ಪ್ರತಿ ಕೃಷಿ ಚಟುವಟಿಕೆಗಳಿಗೆ ರೈತರು ಮುಖ್ಯವಾಗಿ ಯಂತ್ರಗಳ ಬಳಕೆ ಮಾಡಿಕೊಳ್ಳುತ್ತಿದ್ದರೂ ಇದರ ನಡುವೆ ದನಗಳ ಜಾತ್ರೆಯಲ್ಲಿ ರೈತರು ಸಾಕಿದ ದನಗಳ ಸಮೇತ ಭಾಗವಹಿಸಿ ಜಾತ್ರೆಗೆ ಮೆರಗು ತಂದಿರುವುದು ಖುಷಿ ವಿಚಾರ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪ್ರಸ್ತುತ ರೈತಾಪಿ ಜನರು ಕೃಷಿ ಚಟುವಟಿಕೆಗಳಿಗೆ ಯಂತ್ರಗಳ ಬಳಕೆ ಹೆಚ್ಚಾದ ರಾಸುಗಳ ಬಳಕೆ ಕಡಿಮೆಯಾಗಿದ್ದು, ಇದರಿಂದ ಜಾನುವಾರುಗಳನ್ನು ಸಾಕುವವರ ಸಂಖ್ಯೆ ಇಳಿಕೆಯಾಗುತ್ತಿದೆ ಎಂದು ಸೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಬೇಸರ ವ್ಯಕ್ತಪಡಿಸಿದರು.

ಕೆಆರ್‌ಎಸ್ ರೈಲ್ವೇ ನಿಲ್ದಾಣದ ಬಳಿ ಇರುವ ಉಪ್ಪರಿಕೆ ಬಸವೇಶ್ವರ ದನಗಳ ಜಾತ್ರೆ ವೇಳೆ ಮಾತನಾಡಿ, ಪ್ರತಿ ಕೃಷಿ ಚಟುವಟಿಕೆಗಳಿಗೆ ರೈತರು ಮುಖ್ಯವಾಗಿ ಯಂತ್ರಗಳ ಬಳಕೆ ಮಾಡಿಕೊಳ್ಳುತ್ತಿದ್ದರೂ ಇದರ ನಡುವೆ ದನಗಳ ಜಾತ್ರೆಯಲ್ಲಿ ರೈತರು ಸಾಕಿದ ದನಗಳ ಸಮೇತ ಭಾಗವಹಿಸಿ ಜಾತ್ರೆಗೆ ಮೆರಗು ತಂದಿರುವುದು ಖುಷಿ ವಿಚಾರ ಎಂದರು.

ನಾನು ಶಾಸಕನಾಗುವುದಕ್ಕೂ ಮುಂಚೆ ದನಗಳನ್ನು ಸಾಕಾಣಿಕೆ ಮಾಡುತ್ತಿದ್ದು, ದನಗಳ ಜಾತ್ರೆ ನಡೆಯುವ ಕಡೆಯಲ್ಲ ನನ್ನ ಹಿರಿಯರು ಮತ್ತು ಸ್ನೇಹಿತರ ಜೊತೆ ಚೇತಕ್ ಸ್ಕೂಟರ್‌ನಲ್ಲಿ ಓಡಾಟ ನಡೆಸಿ ವ್ಯಾಪಾರ ಮಾಡಿಕೊಂಡು ಮನೆಗೆ ದನಗಳ ತರುತ್ತಿದ್ದೆ ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದರು.

ನಂತರ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೆಗೌಡ ಜಾತ್ರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಈ ಜಾತ್ರೆ ಮಂಡ್ಯ ಮತ್ತು ಮೈಸೂರು ಗಡಿಭಾಗದಲ್ಲಿ ನಡೆಯುತ್ತಿದೆ. ಎರಡು ಜಿಲ್ಲೆಗಳ ರೈತರ ಆತ್ಮೀಯತೆ ಹೊಂದಿದೆ. ಸುತ್ತಮುತ್ತಲಿನ ಗ್ರಾಮಗಳ ದೇವರು ಈ ಉಪ್ಪರಿಕೆ ಬಸವೇಶ್ವರವಾಗಿದೆ ಎಂದರು.

ಪ್ರಸ್ತುತ ರೈತರು ಕೃಷಿ ಚಟುವಟಿಕೆಗಳನ್ನು ಬಿಟ್ಟು ಕಾರ್ಖಾನೆಗಳತ್ತ ಮುಖ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿಂದೆ ಕೊಟ್ಟಿಗೆ ಇಲ್ಲದೆ ಮನೆ ಇರುತ್ತಿರಲಿಲ್ಲ. ಹಳ್ಳಿಗಳಲ್ಲಿಯೂ ಕೂಡ ಈಗ ಜಾನುವಾರು ಸಾಕಾಣೆ ಕಡಿಮೆಯಾಗ ತೊಡಗಿವೆ. ಕಡಿಮೆ ಬೆಲೆಗೆ ಸಿಗುತ್ತಿದ್ದ ದನಗಳು ಈಗ ಲಕ್ಷಾಂತರ ರುಗಳಿಗೆ ಏರಿಕೆಯಾಗಿದೆ ಎಂದರು.