ಹೆಚ್ಚಿದ ಟ್ಯಾಂಕರ್‌ ನೀರಿನ ಬೇಡಿಕೆ

| Published : Apr 03 2024, 01:34 AM IST

ಸಾರಾಂಶ

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಕುಡಿಯುವ ನೀರಿಗಾಗಿ ಗ್ರಾಮಗಳಿಂದ ಟ್ಯಾಂಕರ್ಗಳ ಬೇಡಿಕೆ ಹೆಚ್ಚಾಗುತ್ತಿದೆ. ತಾಲೂಕು ಆಡಳಿತ ಕುಡಿಯುವ ನೀರಿಗಾಗಿ 165 ಟ್ಯಾಂಕರ್ಗಳ ಮೂಲಕ ಪ್ರತಿನಿತ್ಯ 401 ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಅನುಮತಿ ನೀಡಿದೆ. ಈ ಮೂಲಕ ತಾಲೂಕಿನಲ್ಲಿ ನೀರಿನ ಅಭಾವ ತಾರಕಕ್ಕೇರುತ್ತಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾದಂತೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಕುಡಿಯುವ ನೀರಿಗಾಗಿ ಗ್ರಾಮಗಳಿಂದ ಟ್ಯಾಂಕರ್‌ಗಳ ಬೇಡಿಕೆ ಹೆಚ್ಚಾಗುತ್ತಿದೆ. ತಾಲೂಕು ಆಡಳಿತ ಕುಡಿಯುವ ನೀರಿಗಾಗಿ 165 ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ 401 ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಅನುಮತಿ ನೀಡಿದೆ. ಈ ಮೂಲಕ ತಾಲೂಕಿನಲ್ಲಿ ನೀರಿನ ಅಭಾವ ತಾರಕಕ್ಕೇರುತ್ತಿದೆ.

ತಾಲೂಕು ಆಡಳಿತ ಯುದ್ಧೋಪಾದಿಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಪರಿಹರಿಸುವಲ್ಲಿ ಪ್ರಯತ್ನಿಸುತ್ತಿದೆ. ಆದರೂ, ಗ್ರಾಮೀಣ ಜನರು ಹಾಗೂ ಜನವಸತಿ ಪ್ರದೇಶದ ಜನರು ಟ್ಯಾಂಕರ್‌ಗಾಗಿ ನಿತ್ಯ ಕಾಯುವ ಪರಿಸ್ಥಿತಿ ಉಂಟಾಗಿದೆ. ಮಾರ್ಚ್‌ ತಿಂಗಳು ಮುಗಿಯುವಷ್ಟರಲ್ಲಿ ತಾಲೂಕು ಆಡಳಿತ ಚಡಚಣ ಹಾಗೂ ಇಂಡಿ ತಾಲೂಕಿನ ಒಟ್ಟು 52 ಗ್ರಾಪಂಗಳಲ್ಲಿ ಈಗಾಗಲೇ 27 ಗ್ರಾಪಂಗಳ ವ್ಯಾಪ್ತಿಯ 44 ಗ್ರಾಮಗಳಿಗೆ 165 ಟ್ಯಾಂಕರ್‌ಗಳ ಮೂಲಕ ಪ್ರತಿನಿತ್ಯ 401 ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲು ಆರಂಭಿಸಿದೆ.

ಮಳೆಯಾಗದಿದ್ದರೆ ಭೀಕರ ಸಮಸ್ಯೆ:

ಬೇಸಿಗೆಗೆ ಏಪ್ರಿಲ್‌, ಮೇ ತಿಂಗಳು ಇನ್ನೂ ಬಾಕಿ ಇರುವುದರಿಂದ ಅಷ್ಟರೊಳಗಾಗಿ ವರುಣ ದೇವ ಕರುಣೆ ತೋರಿದರೆ ಮಾತ್ರ ತಾಲೂಕಿನ ಜನರು ಕುಡಿಯುವ ನೀರು ಪಡೆಯಲು ಸಾಧ್ಯ. ಇಲ್ಲವಾದರೆ ಕುಡಿಯುವ ನೀರಿನ ತೊಂದರೆ ಭೀಕರಗೊಳ್ಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ತಾಲೂಕು ಆಡಳಿತ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಟ್ಯಾಂಕರ್‌ಗಳಿಗೆ ಮಂಜೂರು ನೀಡುತ್ತದೆ. ಆದರೆ ಜೀವಜಲ(ನೀರು) ಬೇಕಲ್ಲ. ತಾಲೂಕಿನಲ್ಲಿ ಈಗಾಗಲೇ 1100 ಅಡಿ ಅಂತರ್ಜಲ ಆಳಕ್ಕೆ ತಲುಪಿದೆ. ಇನ್ನೆರಡು ತಿಂಗಳಲ್ಲಿ ಅಂತರ್ಜಲಮಟ್ಟ ಎಷ್ಟು ಆಳಕ್ಕೆ ಇಳಿಯಲಿದೆ ಎಂಬುದು ಯೋಚಿಸಬೇಕಿದೆ. ಅಧಿಕಾರಿಗಳು ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಕೆರೆಗಳನ್ನು ಮಾತ್ರ ತುಂಬಿಸುವ ಕಾರ್ಯ ಮಾಡಿದ್ದಾರೆ. ಆದರೆ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಯಿಂದ ಉಳಿದುಕೊಂಡಿರುವ ಗ್ರಾಮಗಳಿಗೆ ನೀರು ಒದಗಿಸಲು ಟ್ಯಾಂಕರ್‌ಗಳಿಗೆ ಎಲ್ಲಿಂದ ನೀರು ಒದಗಿಸಬೇಕು ಎಂಬ ಚಿಂತೆ ಟ್ಯಾಂಕರ್‌ ಮಾಲೀಕರದ್ದಾಗಿದೆ.

