ಸಾರಾಂಶ
ಚನ್ನಪಟ್ಟಣ: ವಿಜ್ಞಾನ ಹಾಗೂ ಇತರ ಮಾದರಿಯ ವಸ್ತು ಪ್ರದರ್ಶನಗಳನ್ನು ಏರ್ಪಡಿಸುವುದರಿಂದ ಮಕ್ಕಳ ಜ್ಞಾನಾಭಿವೃದ್ಧಿ ಹೆಚ್ಚಳಗೊಳ್ಳುವ ಜತೆಗೆ ವೈಜ್ಞಾನಿಕ ಮನೋಭಾವ ಬೆಳೆಯುತ್ತದೆ ಎಂದು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹದೇವ ಅಭಿಪ್ರಾಯಪಟ್ಟರು.
ಪಟ್ಟಣದ ಕೋಟೆ ಸರ್ಕಾರಿ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗಳು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಕೌಶಲ ಹಾಗೂ ಕ್ರಿಯಾಶೀಲತೆ ಹೆಚ್ಚಿಸುವ ಜತೆಗೆ ಅವರ ಪ್ರತಿಭೆ ಹೊರಹೊಮ್ಮಲು ವೇದಿಕೆ ಒದಗಿಸುತ್ತವೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.ಶಿಕ್ಷಣ ಸಂಯೋಜಕ ಯೋಗೇಶ್ ಚಕ್ಕೆರೆ ಮಾತನಾಡಿ, ವಿದ್ಯಾರ್ಥಿಗಳು ಪ್ರತಿಯೊಂದನ್ನು ವೈಜ್ಞಾನಿಕ ಮನೋಭಾವದಿಂದ ನೋಡುವುದನ್ನು ರೂಢಿಸಿಕೊಳ್ಳಬೇಕು. ವಿಜ್ಞಾನವನ್ನು ಸರಿಯಾಗಿ ಅಭ್ಯಸಸಿಬೇಕು. ಈ ಮನೋಭಾವನೆ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ನಿತ್ಯ ಜೀವನದಲ್ಲಿ ಅನುಭವಿಸಬೇಕು. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಹೆಚ್ಚಿಸುವ ಸಲುವಾಗಿ ಪ್ರತಿಯೊಂದು ಶಾಲೆಗಳಲ್ಲಿಯೂ ಪ್ರತಿ ವರ್ಷ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸುವುದು ಅತ್ಯಂತ ಅವಶ್ಯಕ ಎಂದರು.
ಉರ್ದು ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ನಾಜಿಮಾ ಬಾನು ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದು ಶಾಲೆಗಳ ಮುಖ್ಯ ಕರ್ತವ್ಯ. ರಚನಾತ್ಮಕ ಹಾಗೂ ಗುಣಾತ್ಮಕ ಶಿಕ್ಷಣ ದೊರೆಯಬೇಕಾದರೆ ಮಕ್ಕಳು ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದು ಅಗತ್ಯ ಎಂದರು.ಶಿಕ್ಷಣ ಸಂಯೋಜಕರಾದ ರಾಜಲಕ್ಷ್ಮಿ, ಗಂಗಾಧರ ಮೂರ್ತಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯ ಶಿಕ್ಷಕಿ ಕಮರ್ ಉನ್ನಿಸಾ, ಶಿಕ್ಷಕರಾದ ಪದ್ಮಾವತಮ್ಮ, ಜಮಾಲ ಸುಲ್ತಾನ, ಮತೀನಾ ಖಾನಂ , ನಜಹತ್ ಅಬ್ಜಾ, ಸಮೂಹ ಸಂಪನ್ಮೂಲ ವ್ಯಕ್ತಿ ಕೃಷ್ಣ ಸೇರಿದಂತೆ ಶಾಲೆಯ ಶಿಕ್ಷಕ ವರ್ಗ, ಪೋಷಕರು ಉಪಸ್ಥಿತರಿದ್ದರು.
ರೈನ್ ವಾಟರ್ ಹಾರ್ವೆಸ್ಟಿಂಗ್, ರೈನ್ ಅಲಾರಂ, ಏರ್ ಕೂಲರ್, ಜಿಯೋ ಟ್ರೋಪ್, ಗಾಳಿಯ ಒತ್ತಡ, ದ್ಯುತಿ ಸಂಶ್ಲೇಷಣ ಕ್ರಿಯೆ, ಸೋಲಾರ್ ಸಿಸ್ಟಮ್, ಬಹುರೂಪ ದರ್ಶಕ, ಸೂಜಿರಂಧ್ರ ಕ್ಯಾಮೆರಾ, ಸೂಕ್ಷ್ಮ ದರ್ಶಕ ಯಂತ್ರ, ವಿದ್ಯುತ್ ವಾಹಕಗಳು ಮತ್ತು ಅವಾಹಕಗಳು, ಶ್ವಾಸಕೋಶದ ರಚನೆ, ಹೃದಯದ ಕಾರ್ಯನಿರ್ವಹಣೆ, ಕಾರ್ಬೋಹೈಡ್ರೇಟ್, ಪ್ರೋಟೀನ್, ತ್ಯಾಜ್ಯ ನಿರ್ವಹಣೆ , ಮಳೆ ನೀರು ಕೊಯ್ಲು ವಿಧಾನ ಹೀಗೆ ಹಲವಾರು ಪ್ರಯೋಗಗಳನ್ನು ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.ಪೊಟೋ೭ಸಿಪಿಟಿ೧: ಚನ್ನಪಟ್ಟಣದ ಕೋಟೆ ಸರ್ಕಾರಿ ಉರ್ದು ಶಾಲೆಯಲ್ಲಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ಮಾದರಿಗಳನ್ನು ಪ್ರದರ್ಶಿಸಿದರು.