ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ಗಡಿಪ್ರದೇಶದ ಮಿರಿಯಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಕೂಲಿಕಾರ್ಮಿಕರು ಹೆಚ್ಚಾಗಿ ಇದ್ದಾರೆ. ಸ್ವಗ್ರಾಮದಲ್ಲಿಯೇ ಕೆಲಸ ಮಾಡಿ ಬದುಕುವುದಕ್ಕಾಗಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸಗಳು ಹೆಚ್ಚಿಸಬೇಕೆಂದು ಗ್ರಾಪಂ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ.ಮಿರಿಯಾಣ ಗ್ರಾಪಂ ಅಧ್ಯಕ್ಷೆ ಪಲ್ಲವಿ ಜಯಶಂಕರ ಸೋಮಲಿಂಗದಳ್ಳಿರವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ವೀರಭಧ್ರಪ್ಪ, ಭೀಮಾಶಂಕರ, ಸೋಮಶೇಖರ ಮಾತನಾಡಿ, ಸೋಮಲಿಂಗದಳ್ಳಿ, ಕಿಷ್ಟಾಪೂರ, ಬೈರಂಪಳ್ಳಿ, ಕಲ್ಲೂರ, ಮಿರಿಯಾಣ ಗ್ರಾಮಗಳಲ್ಲಿ ಕೂಲಿ ಕೆಲಸಗಾರರು ಹೆಚ್ಚಾಗಿ ಇದ್ದಾರೆ. ಅವರಿಗೆ ಕೆಲಸ ಇಲ್ಲದೇ ಬೇಸಿಗೆ ದಿನಗಳಲ್ಲಿ ಬೇರೆಡೆ ಗುಳೆ ಹೋಗಬೇಕಾಗಿದೆ. ಕೂಲಿಕಾರರು ತಮ್ಮ ಸ್ವಗ್ರಾಮದಲ್ಲಿ ಕೆಲಸ ಮಾಡುವುದಕ್ಕಾಗಿ ಉದ್ಯೋಗ ಖಾತ್ರಿ ಕೆಲಸಗಳು ಹೆಚ್ಚಿಸಬೇಕೆಂದು ಒತ್ತಾಯಿಸಿದರು.
ಪಿಡಿಒ ಮಲ್ಲಿಕಾರ್ಜುನ ಗಿರಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ₹೧.೫೮ ಕೋಟಿ ಕ್ರೀಯಾಯೋಜನೆ ಸಿದ್ಧಪಡಿಸಲಾಗಿದೆ. ೧೪ ಸಾವಿರ ಮಾನವ ದಿನಗಳು ಸೃಷ್ಟಿಯಾಗಿವೆ. ಇಲ್ಲಿಯವರೆಗೆ ಒಟ್ಟು ₹೪೫ ಲಕ್ಷ ಖರ್ಚು ಮಾಡಲಾಗಿದೆ. ರೈತರು ತಮ್ಮ ಹೊಲಗದ್ದೆಗಳಿಗೆ ಹೋಗುವುದಕ್ಕಾಗಿ ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಅಡಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು.೧೫ನೇ ಹಣಕಾಸು ಯೋಜನೆಯಡಿ ನೀರು ನಿರ್ವಹಣೆಗೆ ₹೫೯.೧೫ ಲಕ್ಷ, ವಿದ್ಯುತ ದೀಪಗಳಿಗೆ ₹೨೬.೬೨ಲಕ್ಷ, ಇತರೆ ಕೆಲಸಗಳಿಗೆ ₹೧೭.೭೪ಲಕ್ಷ ಖರ್ಚು ಮಾಡಲಾಗುವುದು. ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ-೪೧, ಸಾಮಾನ್ಯ ವರ್ಗದವರಿಗೆ-೩೮ ಹಾಗೂ ಅಲ್ಲಸಂಖ್ಯಾತರಿಗೆ ೩೦ ಮನೆಗಳು ಮಂಜೂರಾಗಿವೆ. ಎಲ್ಲವೂ ಗ್ರಾಮ ಸಭೆ ನಡೆಸಿ ಹಂಚಿಕೆ ಮಾಡಲು ಪಿಡಿಒ ಅವರಿಗೆ ಸೂಚನೆ ನೀಡಲಾಗಿದೆ, ಮನೆ ನಿರ್ಮಾಣಕ್ಕಾಗಿ ಸಾಮಾನ್ಯವರ್ಗದವರಿಗೆ ₹೧.೨೦ಲಕ್ಷ, ಪರಿಶಿಷ್ಟ ಜಾತಿದವರೆಗೆ ₹೨.ಲಕ್ಷ ಮಂಜೂರುಗೊಳಿಸಲಾಗುವುದು ಎಂದು ಅಧ್ಯಕ್ಷೆ ಪಲ್ಲವಿ ಜಯಶಂಕರ ಹೇಳಿದರು.
