ಬಯಲುಸೀಮೆ ಜೀವನಾಡಿ ಮದಗದಕೆರೆ ನೀರಿನ ಹರಿವು ಹೆಚ್ಚಳ

| Published : Jul 04 2025, 11:50 PM IST

ಬಯಲುಸೀಮೆ ಜೀವನಾಡಿ ಮದಗದಕೆರೆ ನೀರಿನ ಹರಿವು ಹೆಚ್ಚಳ
Share this Article
  • FB
  • TW
  • Linkdin
  • Email

ಸಾರಾಂಶ

ಬೀರೂರುತರೀಕೆರೆ ಭಾಗದ ಸಂತವೇರಿ, ಹೊಸಪೇಟೆ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಹ ಉತ್ತಮ ಮಳೆಯಾಗಿದೆ. ಇದರಿಂದ ಬಯಲುಸೀಮೆ ಜೀವನಾಡಿ ಮದಗದಕೆರೆಗೆ ನೀರಿನ ಹರಿವು ಹೆಚ್ಚಳವಾಗಿದೆ.

ಕನ್ನಡಪ್ರಭ ವಾರ್ತೆ, ಬೀರೂರು

ತರೀಕೆರೆ ಭಾಗದ ಸಂತವೇರಿ, ಹೊಸಪೇಟೆ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ಸಹ ಉತ್ತಮ ಮಳೆಯಾಗಿದೆ. ಇದರಿಂದ ಬಯಲುಸೀಮೆ ಜೀವನಾಡಿ ಮದಗದಕೆರೆಗೆ ನೀರಿನ ಹರಿವು ಹೆಚ್ಚಳವಾಗಿದೆ.ಬಯಲುಸೀಮೆಯ 30ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸುವ ಮದಗದಕೆರೆಯಲ್ಲಿ ಶುಕ್ರವಾರ ಮಧ್ಯಾಹ್ನದವರೆಗೆ 36 ಅಡಿವರೆಗೆ ನೀರು ಸಂಗ್ರಹವಾಗಿದೆ. ಕೆಲವು ದಿನಗಳ ಹಿಂದೆ ದುರಸ್ತಿ ಸಲುವಾಗಿ ಕೆರೆ ತೂಬು ಎತ್ತಿದ್ದ ಪರಿಣಾಮ ಕಡೂರು ಹೊರವಲಯದ ಚಿಕ್ಕಂಗಳ ಕೆರೆ, ಬುಕ್ಕಸಾಗರ ಕೆರೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಇದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ.ಮದಗದಕೆರೆ ಮೈದುಂಬಿಕೊಂಡರೆ ಅಂತರ್ಜಲ ವೃದ್ಧಿ, ತೋಟಗಾರಿಕೆ ಬೆಳೆಗಳಾದ ತೆಂಗು, ಅಡಕೆ, ಸಾಂಪ್ರದಾಯಿಕ ಬೆಳೆ ಗಳಾದ ರಾಗಿ, ಭತ್ತ, ಕಬ್ಬು, ಜೋಳ, ಆಲೂಗೆಡ್ಡೆ, ತರಕಾರಿ ಬೆಳೆಗೆ ಅನುಕೂಲವಾಗುತ್ತದೆ. 64 ಅಡಿ ಸಾಮರ್ಥ್ಯದ ಈ ಕೆರೆ, ಸಾಮಾನ್ಯವಾಗಿ ಜುಲೈ ಕಡೆ ಭಾಗ ಅಥವಾ ಮಧ್ಯಭಾಗದಲ್ಲಿ ತುಂಬಿ ನಂತರ ತನ್ನ ಸರಣಿ ಕೆರೆಗಳಿಗೂ ನೀರು ಹಾಯಿಸುತ್ತದೆ. ಈ ಬಾರಿ ಜುಲೈ ಮೊದಲ ವಾರದಲ್ಲಿ ಕೆರೆ ಅಚ್ಚುಕಟ್ಟು ಪ್ರದೇಶ ಆವತಿ ಹಳ್ಳದ ಹಲಸಿನಮರದ ಹಳ್ಳಿ, ಹಳೇ ಸಿದ್ದರಹಳ್ಳಿ ಭಾಗ ದಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ತಾಯಿಹಳ್ಳದ ಮೂಲಕ ಕೆರೆಗೆ ನೀರು ಹರಿದು ಬರುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಜುಲೈ ತಿಂಗಳಿನಲ್ಲಿ ಕೆರೆ ತುಂಬಲಿದೆ ಎನ್ನುತ್ತಾರೆ ಸ್ಥಳೀಯರು.

