ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಕಾರ್ಯಾಗಾರ

| Published : Apr 03 2024, 01:34 AM IST

ಲಿಂಗ ಪತ್ತೆ ನಿಷೇಧ ಕಾಯ್ದೆ ಕುರಿತು ಆರೋಗ್ಯ ಇಲಾಖೆ ಕಾರ್ಯಕರ್ತರಿಗೆ ಕಾರ್ಯಾಗಾರ
Share this Article
  • FB
  • TW
  • Linkdin
  • Email

ಸಾರಾಂಶ

‘ಬೇಟಿ ಬಚವೊ-ಬೇಟಿ ಪಡಾವೊ’ ಜಿಲ್ಲಾ ಮಟ್ಟದ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ಗಾಂಧಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994ರ ಬಗೆಗಿನ ಜಾಗೃತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಗು ಹುಟ್ಟುವಾಗಲೇ ಬದುಕುವ ಹಕ್ಕನ್ನು ಸಾಂವಿಧಾನಿಕವಾಗಿ ಪಡೆದುಕೊಂಡು ಬಂದಿದೆ. ಮಗು ಜನಿಸುವ ಮುನ್ನ ಹಾಗೂ ಜನಿಸಿದ ನಂತರವು ಮಗುವಿನ ರಕ್ಷಣೆಗೆ ಹಲವು ಕಾನೂನುಗಳಿದ್ದು, ಮಗು ಜನಿಸುವ ಮೊದಲೆ ಭ್ರೂಣ ಲಿಂಗ ಪತ್ತೆ ಮಾಡುವುದು ಕಾನೂಬಾಹಿರ ಅಪರಾಧ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಪ್ರಸಾದ್ ಹೇಳಿದ್ದಾರೆ.

2023-24 ನೇ ಸಾಲಿನ ಮಿಶನ್ ಶಕ್ತಿ ಯೋಜನೆಯಯಡಿ ‘ಬೇಟಿ ಬಚವೊ-ಬೇಟಿ ಪಡಾವೊ’ ಜಿಲ್ಲಾ ಮಟ್ಟದ ಕಾರ್ಯಕ್ರಮದ ಅಂಗವಾಗಿ ಮಡಿಕೇರಿ ನಗರದ ಗಾಂಧಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು, ಹಿರಿಯ ಮಹಿಳಾ ಆರೋಗ್ಯ ಸಹಾಯಕಿಯರಿಗೆ ನಡೆದ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994ರ ಬಗೆಗಿನ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಗುವಿನ ಸರ್ವತೋಮುಖ ಬೆಳವಣಿಗೆಗೆ ಪೋಷಕರು ಮಾನಸಿಕ ಹಾಗೂ ಶೈಕ್ಷಣಿಕವಾಗಿ ಸಹಕರಿಸಬೇಕು. ಅಲ್ಲದೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಅವರ ರಕ್ಷಣೆ ಪ್ರತಿಯೊಬ್ಬ ಪೋಷಕರ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ಲಿಂಗ ಪತ್ತೆ ನಿಷೇಧ ಕಾಯ್ದೆ ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಪಾಲೂದಾರಿಕೆಯಾಗಿದೆ. ಇದನ್ನು ಸಮಾಜದಲ್ಲಿರುವ ಮಗು ಹುಟ್ಟುವಾಗಲೇ ತನ್ನ ಹಕ್ಕನ್ನು ಪಡೆದುಕೊಂಡಿದ್ದು ಅದನ್ನು ರಕ್ಷಿಸುವುದು ಕೂಡ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್ ಮಾತನಾಡಿ, ಮೊದಲಿಗೆ ಗರ್ಭಪೂರ್ವ ಮತ್ತು ಪ್ರಸವಪೂರ್ವ ಪತ್ತೆ ತಂತ್ರ ವಿಧಾನಗಳು(ಲಿಂಗ ಆಯ್ಕೆ ನಿಷೇಧ) ಕಾಯ್ದೆ 1994ರ ಬಗ್ಗೆ ಕಾರ್ಯಕರ್ತೆಯರಿಗೆ ವಿಡಿಯೋ ತುಣುಕನ್ನು ಪ್ರದರ್ಶಿಸಿ ಜಾಗೃತಿ ಮೂಡಿಸಿದರು.

ಮಗು ಹುಟ್ಟುವಾಗಲೇ ಕಾಣೆಯಾಗುವುದು, ಹೆಣ್ಣು ಎಂದು ತಿಳಿದ ಕೂಡಲೇ ಗರ್ಭಪಾತ ಮಾಡಿಸಿಕೊಳ್ಳುತ್ತಿರುವುದು ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸಲು ಮುಖ್ಯ ಕಾರಣವಾಗಿದ್ದು, ಪೋಷಕರು ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಲಿಂಗ ಪತ್ತೆಗೆ ಹೆಣ್ಣು ಮಕ್ಕಳನ್ನು ಪ್ರೇರೆಪಿಸಬಾರದು. ಹೆಣ್ಣು ಗಂಡು ಎಂದು ಭೇದಭಾವ ತೋರದೆ ಸಮಾನವಾಗಿ ಕಾಳಜಿವಹಿಸುವಂತೆ ಕರೆ ನೀಡಿದರು.

ಹೆಣ್ಣು ಮಕ್ಕಳ ರಕ್ಷಣೆಗಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳು, ಸಲಹ ಸಮಿತಿಗಳಿದ್ದು 3 ತಿಂಗಳಿಗೆ ಸಭೆಯನ್ನು ಆಯೋಜಿಸುವ ಮೂಲಕ ಸೂಕ್ತ ರೀತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಹರಿಸುತ್ತಿದೆ. ಗ್ರಾಮಮಟ್ಟದಲ್ಲಿ ಈ ರೀತಿ ಪ್ರಕರಣಗಳು ಕಂಡುಬಂದಲ್ಲಿ ಆ ಬಗ್ಗೆ ಮಾಹಿತಿ ನೀಡಿದಲ್ಲಿ ಕಾನೂನು ಪ್ರಕಾರ ಶಿಕ್ಷೆ ನೀಡುವುದಾಗಿ ಮಾಹಿತಿ ನೀಡಿದರು.

ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಡಾ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಸಿಬ್ಬಂದಿ ಹಾಜರಿದ್ದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮಾಹಿತಿ ಸಲಹೆಗಾರ ಜೋಯಪ್ಪ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಟರಾಜ್ ಸ್ವಾಗತಿಸಿ, ವಂದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.