ಮಿರಿಯಾಣ ಗ್ರಾಮದಲ್ಲಿ ಘನತ್ಯಾಜ್ಯ ಕಟ್ಟಡ ನಿರ್ಮಾಣ ಕೆಲಸ ನಿಂತು ಹೋಗಿದ್ದು, ಇದರ ಕಾಮಗಾರಿಯನ್ನು ನಾಲ್ಕು ಸದಸ್ಯರು ನಡೆಸಿದ್ದು, ಜಾಗವು ಸರ್ಕಾರಿ ಸರ್ವೇಯಲ್ಲಿದೆ ಎಂದು ಮಾಜಿ ಅಧ್ಯಕ್ಷ ಗೋಪಾಲ ಭೋವಿ ತಿಳಿಸಿದರು.ಮಿರಿಯಾಣ ಗ್ರಾಪಂ ತೆರಿಗೆ ₹೩೦ ಲಕ್ಷ ಬೇಡಿಕೆ ಇದೆ. ಇನ್ನು ₹೨೧ ಲಕ್ಷ ಬಾಕಿ ಇದ್ದು, ₹೯ ಲಕ್ಷ ತೆರಿಗೆ ವಸೂಲಿಯಾಗಿದೆ. ಮಿರಿಯಾಣ ಕೆರೆಯಲ್ಲಿ ಮೀನುಗಾರಿಕೆಗಾಗಿ ₹೮೦ ಸಾವಿರ ಜಮಾ, ಚೆಟ್ಟಿನಾಡ ಸಿಮೆಂಟ್ ಕಂಪನಿ ತೆರಿಗೆ ₹೨೮ ಲಕ್ಷ, ಹೀಗೆ ಜಮಾ, ಖರ್ಚು ಮಾಹಿತಿಯನ್ನು ಗ್ರಾಪಂ ಸದಸ್ಯರಿಗೆ ಮಾಹಿತಿ ಕೊಡುತ್ತಿಲ್ಲವೆಂದು ಇಮ್ರಾನ ಆರೋಪಿಸಿದರು. ಮಿರಿಯಾಣ ಗ್ರಾಪಂದಲ್ಲಿ ಪಂಚಾಯತ ರಾಜ್ ನಿಯಮಗಳು ಮತ್ತು ಸರಕಾರದ ಅಧಿಸೂಚನೆಗಳು ಇಲ್ಲಿ ಬಹಳಷ್ಟು ಉಲ್ಲಂಘನೆಯಾಗುತ್ತಿವೆ. ಕಂಪ್ಯೂಟರ್ ಆಪರೇಟರ್ ವಿರುದ್ಧ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಗ್ರಾಪಂ ಸದಸ್ಯರಾದ ಸದ್ದಾಂ, ಅಂಜನಯ್ಯ, ಶಂಕರ, ಜಗದೇವಿ, ಲಕ್ಷ್ಮಿಬಾಯಿ ರುಕ್ಮಿಣಿ ಇನ್ನಿತರಿದ್ದರು. ಪಿಡಿಒ ಮಲ್ಲಿಕಾರ್ಜುನ ಗಿರಿ ಸ್ವಾಗತಿಸಿದರು.