ಹಣದಾಸೆಗೆ ಕರಗುತ್ತಿವೆ ಮಲೆನಾಡಿನ ಗುಡ್ಡಗಳು!

| Published : Apr 03 2024, 01:34 AM IST

ಸಾರಾಂಶ

ಮಲೆನಾಡಿನಲ್ಲಿ ಗೋಮಾಳ, ಕಂದಾಯ ಭೂಮಿ, ಅರಣ್ಯ ಪ್ರದೇಶ, ಖಾಸಗಿ ಒಡೆತನದ ಖುಷ್ಕಿ ಬಗೆದು ಮಣ್ಣು ಮಾರುವ ದಂಧೆ ಅವ್ಯಾಹತವಾಗಿ ಸಾಗಿದೆ.

ಕಲಗಾರು ಲಕ್ಷ್ಮೀನಾರಾಯಣ ಹೆಗಡೆಕನ್ನಡಪ್ರಭ ವಾರ್ತೆ ತಾಳಗುಪ್ಪ

ಪಶ್ಚಿಮ ಘಟ್ಟದ ಪ್ರಮುಖ ತಾಣವಾದ ಮಲೆನಾಡಿನಲ್ಲಿ ಗೋಮಾಳ, ಕಂದಾಯ ಭೂಮಿ, ಅರಣ್ಯ ಪ್ರದೇಶ, ಖಾಸಗಿ ಒಡೆತನದ ಖುಷ್ಕಿ ಬಗೆದು ಮಣ್ಣು ಮಾರುವ ದಂಧೆ ಅವ್ಯಾಹತವಾಗಿ ಸಾಗಿದೆ. ಹಣದಾಸೆಗೆ ಗುಡ್ಡಗಳು ಕರಗುತ್ತಿದೆ. ಪ್ರಾಕೃತಿಕ ಸೂಕ್ಷ್ಮ ವಲಯದಲ್ಲಿ ಆತಂಕ ಮನೆ ಮಾಡಿದೆ.

ಆಲಳ್ಳಿ, ಹುಣಸೂರು, ಕಿಬ್ಬಚ್ಚಲು, ಕಾನ್ಲೆ, ಗಡೇಮನೆ, ಬೆಳ್ಳಣ್ಣೆ, ಗುಡ್ಡೇಮನೆ ಮೊದಲಾದ ತಾಳಗುಪ್ಪ ಹೋಬಳಿಯ ಊರುಗಳೊಂದೇ ಅಲ್ಲದೆ ಸಾಗರ ತಾಲೂಕಿನ ಇತರ ಪ್ರದೇಶದಲ್ಲಿಯೂ ಮೈ ಕೆತ್ತಿಸಿಕೊಂಡು ಕುರೂಪಿಗಳಾದ ಗುಡ್ಡಗಳು ಕಾಣುತ್ತವೆ. ಜೆಸಿಬಿಯಿಂದ ಬಗೆದು ಲಾರಿ, ಟ್ರಾಕ್ಟರ್‌ಗಳಲ್ಲಿ ಮಣ್ಣು ಸಾಗಿಸುತ್ತಿರುವುದು ಮಲೆನಾಡ ಭಾಗದಲ್ಲಿ ನಿತ್ಯದ ದೃಶ್ಯವಾಗಿದೆ.

ಬತ್ತದ ಗದ್ದೆಗಳನ್ನು ಎತ್ತರಿಸಲು, ಲೇ ಔಟ್ ಸಮತಟ್ಟುಗೊಳಿಸಲು, ರಸ್ತೆ ಕಾಮಗಾರಿ, ಹೊಸತೋಟ ನಿರ್ಮಾಣ ಮೊದಲಾದ ಕಾರ್ಯಗಳಿಗೆ ಈ ಮಣ್ಣು ಬಳಕೆ ಯಾಗುತ್ತಿದೆ. ಒಂದು ಟಿಪ್ಪರ್‌ ಲೋಡ್ ಮಣ್ಣಿಗೆ 1500 - 2000 ರು.ಗಳಿಗೆ ಬಿಕರಿಯಾಗುತ್ತಿವೆ ಎನ್ನಲಾಗಿದೆ.