4 ಬೀರೂರು 1ಬೀರೂರು ಹೋಬಳಿಯ ರೈತರ ಜೀವನಾಡಿ ಮದಗದಕೆರೆಗೆ ಸುರಿತ್ತಿರುವ ಜಿಟಿ ಮಳೆಯಿಂದಾಗಿ ಕೆರೆಯ ನೀರಿನ ಹರಿವು ಹೆಚ್ಚಳವಾಗುತ್ತಿರುವುದು.

-- ಬಾಕ್ಸ್...-- ಶೃಂಗೇರಿ ಮುಂದುವರಿದ ಸಾಧಾರಣ ಮಳೆಶೃಂಗೇರಿ: ತಾಲೂಕಿನಾದ್ಯಂತ ಶುಕ್ರವಾರವೂ ಮಳೆ ಮುಂದುವರಿದು ಮದ್ಯಾಹ್ನದವರೆಗೂ ಸುರಿದು ಸಂಜೆಯ ವೇಳೆಗೆ ಕೊಂಚ ಬಿಡುವು ನೀಡಿ ಮತ್ತೆ ಸುರಿಯಲಾರಂಭಿಸಿತು.ಶಾಲೆಗಳಿಗೆ ಶುಕ್ರವಾರವೂ ರಜೆ ನೀಡಲಾಗಿತ್ತು. ಗಾಳಿಯ ಆರ್ಭಟ ಕಡಿಮನೆಯಾಗಿತ್ತು. ಆದರೆ ಮಳೆ ಮಾತ್ರ ಮುಂದುವರಿದಿತ್ತು. ತುಂಗಾ ನದಿಯಲ್ಲಿ ಪ್ರವಾಹ ಇಳಿಮುಖವಾಗಿದ್ದರೂ ತಗ್ಗು ಪ್ರದೇಶಗಳೆಲ್ಲ ಜಲಾವೃತಗೊಂಡಿದ್ದು ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.ನರಸಿಂಹ ಪರ್ವತದ ತಪ್ಪಲು ಕಿಗ್ಗಾ ಪ್ರದೇಶದಿಂದ ಹರಿದು ಬರುವ ನಳಿನಿ, ನಂದಿನಿ ನದಿಗಳಲ್ಲಿಯೂ ನೀರು ಅಪಾಯದ ಮಟ್ಟ ಮೀರಿದೆ. ಸಂಜೆವರೆಗೂ ಮಳೆ ಮುಂದುವರಿದಿತ್ತು. ಗಾಳಿ ಮಳೆಯಿಂದ ಯಾವುದೇ ರೀತಿಯ ಅವಗಡ, ಅನಾಹುತಗಳು ಕಂಡುಬಂದಿಲ್ಲ.-- ಬಾಕ್ಸ್‌---ಮಳೆ: ಅಂಗನವಾಡಿ ಕೇಂದ್ರಗಳಿಗೆ ರಜೆಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದು, ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ 6 ತಾಲೂಕುಗಳ ಅಂಗನವಾಡಿ ಶಿಶುಪಾಲನ ಕೇಂದ್ರಗಳಿಗೆ ಶನಿವಾರ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.ಕೊಪ್ಪ, ಕಳಸ, ಮೂಡಿಗೆರೆ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳ ಅಂಗನವಾಡಿ ಶಿಶುಪಾಲನ ಕೇಂದ್ರಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನುಳಿದಂತೆ ಬಯಲುಸೀಮೆಯ ಮೂರು ತಾಲೂಕುಗಳಲ್ಲಿ ಎಂದಿನಂತೆ ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸಲಿವೆ.ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದ ಬಳಿ 2019ರಲ್ಲಿ ಗುಡ್ಡ ಕುಸಿದು ಆನಾಹುತ ಸಂಭವಿಸಿತ್ತು. ಇದೇ ಸ್ಥಳದಲ್ಲಿ ಗುರುವಾರ ಗುಡ್ಡದ ಮಣ್ಣು ಜರಿದಿದ್ದರಿಂದ ಸ್ಥಳೀಯರು ಆತಂಕಗೊಂಡಿದ್ದಾರೆ. ಮಲೆನಾಡಿನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿರುವ ಪರಿಣಾಮ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿರುವ ಮುಂದಿನ 24 ಗಂಟೆಗಳಲ್ಲಿ ಮೂರು ನದಿಗಳ ಜಲಾಶಯಗಳಲ್ಲಿ ನೀರಿನ ಒಳ ಹರಿವು ಪ್ರಮಾಣ ಹೆಚ್ಚಳವಾಗಲಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದೆ.