ಶುದ್ಧ, ಗುಣಮಟ್ಟದ ತಿನಿಸುಗಳಿಂದ ವಹಿವಾಟು ವೃದ್ಧಿಸಿ

| Published : Nov 15 2024, 12:32 AM IST

ಸಾರಾಂಶ

ಸ್ವಚ್ಛ ಪರಿಸರ ಶುದ್ಧ ಹಾಗೂ ಗುಣಮಟ್ಟದ ತಿನಿಸುಗಳಿಂದ ಬೀದಿ ಬದಿ ವ್ಯಾಪಾರಸ್ಥರು ವಹಿವಾಟು ವೃದ್ಧಿಸಿಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಫುಡ್ ಕೋರ್ಟ್ ಆರಂಭಕ್ಕೆ ಸೂಕ್ತ ಸ್ಥಳ ಗುರುತಿಸಿ ಅವಕಾಶ ದೊರಕಿಸಿಕೊಡುವುದಾಗಿ ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸ್ವಚ್ಛ ಪರಿಸರ ಶುದ್ಧ ಹಾಗೂ ಗುಣಮಟ್ಟದ ತಿನಿಸುಗಳಿಂದ ಬೀದಿ ಬದಿ ವ್ಯಾಪಾರಸ್ಥರು ವಹಿವಾಟು ವೃದ್ಧಿಸಿಕೊಳ್ಳಲು ಸಾಧ್ಯ. ಈ ದಿಸೆಯಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಫುಡ್ ಕೋರ್ಟ್ ಆರಂಭಕ್ಕೆ ಸೂಕ್ತ ಸ್ಥಳ ಗುರುತಿಸಿ ಅವಕಾಶ ದೊರಕಿಸಿಕೊಡುವುದಾಗಿ ಸಂಸದ ಬಿ.ವೈ ರಾಘವೇಂದ್ರ ಭರವಸೆ ನೀಡಿದರು.

ಗುರುವಾರ ಪಟ್ಟಣದ ಶಿವಗಿರಿ ಮರಾಠ ಸಮುದಾಯ ಭವನದಲ್ಲಿ ಶಿಕಾರಿಪುರ ತಾಲೂಕು ಮಲೆನಾಡು ರಸ್ತೆ ಬೀದಿ ಬದಿ ವ್ಯಾಪಾರಿಗಳ ಸಂಘ (ರಿ) ವತಿಯಿಂದ ನಡೆದ ರಾಷ್ಟ್ರೀಯ ದಿನಾಚರಣೆ ಹಾಗೂ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರವರ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬೀದಿ ಬದಿ ವ್ಯಾಪಾರಿಗಳು ಶ್ರಮ ಜೀವಿಗಳಾಗಿದ್ದು, ನಿತ್ಯ ವ್ಯಾಪಾರದಿಂದ ಬದುಕು ನಡೆಸುತ್ತಿರುವುದು ದೈನಿಂದಿನ ವಾಸ್ತವವಾಗಿದೆ. ವೃತ್ತಿಯಲ್ಲಿ ಪ್ರಗತಿ ಸಾಧಿಸಿ ಆರ್ಥಿಕವಾಗಿ ಸದೃಢವಾಗಲು ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿ ಸ್ವಚ್ಛ ಪರಿಸರದ ಜತೆಗೆ ಶುದ್ಧ ಹಾಗೂ ಗುಣಮಟ್ಟದ ತಿನಿಸುಗಳ ಬಗ್ಗೆ ಹೆಚ್ಚು ನಿಗಾವಹಿಸಬೇಕು. ಇದರಿಂದ ಗ್ರಾಹಕರ ಹಿತಾಸಕ್ತಿಯನ್ನು ಸಹ ಕಾಪಾಡಬಹುದಾಗಿದೆ ಎಂದು ಹೇಳಿದರು.ಪಟ್ಟಣದಲ್ಲಿ ಬೀದಿ ಬದಿ ವ್ಯಾಪಾರಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ವಿವಿದೆಡೆ ಹಂಚಿ ಹೋಗಿದ್ದಾರೆ. ಎಲ್ಲರನ್ನು ಒಗ್ಗೂಡಿಸಿ ಫುಡ್ ಕೋರ್ಟ್ ನಿರ್ಮಾಣದ ಮೂಲಕ ವ್ಯಾಪಾರಸ್ಥರ ಜತೆ ಗ್ರಾಹಕರ ಹಿತ ಕಾಪಾಡಲು ಬದ್ಧನಾಗಿರುವುದಾಗಿ ತಿಳಿಸಿದ ಅವರು, ಸಸ್ಯಹಾರಿ ಹಾಗೂ ಮಾಂಸಹಾರಿ ತಿನಿಸುಗಳ ಪ್ರತ್ಯೇಕ ಮಳಿಗೆ ಮೂಲಕ ಮಾದರಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಗಮನ ಹರಿಸುವುದಾಗಿ ತಿಳಿಸಿದರು.ಜಿಲ್ಲಾ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಎಲ್ಲೆಡೆ ಹರಿದು ಹಂಚಿ ಹೋಗಿದ್ದು, ಎಲ್ಲರನ್ನು ಒಗ್ಗೂಡಿಸಿ ಸಂಘಟನೆ ಸದೃಢಗೊಳಿಸುವ ದಿಸೆಯಲ್ಲಿ ಜಿಲ್ಲಾ ಸಂಘ ಸಕ್ರಿಯವಾಗಿದೆ. ಈಗಾಗಲೇ ಗ್ರಾಮೀಣ ಭಾಗಕ್ಕೆ ತೆರಳಿ ಪ್ರತಿಯೊಬ್ಬ ಬೀದಿ ಬದಿ ವ್ಯಾಪಾರಿಯನ್ನು ಸಂಘಟನೆ ಮೂಲಕ ಗುರುತಿಸಿಕೊಳ್ಳುವಂತೆ ಹೆಚ್ಚಿನ ನಿಗಾವಹಿಸಲಾಗಿದೆ ಎಂದರು.

