ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ.17 ಮತ್ತು ಶೇ.7ರಷ್ಟು ಹೆಚ್ಚಿಸಬೇಕೆಂದು ನಾಗಮೋಹನದಾಸ ಆಯೋಗ ವರದಿ ನೀಡಿತು. ಈ ವರದಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಅಂಗೀಕರಿಸಿ ಜಾರಿಗೆ ಅಗತ್ಯ ಕ್ರಮಕೈಗೊಂಡಿತು.

ಕೊಪ್ಪಳ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆ ಆಧರಿಸಿ ಶೈಕ್ಷಣಿಕ ಹಾಗೂ ಉದ್ಯೋಗದ ನೇಮಕಾತಿಯಲ್ಲಿ ಮೀಸಲಾತಿ ಹೆಚ್ಚಿಸಬೇಕೆಂದು ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ಸೋಮವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ ಸಂಸದ ರಾಜಶೇಖರ್‌ ಹಿಟ್ನಾಳ್‌ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ.17 ಮತ್ತು ಶೇ.7ರಷ್ಟು ಹೆಚ್ಚಿಸಬೇಕೆಂದು ನಾಗಮೋಹನದಾಸ ಆಯೋಗ ವರದಿ ನೀಡಿತು. ಈ ವರದಿಯನ್ನು ಬಸವರಾಜ ಬೊಮ್ಮಾಯಿ ಸರ್ಕಾರ ಅಂಗೀಕರಿಸಿ ಜಾರಿಗೆ ಅಗತ್ಯ ಕ್ರಮಕೈಗೊಂಡಿತು. ಬಳಿಕ ಕೇಂದ್ರ ಸರ್ಕಾರದ ಅಂಗಳಕ್ಕೆ ಹೋಗಿದ್ದು ಅನುಮೋದನೆ ನೀಡಬೇಕು. ಸಂವಿಧಾನದ ಶೆಡ್ಯೂಲ್ 9ರಲ್ಲಿ ಸೇರಿಸಿ ಕೇಂದ್ರದಲ್ಲಿ ಇರುವಂತೆ ರಾಜ್ಯದಲ್ಲಿ ಶೇ. 17 ಮತ್ತು ಶೇ. 7ರ ಜಾರಿಗೆ ಅನುವು ಮಾಡಿಕೊಡಬೇಕು. ಇದಕ್ಕೆ ರಾಜ್ಯದ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕೆಂದು ಒತ್ತಾಯಿಸಿದರು.

ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದ ಅವರು, ಬ್ಯಾಕ್‌ಲಾಗ್ ಹುದ್ದೆಗಳನ್ನು ಸಾಮಾನ್ಯ ಗುಂಪಿಗೆ ವರ್ಗಾಯಿಸಬಾರದು. ಹಾಗೆಯೇ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ 3 ಲಕ್ಷ ಉದ್ಯೋಗ ಭರ್ತಿ ಮಾಡಬೇಕೆಂದು ಆಗ್ರಹಿಸಿದರು.

ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕಾಯಂ ನೇಮಕಾತಿ ಸ್ಥಗಿತಗೊಂಡಿದೆ. ಆದರಿಂದ ಎಲ್ಲ ಸಾರ್ವಜನಿಕ ರಂಗಗಳಲ್ಲೂ ಕಾಯಂ ಹುದ್ದೆ ತುಂಬುವುದು

ಮತ್ತು ಮೀಸಲಾತಿ ರಕ್ಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ವೇಳೆ ಸಂಘಟನೆ ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುಂಕಪ್ಪ ಗದಗ, ಬಸವರಾಜ್ ಎಂ, ಹುಸೇನಪ್ಪ, ಕೆ. ಲಕ್ಷ್ಮೀದೇವಿ ಸೋನಾರೆ, ಶಿವು ಬೆಣಕಲ್, ಮಂಜುನಾಥ ಡಗ್ಗಿ, ಹನುಮೇಶ ಕಲ್ಮಂಗಿ, ರಮೇಶ್ ಬಿ., ಮಲ್ಲಪ್ಪ ಮಾಗಡೆ, ಪರಶುರಾಮ್ ಕನಕಗಿರಿ, ಗಾದೆಪ್ಪ ಬೆಣಕಲ್, ಫಕೀರಮ್ಮ, ಅಮರಮ್ಮ, ಅಕ್ಕಮ್ಮ, ಹುಲಗಪ್ಪ ಗೋಕಾವಿ, ಹುಸೇನ್‌ಸಾಬ್ ನದಾಫ್, ಕಾಲೇಸಾಬ ಕರಡಿ ಸೇರಿದಂತೆ ಇತರರು ಇದ್ದರು.