ಯೋಗಾಭ್ಯಾಸದಿಂದ ಅಂತಃಶಕ್ತಿ, ಆತ್ಮಸ್ಥೈರ್ಯ ವೃದ್ಧಿ: ಡಾ.ಮಹಾಂತ ಶ್ರೀ

| Published : Feb 19 2024, 01:32 AM IST

ಯೋಗಾಭ್ಯಾಸದಿಂದ ಅಂತಃಶಕ್ತಿ, ಆತ್ಮಸ್ಥೈರ್ಯ ವೃದ್ಧಿ: ಡಾ.ಮಹಾಂತ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಅಶ್ವತ್ಥ ನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಶಿವಶಕ್ತಿ ಯೋಗ ಕೇಂದ್ರ ಸಹಕಾರದೊಂದಿಗೆ ಜೆಸಿಐ ಶಿವಮೊಗ್ಗ ವಿವೇಕ್‌ ಸಂಸ್ಥೆಯು ರಥಸಪ್ತಮಿ ಪ್ರಯುಕ್ತ ನಿರಂತರ ಯೋಗ ತರಬೇತಿ ಕಾರ್ಯಕ್ರಮ ಆಯೋಜಿಸಿಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯೋಗ, ಧ್ಯಾನ ಹಾಗೂ ಪ್ರಾಣಾಯಾಮದಿಂದ ದೇಹದಲ್ಲಿ ಅಂತಃಶಕ್ತಿ ಹಾಗೂ ಆತ್ಮಸ್ಥೈರ್ಯ ವೃದ್ಧಿಯಾಗುತ್ತದೆ ಎಂದು ಜಡೆ ಮಹಾಸಂಸ್ಥಾನ ಮಠದ ಶ್ರೀ ಡಾ.ಮಹಾಂತ ಸ್ವಾಮೀಜಿ ನುಡಿದರು.

ನಗರದ ಅಶ್ವತ್ಥನಗರದ ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಶಿವಶಕ್ತಿ ಯೋಗ ಕೇಂದ್ರ ಸಹಕಾರದೊಂದಿಗೆ ಜೆಸಿಐ ಶಿವಮೊಗ್ಗ ವಿವೇಕ್‌ ಸಂಸ್ಥೆಯು ರಥಸಪ್ತಮಿ ಪ್ರಯುಕ್ತ ಆಯೋಜಿಸಿದ್ದ ನಿರಂತರ ಯೋಗ ತರಬೇತಿಗೆ ಸೂರ್ಯದೇವನಿಗೆ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿನಿತ್ಯವೂ ಯೋಗಾಭ್ಯಾಸ ಮಾಡುವುದರಿಂದ ಶರೀರವು ನಿಯಂತ್ರಣದಲ್ಲಿರುತ್ತದೆ. ನಾವು ಹೇಳಿದಂತೆ ಶರೀರ ಕೇಳಬೇಕೇ ಹೊರತು, ಶರೀರ ಹೇಳಿದಂತೆ ನಾವು ಕೇಳು ವಂತಿರಬಾರದು. ನಿತ್ಯಯೋಗದಲ್ಲಿ ತೊಡಗಿಸಿಕೊಂಡರೆ ಆಯಸ್ಸು ಕಳೆದದ್ದೇ ಗೊತ್ತಾಗುವುದಿಲ್ಲ. ಆರೋಗ್ಯವೂ ಸದೃಢವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಪ್ರತಿದಿನ ಒಂದು ತಾಸು ಯೋಗಾಭ್ಯಾಸಕ್ಕಾಗಿ ಮೀಸಲಿಡುವಂತೆ ಸಲಹೆ ನೀಡಿದರು.

ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ.ಧನಂಜಯ ಸರ್ಜಿ ಮಾತನಾಡಿ, ಸದೃಢ ಆರೋಗ್ಯಕ್ಕೆ ಶುದ್ಧ ಗಾಳಿ, ನೀರು ಹಾಗೂ ಗ್ಲುಕೋಸ್‌ ಬಹಳ ಮುಖ್ಯ. ನಾವು ಸೇವಿಸುವ ನೀರು, ಗಾಳಿ ಹಾಗೂ ಆಹಾರ ಕಲುಷಿತವಾಗಿದೆ. ಇದು ಸಹಜವಾಗಿಯೇ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ, ಪರಿಸರ ಸಂಕ್ಷಣೆಯೂ ಎಲ್ಲರ ಮೊದಲಾದ್ಯತೆ ಆಗಬೇಕು ಎಂದು ಹೇಳಿದರು.