ಖ್ಯಾತ ಉರ್ದು ಸಾಹಿತಿ, ಅಂಜುಮನ್ ಎ ಇಸ್ಲಾಂ ಜಾಮೀಯಾ ಮಸ್ಜಿದ್ ಕಮಿಟಿ ಅಧ್ಯಕ್ಷ ಡಾ. ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರಲ್ಲಿ ಒಗ್ಗಟ್ಟು ಬಹು ಮುಖ್ಯವಾಗಿದ್ದು, ಜಾತಿ ಮತ ಬೇಧವಿಲ್ಲದೆ ಪ್ರತಿಯೊಬ್ಬರೂ ಶ್ರಮವಹಿಸಿ ದುಡಿಮೆ ಮೂಲಕ ಬದುಕು ಕಟ್ಟಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸದರ ಸಹಿತ ಗಣ್ಯರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ತಾ.ಸಂಘದ ಅಧ್ಯಕ್ಷ ಕೃಷ್ಣಪ್ಪ ಪಾನಿಪೂರಿ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ಪುರಸಭಾ ಮಾಜಿ ಸದಸ್ಯ ಮಹೇಶ್ ಹುಲ್ಮಾರ್, ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯ ಗೋಣಿ ಮಾಲತೇಶ್ ಸಂಘದ ಜಿಲ್ಲಾಧ್ಯಕ್ಷ ಮಣಿ ಗೌಂಡರ್, ತಾ.ಸಂಘದ ಉಪಾಧ್ಯಕ್ಷ ಅಬ್ದುಲ್ ಕರೀಂ,ಬಸವರಾಜ್,ಕಿರಣ್ ಕುಮಾರ್,ರುದ್ರೇಶ್,ಪ್ರಸನ್ನಕುಮಾರ್,ಗಿಡ್ಡಪ್ಪ, ರಾಜಣ್ಣ,ನಾಗರತ್ನಮ್ಮ,ತಾಹೀರಾಭಾನು,ದುರ್ಗಮ್ಮ,ಭೋಗಿ ಚೇತನ್,ನಗರದ ಅಶೋಕಪ್ಪ ಮತ್ತಿತರರು ಉಪಸ್ಥಿತರಿದ್ದರು.