ಪರಿಸರ ಸೂಕ್ಷ್ಮ ವಲಯ: ಪಶ್ಚಿಮಘಟ್ಟದ ಹಲವು ಭಾಗಗಳು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. ಈ ಪ್ರದೇಶದಲ್ಲಿ ಹಲವು ಕಾಮಗಾರಿಗಳನ್ನು ನಿರ್ಬಂಧಿಸಲು ಇನ್ನೂ ಅಂಗಿಕಾರಗೊಳ್ಳದ ಕಸ್ತೂರಿ ರಂಗನ್ ವರದಿ ಶಿಫಾರಸು ಮಾಡಿದೆ. 1918 ಚದರ ಕಿ.ಮೀ. ವ್ಯಾಪ್ತಿಯ ಸಾಗರ ತಾಲೂಕಿನಲ್ಲಿ 1363 ಚದರ ಕಿ.ಮೀ. ಪರಿಸರ ಸೂಕ್ಷ್ಮ ಪ್ರದೇಶ ವಲಯ ಎಂದು ಗುರುತಿಸಲಾಗಿದ್ದು, 134 ಗ್ರಾಮಗಳು ಈ ವಲಯದಲ್ಲಿದೆ.

ಶರಾವತಿ ವನ್ಯಜೀವಿ ವಲಯವು ಸಹ ತನ್ನವಾಸ್ತವ ಗಡಿ ಪ್ರದೇಶದಿಂದ 10 ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯಎಂದು ಗುರುತಿಸಿದ್ದು, ಅಲ್ಲಿ ಗಣಿ ಗಾರಿಕೆ ಸೇರಿದಂತೆ ಹಲವು ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಈ ಸಂಬಂಧ ಅಂತಿಮ ಆದೇಶವು ‘ಪರಿಸರ ಮಂತ್ರಾಲಯ - ಅರಣ್ಯ ಮತ್ತು ಹವಾಮಾನ ಬದಲಾವಣೆ’ ಎಂದು ಘೋಷಿತವಾಗಿ, 2019 ಅಗಸ್ಟ್‌ 2 ರಂದು ಭಾರತ ಸರ್ಕಾರದ ಗೆಜೆಟ್‍ನಲ್ಲಿ ಪ್ರಕಟಗೊಂಡಿದೆ. ಗುರುತಿಸಿದ ಅದಿರು ನಿಕ್ಷೇಪಗಳಲ್ಲಿ ಮಣ್ಣು ಸಾಯಲ್ ಮೈನ್ಸ್‌ ಎಂದು ಹೇಳಲಾಗಿದೆ. ಅದನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲು ನಿರ್ಬಂಧವಿದೆ. ಕೃಷಿ ಉದ್ದೇಶಕ್ಕೆ ಬಳಕೆಗೆ ಪರವಾನಗಿಯ ಮೂಲಕ ಅವಕಾಶವಿದೆಯಾದರೂ ಸದ್ಯದ ಆಡಳಿತಶಾಹಿ ವ್ಯವಸ್ಥೆಯಲ್ಲಿ ಅನುಮತಿ ಪಡೆದುಕೊಳ್ಳುವುದು ಸುಲಭವಲ್ಲ ಎಂಬ ಮಾತುಗಳೂ ವ್ಯಾಪಕವಾಗಿ ಕೇಳಿ ಬರುತ್ತಿದೆ. ಹೀಗಾಗಿ ರೈತರು ಕೂಡ ಅನಿವಾರ್ಯವಾಗಿ ಪರವಾನಗಿ ಪಡೆಯುವ ಗೊಡವೆಗೆ ಹೋಗದೆ ತಮ್ಮ ಪಾಡಿಗೆ ತಾವು ಅಲ್ಪ ಸ್ವಲ್ಪ ಮಣ್ಣು ತೆಗೆಯುತ್ತಿದ್ದಾರೆ. ಆದರೆ ಸಮಸ್ಯೆ ಇದಲ್ಲ. ಹಣದಾಸೆಗೆ, ವಾಣಿಜ್ಯ ಉದ್ದೇಶಕ್ಕೆ ಸರ್ಕಾರಿ ಭೂಮಿಯನ್ನು ಬಗೆದು ಹಸಿರು ವಲಯವನ್ನು ಬರಿದು ಮಾಡುವ ನಿರಂತರ ಮಣ್ಣು ದರೋಡೆ!

