ಸಾರಾಂಶ
- ಅಂಗನವಾಡಿಗಳಲ್ಲಿ ಫ್ಯಾನ್ ಇಲ್ಲದ, ಉಸಿರುಗಟ್ಟುವ ಸ್ಥಿತಿ
- ಅಂಗನವಾಡಿಗಳಲ್ಲಿಲ್ಲ ಮೂಲಸೌಕರ್ಯ- ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತಾಗಿದೆ ಸೋಮರಡ್ಡಿ ಅಳವಂಡಿ
ಕನ್ನಡಪ್ರಭ ವಾರ್ತೆ ಕೊಪ್ಪಳಉಷ್ಣ ಗಾಳಿ ಮತ್ತು ಬಿಸಿಲಿನ ಝಳಕ್ಕೆ ಅಂಗನವಾಡಿಯಲ್ಲಿ ಕಂದಮ್ಮಗಳು ಕುದಿಯುತ್ತಿವೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೂ ಮಕ್ಕಳ ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ.
ಹೌದು. ಅಂಗನವಾಡಿಯಲ್ಲಿರುವ ಕಂದಮ್ಮಗಳ ಪಾಡು ಹೇಳ ತೀರದು. ಬಹುತೇಕ ಅಂಗನವಾಡಿ ಕಟ್ಟಡಗಳಿಗೆ ಕಿಟಕಿಗಳೇ ಇಲ್ಲ. ಇದ್ದರೂ ಸಹ ಅವುಗಳು ತೆರೆಯುವಂತೆ ಇರುವುದಿಲ್ಲ, ಇನ್ನು ಸಂದಿ, ಗೊಂದಿಗಳಲ್ಲಿ, ಗುಡಿಗುಂಡಾರಗಳಲ್ಲಿ ಬಹುತೇಕ ಅಂಗನವಾಡಿಗಳಿವೆ.ಹೀಗೆ, ರಾಜ್ಯಾದ್ಯಂತ ಸರಿಯಾದ ಗಾಳಿ ಮತ್ತು ಬೆಳಕು ಇಲ್ಲದ ಕಟ್ಟಡಗಳಲ್ಲಿ ಮಕ್ಕಳು ಈ ಬಿಸಿಲ ಝಳಕ್ಕೆ ಕುದಿಯುತ್ತಿವೆ, ಬೆಂದು ಹೋಗುತ್ತಿವೆ. ರಾಜ್ಯದ ಅದೆಷ್ಟೋ ಅಂಗನವಾಡಿಗಳಲ್ಲಿ ಫ್ಯಾನ್ ಇಲ್ಲ, ಇದ್ದರೂ ಕರೆಂಟ್ ಇರುವುದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಆ ಮಕ್ಕಳನ್ನು ದೇವರೇ ಬಂದರೂ ಕಾಪಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ.
ಬಿಸಿಯಾಗುವ ನೀರು:ಬಹುತೇಕ ಅಂಗನವಾಡಿಗಳಲ್ಲಿ ಸರಿಯಾಗಿ ನೀರು ಸಹ ಇರುವುದಿಲ್ಲ. ಹೀಗಾಗಿ, ಮಕ್ಕಳೇ ಮನೆಯಿಂದ ಬರುವಾಗ ಬಾಟಲ್ ತೆಗೆದುಕೊಂಡು ಬರಬೇಕಾಗಿದೆ. ಅವುಗಳಲ್ಲಿನ ನೀರು ಮಧ್ಯಾಹ್ನದ ವೇಳೆಗೆ ಬಿಸಿಲಿನ ಝಳಕ್ಕೆ ಕಾದುಹೋಗಿರುತ್ತದೆ. ಹೀಗೆ ಕಾದ ನೀರನ್ನು ಆ ಮಕ್ಕಳು ಕುಡಿಯುವುದಾದರೂ ಹೇಗೆ ಎನ್ನುವುದು ಪಾಲಕರ ಚಿಂತೆಯಾಗಿದೆ.
