ಪಿ.ಜಿ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವನ ಅತ್ಯಮೂಲ್ಯ. ಎಲ್ಲ ಸಮಸ್ಯೆಗಳಿಗೆ ಸಾವು ಒಂದೇ ಪರಿಹಾರವಲ್ಲ. ಬದುಕಿನಲ್ಲಿ ಈಜಬೇಕು, ಇದ್ದು ಜಯಿಸಬೇಕು. ದೇಹ ಮತ್ತು ಮನಸ್ಸನ್ನು ಸದೃಢಗೊಳಿಸಿಕೊಂಡು ಆತ್ಮಹತ್ಯೆಯಂಥ ನಿರ್ಧಾರಗಳಿಂದ ದೂರವಿರಬೇಕು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೀತ ಖೋನಾ ಮಾತನಾಡಿ, ಪ್ರತಿ 40 ಸೆಕೆಂಡಿಗೆ 1 ಆತ್ಮಹತ್ಯೆ ಪ್ರಕರಣದಿಂದ ಸಾವು ಉಂಟಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಪ್ರತಿಯೊಬ್ಬ ವಿದ್ಯಾರ್ಥಿ ಯಾವುದೇ ಸಮಸ್ಯೆ ಬಂದರೂ ಆತ್ಮಹತ್ಯೆ ಆಲೋಚನೆಯನ್ನು ಮಾಡಬಾರದು. ಆತ್ಮಹತ್ಯೆ ತಡೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಮಾತನಾಡಿದರು. ಅಧ್ಯಕ್ಷತೆಯನ್ನು ಈಶಣ್ಣಾ ಮುನವಳ್ಳಿ ವಹಿಸಿದ್ದರು. ಈ ವೇಳೆ ರೂಪಸೇನ ಚವಾಣ, ಪುಷ್ಪಾ ಪಾಟೀಲ, ರಾಜೇಂದ್ರ ಗಡಾದ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು. ಮಂಗಳಾ ಬಡಿಗೇರ ಪ್ರಾರ್ಥಿಸಿದರು. ಉಪನ್ಯಾಸಕಿ ರಾಜೇಶ್ವರಿ ಪಾಟೀಲ ನಿರೂಪಿಸಿದರು. ಡಾ. ನಾಗರಾಜ ಓಬಯ್ಯ ವಂದಿಸಿದರು.