ಪಠ್ಯೇತರ ಚಟುವಟಿಕೆಗಳಿಂದ ಮಾನಸಿಕ ಸ್ಥೈರ್ಯ ವೃದ್ಧಿ

| Published : Dec 23 2024, 01:02 AM IST

ಸಾರಾಂಶ

ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಬೆಳೆಯುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಮಾನಸಿಕ ಸ್ಥೈರ್ಯ ಬೆಳೆಯುತ್ತದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕಿರಣ್ ಕುಮಾರ್ ಹರ್ತಿ ಹೇಳಿದರು.

ಶನಿವಾರ ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಕುಮದ್ವತಿ ಪಿಯು ಕಾಲೇಜಿನ ವಾರ್ಷಿಕ ಕ್ರೀಡಾ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಒತ್ತಡದ ಮನೋಭಾವನೆ ಹೆಚ್ಚುತ್ತಿದ್ದು, ಇದರಿಂದ ಹೊರ ಬರಲು ವಿದ್ಯಾರ್ಥಿಗಳು ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ವಿಜ್ಞಾನ ಸಮ್ಮೇಳನ ಇತ್ಯಾದಿ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣಗಳು ಬೆಳೆಯುತ್ತದೆ. ಭಾರತ ಕೃಷಿ ಪ್ರಧಾನವಾಗಿದ್ದು, ವಿದ್ಯಾವಂತರು ಕೂಡ ಕೃಷಿಯ ಕಡೆಗೆ ತಿರುಗಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿಯನ್ನು ಪಡೆಯುವ ತಂತ್ರಜ್ಞಾನವನ್ನು ಇಂದಿನ ಪೀಳಿಗೆ ಗಮನಿಸುತ್ತಿದೆ ಎಂದು ತಿಳಿಸಿದರು.

ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಪ್ರತಿನಿಧಿ ಡಾ. ಶಿವಕುಮಾರ್ ಮಾತನಾಡಿ, ನಾವು ಮಾಡುವ ಕೆಲಸ ಅತ್ಯಂತ ಶ್ರದ್ಧೆಯಿಂದ ಮಾಡಿದಾಗ ಯಶಸ್ಸು ದೊರೆಯುತ್ತದೆ. ಏಕೆಂದರೆ ಇತ್ತೀಚೆಗೆ ಗುಕೇಶ್ ವಿಶ್ವ ಚಾಂಪಿಯನ್ನಾಗಿ ಹೊರಹೊಮ್ಮಿ ಕೇವಲ 18 ವರ್ಷದಲ್ಲಿ 20 ಕೋಟಿ ಅಧಿಕ ಹಣವನ್ನು ಸಂಪಾದಿಸುತ್ತಾನೆ. ಕೆಲವೇ ದಿನಗಳ ಹಿಂದೆ ಆತ ಯಾರು ಎಂದು ತಿಳಿದಿರುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು.

ಆತ ಎಂಟನೇ ತರಗತಿ ಇದ್ದಾಗ ಒಂದು ಸಂದರ್ಶನದಲ್ಲಿ ಅವನಿಗೆ ಭವಿಷ್ಯದಲ್ಲಿ ನಿನ್ನ ಗುರಿ ಏನು ಎಂದು ಪ್ರಶ್ನಿಸಿದಾಗ ವಿಶ್ವ ಚಾಂಪಿಯನ್ ಚೆಸ್ ಪಟುವಾಗುತ್ತೇನೆ ಎಂದು ಹೇಳಿದ. ಅದೇ ಬಾಲಕ ಇಂದು ವಿಶ್ವದೆದುರಿಗೆ ನಿಂತಿದ್ದಾನೆ. ಆದ್ದರಿಂದ ವಿದ್ಯಾರ್ಥಿಗಳು ನಿಮ್ಮ ಗುರಿ ಏನು ಎಂಬುದನ್ನು ನೀವೇ ನಿರ್ಧರಿಸಿ. ಬೇರೆಯವರು ನೀವು ಏನಾಗಬೇಕೆಂದು ನಿರ್ಧರಿಸಬಾರದು ಹಾಗೂ ಪೋಷಕರು ಅಕ್ಕಪಕ್ಕದ ಮನೆಯಲ್ಲಿ ಡಾಕ್ಟರ್, ಇಂಜಿನಿಯರ್ ಇದ್ದಾರೆ ಎಂದು ಮಕ್ಕಳನ್ನು ಅವರಿಗೆ ಹೋಲಿಕೆ ಮಾಡಬಾರದು ಎಂದು ಮನವಿ ಮಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯರಾದ ವೀರೇಂದ್ರ, ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಸ್ಥರಾದ ವಿಶ್ವನಾಥ್, ಸಿದ್ದೇಶ್ವರ ಉಪಸ್ಥಿತರಿದ್ದರು. ಚಂದ್ರಶೇಖರ್ ಸ್ವಾಗತಿಸಿ, ಯೋಗರಾಜ್ ನಿರೂಪಿಸಿ, ಚೈತ್ರ ಜಿ.ಕೆ. ವಂದಿಸಿದರು.