ರೀಲ್ಸ್‌ಗಾಗಿ ಪೆಟ್ರೋಲ್‌ ಬಾಂಬ್‌ ಸಿಡಿಸಿದ ವಿದ್ಯಾರ್ಥಿಗಳು

| Published : Nov 15 2024, 12:32 AM IST

ಸಾರಾಂಶ

ಚನ್ನಪಟ್ಟಣ ಬೈಪಾಸ್‌ ಬಳಿ ಇರುವ ರಾಜೀವ್ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳು ರೀಲ್ಸ್ ಮಾಡುವ ಉದ್ದೇಶದಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ. ಸಾಲದ್ದಕ್ಕೆ ಅದನ್ನು ವೀಡಿಯೋ ಮಾಡಿ ಇನ್ಸ್ಟಾಗ್ರಾಮಿನಲ್ಲಿ ಅಪ್‌ಲೋಡ್‌ ಮಾಡಿ ತೀವ್ರ ಟೀಕೆಗೆ ಒಳಗಾಗಿದ್ದಾರೆ. ಪೊಲೀಸರು ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಮೂವರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ದಂಡ ವಿಧಿಸಲಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ರೀಲ್ಸ್‌ ಹುಚ್ಚಿಗೆ ಬಿದ್ದು ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಎಚ್‌ಪಿಸಿಎಲ್‌ ತೈಲ ಘಟಕದ ಬಳಿ ಪೆಟ್ರೋಲ್‌ ಬಾಂಬ್‌ ಸಿಡಿಸಿ ಅದರ ವೀಡಿಯೋವನ್ನು ಇನ್ಸ್ಟಾಗ್ರಾಮ್‌ಗೆ ಹಾಕಿದ್ದ ಮೂವರು ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ನಗರದ ಚನ್ನಪಟ್ಟಣ ಬೈಪಾಸ್‌ ಬಳಿ ಇರುವ ರಾಜೀವ್ ಆರ್ಯುವೇದ ಕಾಲೇಜಿನ ವಿದ್ಯಾರ್ಥಿಗಳು ರೀಲ್ಸ್ ಮಾಡುವ ಉದ್ದೇಶದಲ್ಲಿ ಪೆಟ್ರೋಲ್ ಬಾಂಬ್ ಸ್ಫೋಟಿಸಿ ಹುಚ್ಚಾಟ ಪ್ರದರ್ಶನ ಮಾಡಿದ್ದಾರೆ. ಸಾಲದ್ದಕ್ಕೆ ಅದನ್ನು ವೀಡಿಯೋ ಮಾಡಿ ಇನ್ಸ್ಟಾಗ್ರಾಮಿನಲ್ಲಿ ಅಪ್‌ಲೋಡ್‌ ಮಾಡಿ ತೀವ್ರ ಟೀಕೆಗೆ ಒಳಗಾಗಿದ್ದಾರೆ.

ರಾಜೀವ್ ಆರ್ಯುವೇದ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ಹಾಸನ ನಗರದ ಇಬ್ಬರು ಯುವಕರು ಹಾಗೂ ಕುಣಿಗಲ್ ತಾಲೂಕಿನ ಓರ್ವ ವಿದ್ಯಾರ್ಥಿಯಿಂದ ಈ ಹುಚ್ಚಾಟ ನಡೆದಿದೆ. ಪ್ಲಾಸ್ಟಿಕ್ ಕವರ್‌ ಒಳಗೆ ಪೆಟ್ರೋಲ್ ತುಂಬಿಸಿ ಅದರ ಮೇಲೆ ಆಟಂಬಾಂಬ್ ಇಟ್ಟು ಬೆಂಕಿಯನ್ನು ಹಚ್ಚಿದ್ದಾರೆ. ಈ ವೇಳೆ ಭಾರಿ ಪ್ರಮಾಣದಲ್ಲಿ ಸ್ಫೋಟವಾಗಿದೆ. ಅದರ ಸದ್ದಿಗೆ ಅಕ್ಕಪಕ್ಕದ ನಿವಾಸಿಗಳು ಹಾಗೂ ಪಾದಚಾರಿಗಳು ಬೆದರಿದ್ದಾರೆ.

ಪೆಟ್ರೋಲ್ ಬಾಂಬ್ ಸ್ಫೋಟಿಸುವ ವಿಡಿಯೋ ಮಾಡಿ ಇನ್ಸ್ಟಾಗ್ರಾಂನಲ್ಲಿ ವಿದ್ಯಾರ್ಥಿಗಳು ಅಪ್‌ಲೋಡ್ ಮಾಡಿದ್ದಾರೆ. ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಕರ್ನಾಟಕ ಪೊಲೀಸ್ ಕಾಯ್ದೆಯಡಿ ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು ಮಾಡಿ ಮೂವರನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.

