ನ್ಯಾನೋ ರಸಗೊಬ್ಬರ ಬಳಕೆ ಹೆಚ್ಚಿಸಿ

| Published : Aug 10 2025, 01:31 AM IST

ಸಾರಾಂಶ

ಯೂರಿಯಾ ಗೊಬ್ಬರ ಕೊರತೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸಲು ಕ್ರಮಕೈಗೊಳ್ಳಲಾಗುವುದು. ಕಿನ್ನಾಳದಲ್ಲಿ ಒಂದು ಶೈತ್ಯಾಗಾರದ ಬಗ್ಗೆಯೂ ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಜಿಪಂ ಸಿಇಒ ವರ್ಣಿತ್‌ ನೇಗಿ ಹೇಳಿದರು.

ಕೊಪ್ಪಳ:

ರೈತರು ಬೆಳೆಗಳಿಗೆ ನ್ಯಾನೋ ರಸಗೊಬ್ಬರ ಬಳಕೆ ಹೆಚ್ಚಿಸಬೇಕು ಎಂದು ಜಿಪಂ ಸಿಇಒ ವರ್ಣಿತ್ ನೇಗಿ ಹೇಳಿದರು.

ತಾಲೂಕಿನ ಕಿನ್ನಾಳದ ಕೃಷಿ ಪತ್ತಿನ ಬ್ಯಾಂಕ್‌ನಲ್ಲಿ ಇಫ್ಕೋ ಕಂಪನಿ, ಕೃಷಿ ಇಲಾಖೆ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ, ಗಂಗಾವತಿಯ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ್ದ ನ್ಯಾನೋ ರಸಗೊಬ್ಬರಗಳ ವಿಚಾರ ಸಂಕಿರಣ ಮತ್ತು ರೈತ-ವಿಜ್ಞಾನಿ ಚಚಾಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಯೂರಿಯಾ ಗೊಬ್ಬರ ಕೊರತೆಯನ್ನು ಬೇಡಿಕೆಗೆ ತಕ್ಕಂತೆ ಪೂರೈಸಲು ಕ್ರಮಕೈಗೊಳ್ಳಲಾಗುವುದು. ಕಿನ್ನಾಳದಲ್ಲಿ ಒಂದು ಶೈತ್ಯಾಗಾರದ ಬಗ್ಗೆಯೂ ನನ್ನ ಗಮನಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಬದಲಾದ ಪರಿಸ್ಥಿತಿಯಲ್ಲಿ ನ್ಯಾನೋ ರಸಗೊಬ್ಬರ ಬಳಕೆ ಪರ್ಯಾಯವಾಗಿ ಮಾಡಿ ರೈತರು ಬೆಳೆಗಳನ್ನಷ್ಟೇ ಅಲ್ಲದೇ ಪರಿಸರ, ಮನುಷ್ಯನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು ಎಂದರು.

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ.ವಿ. ರವಿ, ನ್ಯಾನೋ ಯೂರಿಯಾ, ನ್ಯಾನೋ ಡಿಎಪಿ ರಸಗೊಬ್ಬರಗಳ ಬಗ್ಗೆ ಸಮಗ್ರ ವೈಜ್ಞಾನಿಕ ಮಾಹಿತಿ ನೀಡಿದರು. ಶಿಫಾರಸು ಮಾಡಿ ಗೊಬ್ಬರ ಪ್ರಮಾಣವನ್ನು ನ್ಯಾನೋ ರಸಗೊಬ್ಬರಗಲ್ಲದೇ ಕಡ್ಡಾಯವಾಗಿ ಕೊಟ್ಟಿಗೆ ಗೊಬ್ಬರ, ಬೀಜೋಪಚಾರ ಮಾಡುವುದರಿಂದ ಶೇ. 25ರಿಂದ 50ರಷ್ಟು ಗೊಬ್ಬರಗಳ ಬಳಕೆ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ನ್ಯಾನೋ ಡಿಎಪಿ ಬೀಜೋಪಚಾರಕ್ಕೂ ಬಳಸಬಹುದು. ಬಳಸುವಾಗ ಕೇವಲ 125 ಲೀಟರ್‌ ಸಿಂಪರಣಾ ದ್ರಾವಣ ಬಳಸಬೇಕು. ಡ್ರೋನ್ ಮೂಲಕ ಸರಿಯಾಗಿ 10 ಲೀಟರ್ ನೀರಿಗೆ ಶಿಫಾರಸು ಮಾಡಿದ ಪ್ರಮಾಣ ಬಳಸಿದರೆ ಮಾತ್ರ ಪರಿಣಾಮಕಾರಿಯಾದ ಫಲಿತಾಂಶ ಇರುತ್ತದೆ ಎಂದು ವೈಜ್ಞಾನಿಕ ಮಾಹಿತಿ ನೀಡಿದರು.

ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಡಾ. ರಾಘವೇಂದ್ರ ಎಲಿಗಾರ ಮಾತನಾಡಿ, ಮಣ್ಣಿನ ಫಲವತ್ತತೆ ಕಾಪಾಡುವುದು ಅತೀ ಮುಖ್ಯವಾಗಿದ್ದು, ಇದಕ್ಕೆ ನ್ಯಾನೋ ರಸಗೊಬ್ಬರಗಳ ಬಳಕೆ ಅತೀ ಸೂಕ್ತ ಎಂಬ ಮಾಹಿತಿ ನೀಡಿದರು. ಕೊಪ್ಪಳ ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಮಾತನಾಡಿ, ರೈತರು ಆತುರಕ್ಕೆ ಒಳಗಾಗಬಾರದು. ಜಿಲ್ಲೆಯಲ್ಲಿ ಹಂತ-ಹಂತವಾಗಿ ಯೂರಿಯಾ ಗೊಬ್ಬರ ಪೂರೈಸಲಾಗುವುದು ಎಂದು ಭರವಸೆ ನೀಡಿದರು.

ಆರ್‌ಜಿಬಿ ಸದಸ್ಯ ಅಮರೇಶ ಉಪಲಾಪುರ ಪ್ರಾಸ್ತಾವಿಕ ಮಾತನಾಡಿದರು. ಅಧ್ಯಕ್ಷ ಬಸವರಾಜ ಚಿಲವಾಡಗಿ, ಕಿನ್ನಾಳ ಹೋಬಳಿ ಒಂದು ಶೈತ್ಯಾಗಾರ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಇದಕ್ಕೂ ಮೊದಲು ಇಫ್ಕೋ ಕಂಪನಿ ವತಿಯಿಂದ ಆಯೋಜಿಸಿದ್ದ ಡ್ರೋನ್ ಮೂಲಕ ನ್ಯಾನೋ ರಸಗೊಬ್ಬರಗಳ ಸಿಂಪಡಣೆ ಮಾದರಿ ಪ್ರಾತ್ಯಕ್ಷಿಕೆ ಆಯೋಜಿಸಲಾಗಿತ್ತು. ಇಫ್ಕೋ ಕಂಪನಿ ಕ್ಷೇತ್ರ ಅಧಿಕಾರಿ ರಾಘವೇಂದ್ರ ಡ್ರೋನ್ ಮೂಲಕ ಸಿಂಪಡಣೆ ಬಗ್ಗೆ ಮಾಹಿತಿ ನೀಡಿ ಈ ವರೆಗೆ 6000 ರೈತರು ಇದರ ಪ್ರಯೋಜನ ಪಡೆದಿದ್ದಾರೆ. ಈ ವರ್ಷ 10,000ಕ್ಕೂ ಹೆಚ್ಚಿನ ರೈತರಿಗೆ ಈ ತಂತ್ರಜ್ಞಾನ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಅಮೃತಾ ಚಿತ್ರಗಾರ, ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಾಮನಮೂರ್ತಿ ಹಾಗೂ ಪ್ರಕಾಶ ಬಣಕಾರ ಸೇರಿದಂತೆ 200ಕ್ಕೂ ಹೆಚ್ಚು ಪ್ರಗತಿಪರ ರೈತರು, ರೈತ ಮಹಿಳೆಯರು ಭಾಗವಹಿಸಿದ್ದರು.