ಭಗವಂತನ ಸೃಷ್ಟಿಯೇ ಒಂದು ಅದ್ಭುತ, ನಮಗೆ ಭಗವಂತ ಎರಡು ಶ್ವಾಸಕೋಶವನ್ನು ಕರುಣಿಸಿದ್ದಾನೆ. ಇವುಗಳ ಆರೋಗ್ಯವನ್ನು ಕಾಪಾಡಿಕೊಂಡರೆ ದೀರ್ಘಕಾಲ ಜೀವಿ ಸಬಹುದು. ಯಾಕೆಂದರೆ 3 ಮಿಲಿಯನ್‌ನಷ್ಟು ಜೀವಕೋಶಗಳಿರುವ ಶ್ವಾಸಕೋಶಕ್ಕೆ 150 ವರ್ಷಗಳಷ್ಟು ಬದುಕುವ ಸಾಮರ್ಥ್ಯವಿದೆ. ಪ್ರತಿನಿತ್ಯವೂ ತಪ್ಪದೇ ದೀರ್ಘ ಉಸಿರಾಟ ಮತ್ತು ಯೋಗ, ಧ್ಯಾನ, ಪ್ರಾಣಾಯಾಮ ರೂಢಿಸಿಕೊಂಡರೆ ಶ್ವಾಸಕೋಶಕ್ಕೆ 200 ವರ್ಷ ಸದೃಢವಾಗಿರುವ ಶಕ್ತಿ ಹೆಚ್ಚುತ್ತದೆ. ತರಕಾರಿ, ಸೊಪ್ಪು ಹೆಚ್ಚು ಬಳಸುವ ಜೊತೆಗೆ ಹಿತ-ಮಿತ ಆಹಾರ ರೂಢಿಸಿಕೊಂಡರೆ ಆರೋಗ್ಯ ಸದೃಢವಾಗಿಟ್ಟುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕು ಎಂದರು.

ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್‌ ಮಾತನಾಡಿ, ಸ್ವಾಮಿ ವಿವೇಕಾನಂದ ಪಾರ್ಕ್‌ನಲ್ಲಿ ಯೋಗ ಭವನ ನಿರ್ಮಾಣದ ಕನಸು ಎಲ್ಲರ ಸಹಕಾರದಿಂದೊಂದಿಗೆ ನನಸಾಗಿದೆ, ಶಿವಮೊಗ್ಗದಲ್ಲೇ ವ್ಯವಸ್ಥಿತ ಯೋಗ ಮಂದಿರ ಇದಾಗಿದೆ ಎಂದರು.

ಯೋಗಾಚಾರ್ಯ ಚಿ.ಸಿ.ರುದ್ರಾರಾಧ್ಯ, ಡಾ. ಎನ್‌.ಎಲ್‌.ನಾಯಕ್‌, ಜೆಸಿಐ ವಿವೇಕ್‌ ಶಿವಮೊಗ್ಗ ಅಧ್ಯಕ್ಷ ಸಂಜಯ್‌, ಶ್ರೀ ಬಸವೇಶ್ವರ ವೀರಶೈವ ಸಮಾಜ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್‌, ಮುಖಂಡರಾದ ಎನ್‌.ಜೆ. ರಾಜಶೇಖರ್‌, ಡಾ.ಪರಿಸರ ನಾಗರಾಜ್‌, ಉದ್ಯಮಿ ಹರ್ಷ ಕಾಮತ್, ಕಾಟನ್‌ ಜಗದೀಶ್‌, ಸತೀಶ್‌ ಹಾಗೂ ಅಶ್ವತ್ಥನಗರ, ಎಲ್‌ಬಿಎಸ್ ನಗರದ ನಿವಾಸಿಗಳು ಪಾಲ್ಗೊಂಡಿದ್ದರು.