ಟ್ಯಾಂಕರ್‌ ನೀರು ಬೇಡ, ಶಾಶ್ವತ ಪರಿಹಾರ ಕಲ್ಪಿಸಿಕೊಡಿ:

ನಮಗೆ ಟ್ಯಾಂಕರ್‌ ಮೂಲಕ ನೀರು ಬೇಡ. ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಪರಿಹಾರವಾಗುವ ಯೋಜನೆ ರೂಪಿಸಬೇಕು ಎಂಬುವುದು ಕುಡಿಯುವ ನೀರಿನ ಸಮಸ್ಯೆಯಿಂದ ಬಸವಳಿಯುತ್ತಿರುವ ಗ್ರಾಮಗಳ ಗ್ರಾಮಸ್ಥರ ಆಗ್ರಹವಾಗಿದೆ.

ಕುಡಿಯುವ ನೀರಿನ ಭವಣೆಯನ್ನು ತಪ್ಪಿಸಲು ತಾಲೂಕು ಆಡಳಿತ ಗ್ರಾಮಗಳ ಹಾಗೂ ಜನವಸತಿ ಪ್ರದೇಶದಲ್ಲಿನ ಜನಸಂಖ್ಯೆ, ಜಾನುವಾರುಗಳಿಗೆ ನಿತ್ಯ ಬೇಕಾಗುವ ನೀರಿನ ಪ್ರಮಾಣದ ಅಂದಾಜಿನ ಮಾನದಂಡವನ್ನು ಇಟ್ಟುಕೊಂಡು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಅನುಮತಿ ನೀಡುತ್ತಿದೆ. ಆದರೆ, ಇದು ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುತ್ತಿದೆ ಎಂಬುದು ರೈತರ ಅಳಲು.

---

ನಿತ್ಯ ಟ್ಯಾಂಕರ್‌ ದಾರಿ ಕಾಯಬೇಕು:

ಟ್ಯಾಂಕರ್‌ ದಾರಿ ಕಾಯುತ್ತ ಕುಳಿತರೆ, ಉದ್ಯೋಗ ತಪ್ಪುತ್ತದೆ. ಕೂಲಿ ಕೆಲಸಕ್ಕೆ ಹೋದರೆ ಟ್ಯಾಂಕರ್‌ ನೀರು ಸಿಗುವುದಿಲ್ಲ. ಹೀಗಾಗಿ ಕುಡಿಯುವ ನೀರು ಪಡೆಯಲು ಮಕ್ಕಳು, ಮಹಿಳೆಯರು ನಿತ್ಯ ಟ್ಯಾಂಕರ್‌ ಮೂಲಕ ನೀರು ಪಡೆಯಲು ಹರಸಾಹಸ ಪಡಬೇಕಾಗಿದೆ. ಕೆಲವೊಂದು ಕುಟುಂಬಗಳು ಟ್ಯಾಂಕರ್‌ ಬಂದರೆ ನೀರು ತುಂಬಿಸಿಕೊಳ್ಳಲು ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೂಲಿಕೆಲಸಕ್ಕೆ ಹೋಗುತ್ತಿದ್ದಾರೆ.