ಎಲ್ಲೆಲ್ಲಿ ಮಣ್ಣು ಅಗೆಯಲಾಗಿದೆ?: ತಾಳಗುಪ್ಪ ಹೋಬಳಿಯ ಕಿಬ್ಬಚ್ಚಲು, ಆಲಳ್ಳಿ, ಹುಣಸೂರು, ಗಡೆಮನೆ, ಕಾನ್ಲೆ ಮೊದಲಾದ ಗ್ರಾಮಗಳಲ್ಲಿ ಮಣ್ಣು ಬಗೆತ ಅವ್ಯಾಹತವಾಗಿ ಸಾಗಿದೆ. ಕಿಬ್ಬಚ್ಚಲಿನ ಗೋಮಾಳ ಪ್ರದೇಶದಲ್ಲಿ ಮರತ್ತೂರು ಗ್ರಾಮ ಪಂಚಾಯತಿ ನರೇಗಾ ಯೋಜನೆಯಡಿ ಇಂಗು ಗುಂಡಿ ನಿರ್ಮಾಣ, ಗಿಡ ನೆಡುವುದು ಹಾಗೂ ಸುತ್ತ ಅಗಳ ತೋಡಿ, ಲಕ್ಷಾಂತರ ರು.ಗಳನ್ನು ವಿನಿಯೋಗಿಸಿದೆ. ಆದರೆ ಅದೇ ಪ್ರದೇಶದಲ್ಲಿ ಸಾವಿರಾರು ಲೋಡ್‌ ಮಣ್ಣು ತೆಗೆಯಲಾಗಿದ್ದರೂ ಗ್ರಾಮ ಪಂಚಾಯತಿ ನಿರ್ಲಕ್ಷಿಸಿದೆ. ಆಲಳ್ಳಿ ಹುಣಸೂರು ಹಾಗೂ ಕಾನ್ಲೆಯಲ್ಲಿ ಕೆಲವು ಗುಡ್ಡಗಳು ಸಂಪೂರ್ಣ ನೆಲಸಮವಾಗಿದೆ. ನೆಲಸಮವಾದ ಪ್ರದೇಶದಲ್ಲಿ ಅತಿಕ್ರಮ ಸಾಗುವಳಿಯ ಉದ್ದೇಶವೂ ಕಾಣುತ್ತಿದ್ದು, ಹುಣಸೂರಿನಲ್ಲಿ ಬುಲ್ಡೋಜರ್‌ನಿಂದ ಸಮತಟ್ಟು ಮಾಡಿ, ಮರದ ಬೊಡ್ಡು ಸುಟ್ಟು ತೋಟ ಮಾಡುವ ಸನ್ನಾಹ ನಡೆದಿದೆ. ತಮ್ಮ ಕಣ್ಣೆದುರೇ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದ್ದರೂ ಜಾಗೃತಿ ವಹಿಸಬೇಕಾದ ಕಂದಾಯ ಇಲಾಖೆ, ಅರಣ್ಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಗ್ರಾಮ ಪಂಚಾಯತಿ ಅಧಿಕಾರಿಗಳು ಕಂಡರೂ ಕಾಣದಂತಿರುವುದು ಅವರ ಪರೋಕ್ಷ ಸಹಕಾರವನ್ನು ತೋರಿಸುತ್ತದೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.ಯಾರು ಮಣ್ಣು ತೆಗೆಯಬಹುದು?:

ಕೃಷಿ ಉದ್ದೇಶಕ್ಕೆ ಸರ್ಕಾರಿ ಜಮೀನಿನ ಮಣ್ಣು ಬಳಸಲು ರೈತರಿಗೆ ಅವಕಾಶವಿದ್ದರೂ ಅದಕ್ಕೆ ಕಂದಾಯ ಇಲಾಖೆಯ ಪೂರ್ವಾನುಮತಿ ಅಗತ್ಯ. ರೈತರಿಂದ ಅರ್ಜಿ ಸ್ವೀಕರಿಸಿದ ಕಂದಾಯ ಅಧಿಕಾರಿಗಳು ಸ್ಥಳ ಪರಿಶೀಲಿಸಿ, ಮಣ್ಣುತೆಗೆದ ನಂತರ ಸ್ಥಳವನ್ನು ಸಮತಟ್ಟುಗೊಳಿಸುವ ಷರತ್ತು ವಿಧಿಸಿ ರಾಜಧನ (ರಾಯಲ್ಟಿ) ಕಟ್ಟಿಸಿ ಕೊಂಡು ಅನುಮತಿ ನೀಡುವ ಕ್ರಮ ಇದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ 500 ಅಡಿ ಎತ್ತರದಿಂದ ಹತ್ತು ಸಾವಿರ ಅಡಿ ಎತ್ತರದವರೆಗಿನ ಗುಡ್ಡಗಳಿವೆ. ಗುಡ್ಡದ ಕಾಲು ಕಡಿಯುವುದರಿಂದ ಪಾಕೃತಿಕ ಅಸಮ ತೋಲನವಾಗುತ್ತದೆ. ಗುಡ್ಡ ಕುಸಿಯುತ್ತದೆ ಎನ್ನುತ್ತಾರೆ ತಜ್ಞರು.