ಸ್ವಲ್ಪ ದೂರದಲ್ಲೇ ಇತ್ತು ಎಚ್‌ ಪಿಸಿಎಲ್

ಪೆಟ್ರೋಲ್ ಬಾಂಬ್ ಸ್ಫೋಟಗೊಂಡ ಸಲ್ಪ ದೂಲ್ಲದಲ್ಲೇ ಎಚ್‌ಪಿಸಿಎಲ್‌ ಇದ್ದು, ನೂರಾರು ಪೆಟ್ರೋಲ್ ಟ್ಯಾಂಕರ್‌ಗಳು ಕೂಡ ಸಾಲು ಸಾಲಾಗಿ ನಿಂತಿದ್ದವು. ಇದ್ಯಾವುದರ ತಿಳಿವಳಿಕೆ ಇಲ್ಲದಂತೆ ಈ ಪೆಟ್ರೋಲ್ ಬಾಂಬನ್ನು ವಿದ್ಯಾರ್ಥಿಗಳು ಸ್ಫೋಟಿಸಿದ್ದಾರೆ. ಸಲ್ಪ ವ್ಯತ್ಯಾಸವಾಗಿದ್ದರೂ ಬಾರಿ ಅವಘಡವೇ ಸಂಭವಿಸುತ್ತಿತ್ತು.

ಹಿಂದೂಸ್ಥಾನ್‌ ಪೆಟ್ರೋಲಿಯಂ ನ ತೈಲ ಘಟಕದಲ್ಲಿ ಲಕ್ಷಾಂತರ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲನ್ನ ದೊಡ್ಡದೊಡ್ಡ ಟ್ಯಾಂಕುಗಳಲ್ಲಿ ದಾಸ್ತಾನು ಮಾಡಲಾಗಿರುತ್ತದೆ. ನಂತರ ಅಲ್ಲಿಂದ ಟ್ಯಾಂಕರ್‌ ಟ್ರಕ್‌ಗಳ ಮೂಲಕ ಮೈಸೂರು, ಮಂಡ್ಯ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಹಾಗಾಗಿ ಎಚ್‌ಪಿಸಿಎಲ್‌ನಲ್ಲಿ ಪೆಟ್ರೋಲ್‌ ಅಥವಾ ಡೀಸೆಲ್‌ ತುಂಬಿಸಿಕೊಂಡ ಟ್ಯಾಂಕರ್‌ಗಳು ಇದೇ ರಸ್ತೆಯಲ್ಲಿ ಸಾಲುಸಾಲಾಗಿ ನಿಂತಿರುತ್ತವೆ. ಒಂದು ವೇಳೆ ವಿದ್ಯಾರ್ಥಿಗಳ ಈ ಹುಚ್ಚಾಟದಿಂದ ಅಗ್ನಿ ಅವಘಡವೇನಾದರೂ ಸಂಭವಿದ್ದಲ್ಲಿ ಭಾರೀ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು.

ಓದಲು ಬಂದ ವಿದ್ಯಾರ್ಥಿಗಳಲ್ಲಿ ಇಂತಹ ಹುಚ್ಚಾಟ ಬೇಕಾಗಿತ್ತಾ! ಇಂತಹ ವಿದ್ಯಾರ್ಥಿಗಳು ಸಮಾಜದಲ್ಲಿ ಮಾರಕ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುತ್ತಿದ್ದಾರೆ.

* ಬಾಕ್ಸ್‌ನ್ಯೂಸ್‌.......ರೀಲ್ಸ್‌ ಹುಚ್ಚಿಗೆ ಕಡಿವಾಣ ಹಾಕಿಬೇಕಿದೆ

ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆವರಣ ಹಾಗೂ ಕಾಲೇಜಿನ ಆಸುಪಾಸಿನಲ್ಲೇ ತಮ್ಮ ರೀಲ್ಸ್‌ ಹುಚ್ಚಿಗೆ ಏನೆಲ್ಲಾ ಅವಾಂತರ ಸೃಷ್ಟಿಸುತ್ತಿದ್ದಾರೆ. ಕಾಲೇಜಿನ ಆವರಣವಷ್ಟೇ ಅಲ್ಲ, ಕ್ಲಾಸ್‌ ರೂಮಿನ ಒಳಗೂ ಕೂಡ ಹಲವು ರೀಲ್ಸ್‌ಗಳನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಕಾಲೇಜಿನ ಮುಂದಿನ ರಸ್ತೆಗಳಲ್ಲಿ ಹಾಗೂ ಹೆದ್ದಾರಿಗಳಲ್ಲಿ ಕೂಡ ಹುಚ್ಚಾಟಗಳನ್ನು ಮಾಡಿ ಫೇಸ್‌ಬುಕ್‌, ಟೆಲಿಗ್ರಾಂ, ಇನ್ಸ್ಟಾಗ್ರಾಮ್‌ ಗಳಲ್ಲಿ ಹರಿಬಿಡುತ್ತಿದ್ದಾರೆ. ಇದರಿಂದ ರೀಲ್ಸ್‌ ಮಾಡಲು ಹೋದವರು ಕೂಡ ಸಂಕಷ್ಟಗಳಿಗೆ ಸಿಲುಕಿದ್ದಾರೆ. ಕೆಲವೊಮ್ಮೆ ಅಮಾಯಕರು ಸಮಸ್ಯೆ ಎದುರಿಸುವಂತಾಗಿದೆ. ಹಾಗಾಗಿ ಕಾಲೇಜುಗಳಲ್ಲಿ ಅಥವಾ ಕಾಲೇಜಿನ ಸುತ್ತಮುತ್ತ ಇಂತಹ ಹುಚ್ಚಾಟಗಳಿಗೆ ಕಾಲೇಜಿನವರು ಕಡಿವಾಣ ಹಾಕದಿದ್ದಲ್ಲಿ ಇಂತಹ ಅನಾಹುತಗಳು ಆಗಿಂದಾಗ್ಗೆ ಸಂಭವಿಸುತ್ತಲೇ ಇರುತ್ತವೆ.