ಸಾರಾಂಶ
ಕನ್ನಡಪ್ರಭ ವಾರ್ತೆ ಮೂಡಲಗಿ
ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಇಂದಿನ ಅವಶ್ಯವಾಗಿದೆ ಎಂದು ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಹೇಳಿದರು.ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರಗತಿಪರ ರೈತ ಬಾಳಪ್ಪ ಬೆಳಕೂಡ ಅವರ ತೋಟದಲ್ಲಿ ಬೆಂಗಳೂರಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಕಬ್ಬು ಹಾಗೂ ಅರಿಷಿಣ ಬೆಳೆಯ ಕ್ಷೇತ್ರೋತ್ಸವ ಹಾಗೂ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಮಾತನಾಡಿದರು. ಮಣ್ಣಿಗೂ ಜೀವವಿದ್ದು ಅವೈಜ್ಞಾನಿಕವಾಗಿ ರಾಸಾಯನಿಕ ಹಾಗೂ ಕ್ರೀಮಿನಾಶಕಗಳನ್ನು ಹಾಕಿ ಮಣ್ಣನ್ನು ಹಾಳು ಮಾಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ರೈತರು ಕಬ್ಬಿನ ರವದಿಗೆ ಬೆಂಕಿ ಹಚ್ಚುವುದರಿಂದ ತಾಪಮಾನ ಹೆಚ್ಚಾಗಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ನಾಶವಾಗುತ್ತವೆ. ರೈತರು ಮಣ್ಣಿನ ಸಂರಕ್ಷಣೆ ಮತ್ತು ಅದರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಬೇಕು. ವಿಷಯುಕ್ತ ಆಹಾರ ಸೇವನೆಯಿಂದ ಮುನಷ್ಯನ ಅಯುಷ್ಯ ಕ್ಷೀಣಿಸುತ್ತಿದ್ದು, ರೈತರು ಜಾನುವಾರುಗಳನ್ನು ಹಾಗೂ ದೇಸಿ ಹಸುಗಳ ಸಗಣಿ, ಗಂಜಲ ಬಳಸಿ, ಭೂಮಿಯಲ್ಲಿ ಎರ ಹುಳುಗಳನ್ನು ವೃದ್ಧಿಸಿ ಸಾವಯವ ಕೃಷಿ ಮಾಡಬೇಕು. ಕರ್ನಾಟಕ ಸರ್ಕಾರವು ಕಬ್ಬಿನಲ್ಲಿ ಸಮಗ್ರ ಮಣ್ಣು ಮತ್ತು ನೀರು ನಿರ್ವಹಣೆ ನೂತನ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಬೆಳಗಾವಿಯ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಯೋಜನೆಯ ಲೋಕಾರ್ಪಣೆಯಾಗಲಿದೆ ಎಂದರು.ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥಗೌಡ.ಎಸ್.ಆರ್ ಮಾತನಾಡಿ, ಕೃಷಿಗೆ ರಾಸಾಯಣಿಕ ಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಯಥೇಚ್ಛವಾಗಿ ಬಳಸುವುದರಿಂದ ಬಳಸುವ ನಮಗೆ ಬಿಪಿ, ಸಕ್ಕರೆ ಕಾಯಲೆ, ಹೃದಯಘಾತ ಸೇರಿ ವಿವಿಧ ರೋಗಗಳು ಬಾಧಿಸುತ್ತಿವೆ. ಕಲ್ಲೋಳಿಯ ಬಾಳಪ್ಪ ಬೆಳಕೂಡ ಸಾವಯವ ಪದ್ಧತಿಯಲ್ಲಿ ಕಬ್ಬು ಮತ್ತು ಅರಿಶಿಣ ಬೆಳೆಯಲ್ಲಿ ಹೆಚ್ಚು ಇಳುವರಿ ಪಡೆದು ಮಾದರಿಯಾಗಿದೆ ಎಂದು ಹೇಳಿದರು.
ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಾಳಪ್ಪ ಬೆಳಕೂಡ ಮಾತನಾಡಿದರು. ಸಮೀರವಾಡಿ ಗೋದಾವರಿ ಸಕ್ಕರೆ ಕಾರ್ಖಾನೆಯ ಕಬ್ಬು ಅಭಿವೃದ್ಧಿ ವಿಭಾಗ ನಿರ್ದೇಶಕ ಡಾ.ನಂದಕುಮಾರ ಕುಂಚಗಿ, ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜಾರಿ ಮಾತನಾಡಿದರು.ಕಬ್ಬು ಬೆಳೆ ಬಗ್ಗೆ ತುಕ್ಕಾನಟ್ಟಿಯ ಕವಿಕೆಯ ಬೇಸಾಯ ತಜ್ಞ ಎಮ್.ಎನ್.ಮಲಾವಡಿ, ಅರಿಶಿಣ ಬೆಳೆ ಬಗ್ಗೆ ಬಾಗಲಕೋಟ ತೋಟಗಾರಿಕೆ ವಿಶ್ವವಿದ್ಯಾಲಯದ ಶಶಿಧರ ದೊಡ್ಡಮನಿ, ಸಚಿನಕುಮಾರ ನಂದಿಮಠ, ರಾಘವೇಂದ್ರ.ಕೆ.ಎಸ್, ವಿ.ಡಿ.ಗಸ್ತಿ ಉಪನ್ಯಾಸ ನೀಡಿದರು. ಬೆಳಗಾವಿ ಜಿಲ್ಲಾ ಕೃಷಿಕ ಸಮಾಜ ಅಧ್ಯಕ್ಷ ಶಂಕರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಗೋಕಾಕ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ, ಪ್ರದೇಶ ಕೃಷಿಕ ಸಮಾಜದ ಸುರೇಶ ಕಬಾಡಗಿ, ಶಂಕರಗೌಡ ಪಾಟೀಲ, ಶಿವನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ, ಅರವಿಂದ ಕಟಗಿ, ಶಿವಪ್ಪ ಅರಹುಣಸಿ, ನಾರಾಯಣ ಹೆಗಡೆ, ಅಶೋಕುಮಾರ ಕೂಡಲಿ, ಪ್ರವೀಣ ಹೆಬ್ಬಾರ, ಅಶೋಕ ಗದಾಡಿ, ಕೆಂಪಣ್ಣ ಕಾಡದವರ ಮುಂತಾದವರು ಭಾಗವಹಿಸಿದ್ದರು. ಸಮಾರಂಭದಲ್ಲಿ ಕಬ್ಬು ಮತ್ತು ಅರಿಶಿಣ ಬೆಳೆಯ ಕ್ಷೇತ್ರ ವೀಕ್ಷಣೆ ಮಾಡಿದರು. ಹಾಲು ಹಲ್ಲಿನ ಹೋರಿಗಳ ಪ್ರದರ್ಶನದಲ್ಲಿ ಉತ್ತಮ ಹೋರಿಗಳಿಗೆ ಬಹುಮಾನ ವಿತರಿಸಲಾಯಿತು. ಸಾವಿರಕ್ಕೂ ಅಧಿಕ ರೈತರು, ಅರಭಾವಿ ತೋಟಗಾರಿಕೆ ಕಾಲೇಜು ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು. ರಮೇಶ ಭಾಗೋಜಿ, ಶಂಕರ ನಿಂಗನೂರ ನಿರೂಪಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))