---

ಜಾನುವಾರು ಸಾಕುವುದು ಕಷ್ಟ

ಹೊಲದಲ್ಲಿ ಮೇವು ಇಲ್ಲ, ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಇವು ಎರಡು ಸಮಸ್ಯೆಗಳ ಮಧ್ಯ ಜಾನುವಾರುಗಳನ್ನು ಸಾಕುವುದು ಹೇಗೆ ಎಂಬ ಪ್ರಶ್ನೆ ರೈತರದ್ದಾಗಿದೆ. ಗ್ರಾಮ ಪಂಚಾಯಿತಿ ನರೇಗಾ ಯೋಜನೆ ಮೂಲಕ ಪ್ರತಿ ರೈತರ ಹೆಸರಿನಲ್ಲಿ ಒಂದೊಂದು ಕುಡಿಯುವ ನೀರಿನ ತೊಟ್ಟಿಯನ್ನು ನಿರ್ಮಿಸಿ, ಅದರಲ್ಲಿ ಟ್ಯಾಂಕರ್‌ ಮೂಲಕ ನೀರು ತುಂಬಿಸಿದರೆ ,ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗಲಿದೆ ಎಂಬ ಸಲಹೆ ರೈತರದ್ದಾಗಿದೆ. ಪಶು ಆಸ್ಪತ್ರೆಯ ವೈದ್ಯಾಧಿಕಾರಿಗಳ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ ದೊಡ್ಡ ಹಾಗೂ ಸಣ್ಣ ಪ್ರಮಾಣದ ಸುಮಾರು 1.70 ಲಕ್ಷ ಜಾನುವಾರುಗಳು ಇವೆ. ಇಷ್ಟು ಜಾನುವಾರುಗಳಿಗೂ ಜನರಿಗೆ ಟ್ಯಾಂಕರ್‌ ಮೂಲಕ ನೀರು ತಲುಪಿದಂತೆ ನೀರು ಪೊರೈಕೆ ಮಾಡುವುದರ ಜೊತೆಗೆ ಟ್ಯಾಂಕರ್‌ಗಳ ಸಂಖ್ಯೆ ಏರಿಕೆ ಮಾಡುವುದು ಅಗತ್ಯವಾಗಿದೆ.

--

ಕೋಟ್‌ 1:

ಇಂಡಿ ತಾಲೂಕಿನಲ್ಲಿ ಈಗಾಗಲೇ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಇರುವ ಕೆರೆಗಳಿಗೆ ನೀರು ತುಂಬಿಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತಿದೆ. ಟ್ಯಾಂಕರ್‌ಗಳಿಗೆ ನೀರು ಸಿಗದೇ ಇರುವಂತ ಪರಿಸ್ಥಿತಿ ಇನ್ನೂ ಉದ್ಭವಿಸಿರುವುದಿಲ್ಲ. ಅಂತರ್ಜಲಮಟ್ಟ ಕುಸಿದು ಟ್ಯಾಂಕರ್‌ಗಳಿಗೆ ನೀರು ಸಿಗದೇ ಇರುವ ಪರಿಸ್ಥಿತಿ ಬಂದರೆ ಮೇಲಧಿಕಾರಿಗಳ ಮಾರ್ಗದರ್ಶನ ಪಡೆದು ಏನು ಮಾಡಬೇಕು ಎಂಬುದು ಚಿಂತನೆ ಮಾಡಲಾಗುತ್ತದೆ.

-ಅಬೀದ್‌ ಗದ್ಯಾಳ, ಎಸಿ, ಇಂಡಿ.

--

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುವುದಕ್ಕಿಂತ ಮುಂಚೆಯೇ ಕುಡಿಯುವ ನೀರಿಗಾಗಿ ಏನು ಕ್ರಮಕೈಗೊಳ್ಳಬೇಕು ಎಂಬುವುದನ್ನು ಮುನ್ನೆಚ್ಚರಿಕೆಗಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಗ್ರಾಮಗಳ ಪಟ್ಟಿ ತಯಾರಿಸಿಕೊಳ್ಳಲು ಈಗಾಗಲೇ ಎಲ್ಲ ಗ್ರಾಪಂ ಪಿಡಿಒಗಳಿಗೆ ಸೂಚಿಸಲಾಗಿದೆ. ಚುನಾವಣೆ ಕರ್ತವ್ಯ ಹಾಗೂ ಬೇಸಿಗೆಯ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ ಗ್ರಾಪಂ ಪಿಡಿಒಗಳು ಕೇಂದ್ರ ಸ್ಥಾನ ಬಿಟ್ಟು ಹೋಗಬಾರದು ಎಂದು ತಿಳಿಸಲಾಗಿದೆ. ಯಾವುದೇ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಅದಕ್ಕೆ ಸಂಬಂಧಿಸಿದ ಗ್ರಾಪಂ ಪಿಡಿಒ ಅವರನ್ನೇ ಹೊಣೆಯನ್ನಾಗಿ ಮಾಡಲಾಗುತ್ತದೆ.

-ನೀಲಗಂಗಾ, ಇಒ, ತಾಪಂ ಇಂಡಿ.