ಅಷ್ಟಕ್ಕೂ ಆರು ವರ್ಷದವರೆಗೂ ಈ ಹಿಂದೆ ಮಕ್ಕಳು ಮನೆಯಲ್ಲಿಯೇ ಬೆಳೆಯುತ್ತಿದ್ದರು. ಈಗ ಅಂಗನವಾಡಿ, ಬಾಲವಾಡಿ, ಕಾಲ್ಮೆಂಟ್ ಶಾಲೆಗಳು ಪ್ರಾರಂಭವಾದ ಮೇಲೆ ಎರಡುವರೆ ವರ್ಷಕ್ಕೆ ಮಕ್ಕಳನ್ನು ಪಾಠ ಕಲಿಯಲು ಅಂಗನವಾಡಿ ಇಲ್ಲ, ಕಾಲ್ಮೆಂಟ್‌ಗೆ ಕಳುಹಿಸಲಾಗುತ್ತದೆ.ಆದರೆ, ಶಾಲೆಗಳಿಗೆ ರಜೆ ನೀಡಿದರೂ ಸಹ ಕಂದಮ್ಮಗಳು ಓದುವ ಅಂಗನವಾಡಿಗಳಿಗೆ ಬೇಸಿಗೆ ರಜೆ ನೀಡುವುದಿಲ್ಲ. ಬೇಸಿಗೆ ರಜೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅಜ್ಜಿ ಮನೆಗೋ, ಪ್ರವಾಸಕ್ಕೋ ಹೋಗುವ ಸಮಯ ಇರುತ್ತದೆ ಎನ್ನುವುದು ಹಿಂದಿನಿಂದಲೂ ಇರುವ ಸಂಪ್ರದಾಯ. ಆದರೆ, ಅಂಗನವಾಡಿ ಮಕ್ಕಳಿಗೆ ಈ ಬೇಸಿಗೆ ರಜೆಯೂ ಇಲ್ಲ ಎನ್ನುವುದು ಮಾತ್ರ ದುರಂತವೇ ಸರಿ.
ಸಮಯ ಬದಲಾವಣೆ:ಅಂಗನವಾಡಿಗಳ ಸಮಯವನ್ನು ಬದಲಾವಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಜಿ.ಸಿ. ಪ್ರಕಾಶ ಆದೇಶಿಸಿ, ಕಲಬುರಗಿ ವ್ಯಾಪ್ತಿಯ ಏಳು ಜಿಲ್ಲೆಗಳ ಅಂಗನವಾಡಿಗಳ ಸಮಯವನ್ನು ಬೆಳಗ್ಗೆ 8 ರಿಂದ 12 ವರೆಗೂ ಬದಲಾಯಿಸಿ ಆದೇಶಿಸಿದ್ದಾರೆ. ಆದರೆ, ರಾಜ್ಯದ ಇತರೆ ಜಿಲ್ಲೆಗಳಲ್ಲಿ ಮಾತ್ರ ಅಂಗನವಾಡಿಗಳು ಎಂದಿನಂತೆಯೇ ಬೆಳಗ್ಗೆ 10 ಗಂಟೆಯಿಂದ 4 ಗಂಟೆಯವರೆಗೂ ಇರುತ್ತವೆ.
ಹಿಂದಿತ್ತು ರಜೆ:ಈ ಹಿಂದೆ ಅಂಗನವಾಡಿಗಳಿಗೆ ಬೇಸಿಗೆಯಲ್ಲಿ ಹದಿನೈದು ದಿನಗಳ ಕಾಲ ರಜೆ ನೀಡಲಾಗುತ್ತಿತ್ತು. ಮೂರು ವರ್ಷಗಳ ಹಿಂದೆ ಈ ಆದೇಶ ಹಿಂದೆ ಪಡೆದು, ಬೇಸಿಗೆಯಲ್ಲಿಯೂ ತರಗತಿ ನಡೆಸಲಾಗುತ್ತದೆ.