ಶೀತಗಾಳಿಯಿಂದ ಮಕ್ಕಳಲ್ಲಿ ಹೆಚ್ಚಿದ ಜ್ವರ

| Published : Sep 04 2025, 01:00 AM IST

ಸಾರಾಂಶ

ಸರ್ಕಾರಿ ಅಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರ ಕೊಠಡಿಗಳ ಮುಂದೆ ಪೋಷಕರು ಮಕ್ಕಳೊಂದಿಗೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ.

ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ನಿರಂತರ ಮಳೆಯ ಜತೆಗೆ ಶೀತಗಾಳಿ ಹೆಚ್ಚಾಗಿದ್ದು, ಮಕ್ಕಳಲ್ಲಿ ವೈರಲ್ ಜ್ವರ ಹೆಚ್ಚಾಗಿದೆ.ಸರ್ಕಾರಿ ಅಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ವೈದ್ಯರ ಕೊಠಡಿಗಳ ಮುಂದೆ ಪೋಷಕರು ಮಕ್ಕಳೊಂದಿಗೆ ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಮಳೆಯ ಜತೆಗೆ ಶೀತಗಾಳಿ ಹೆಚ್ಚಾಗಿದ್ದರಿಂದ ಹವಾಮಾನದಲ್ಲಿ ಬದಲಾವಣೆಯಾಗಿದೆ. ಇದು ಜನರಲ್ಲಿ ಶೀತ, ನೆಗಡಿ, ಕೆಮ್ಮು, ಗಂಟಲು ನೋವು ಸೇರಿ ಸಾಂಕ್ರಾಮಿಕ ಜ್ವರ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ. ಅದರಲ್ಲೂ ಮಕ್ಕಳಲ್ಲಿ ಜ್ವರ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

ಮಕ್ಕಳು ಶಾಲೆಗೆ ಹೋಗುತ್ತಿರುವುದರಿಂದ ಒಬ್ಬರಿಂದ ಒಬ್ಬರಿಗೆ ಜ್ವರ ಹರಡುವುದು ಹೆಚ್ಚಾಗುತ್ತಿದೆ. ಕೆಲವರು ವಾರಗಟ್ಟಲೆ ಮಕ್ಕಳನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರಿಸಿಕೊಂಡು ಚಿಕಿತ್ಸೆ ಕೊಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ನಿರಂತರ ಶೀತಗಾಳಿ ಜತೆಗೆ ತುಂತುರು ಮಳೆ ಮುಂದುವರಿದಿದೆ. ಮೋಡ ಕವಿದ ವಾತಾವರಣದ ಜತೆಗೆ ಆಗಾಗ ಬಿಸಿಲು ಮುಖ ತೋರಿಸಿ ಮಾಯವಾಗುತ್ತಿದೆ. ವಾತಾವರಣದಲ್ಲಿ ಆಗುತ್ತಿರುವ ಈ ಬದಲಾವಣೆಯ ಕಾರಣ ವೈರಲ್ ಫ್ಲೂ ಪ್ರಕರಣಗಳು ಹೆಚ್ಚಾಗಿವೆ.

ಜ್ವರದಿಂದ ಬಳಲಿ ಆಸ್ಪತ್ರೆಗೆ ಬರುವ ಮಕ್ಕಳ ಸಂಖ್ಯೆ ಕಳೆದ ಒಂದು ವಾರದಲ್ಲಿ ಶೇ. 20 ರಿಂದ 30ರಷ್ಟು ಹೆಚ್ಚಾಗಿದೆ. ಬಿಸಿಲು ಬಾರದ ಕಾರಣ ವಾತಾವರಣದ ಸಮತೋಲನ ತಪ್ಪಿದೆ. ಅನಾರೋಗ್ಯ ತರುವ ವೈರಾಣುಗಳು ಉಲ್ಬಣಗೊಂಡಿವೆ. ಸೇವಿಸುವ ಗಾಳಿ, ನೀರು ಹಾಗೂ ಆಹಾರದಲ್ಲಿ ವೈರಸ್ ಸೇರಿ ಶೀತ, ಕೆಮ್ಮು, ಗಂಟಲು ನೋವು, ಜ್ವರ ಉಂಟು ಮಾಡುತ್ತಿದೆ ಎನ್ನುತ್ತಾರೆ ವೈದ್ಯರು.

ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ ಹೊರರೋಗಿಗಳ ವಿಭಾಗದಲ್ಲಿ ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೂ ಆಸ್ಪತ್ರೆಗಳ ಎದುರು ಪೋಷಕರು ಮಕ್ಕಳನ್ನು ಕರೆದುಕೊಂಡು ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವರಲ್ಲಿ ವಾರವೀಡಿ ಜ್ವರ ತಗ್ಗದೇ, ಆಸ್ಪತ್ರೆಗೆ ದಾಖಲಿಸುವ ಸ್ಥಿತಿ ಕೂಡ ಬಂದಿದೆ.

ಭಯ ಬೇಡ:ಜಿಲ್ಲೆಯಲ್ಲಿ ಶೀತಗಾಳಿಯಿಂದ ಮಕ್ಕಳಲ್ಲಿ ಜ್ವರ, ಶೀತ, ಕೆಮ್ಮು ಸ್ವಲ್ಪ ಹೆಚ್ಚಾಗಿದೆ. ಗಾಬರಿಯಾಗುವ ಸ್ಥಿತಿ ಇಲ್ಲ. ಜ್ವರ ಹೆಚ್ಚಾಗಿರುವುದು ಮತ್ತು ಆಸ್ಪತ್ರೆಗಳಲ್ಲಿ ಸಿಗುತ್ತಿರುವ ಚಿಕಿತ್ಸೆ ಬಗ್ಗೆ ಕಣ್ಗಾವಲು ವಹಿಸಲಾಗಿದೆ. ಜ್ವರ ಬರುತ್ತದೆ, ಹೋಗುತ್ತದೆ. ವಿಶೇಷ ಏನೂ ಇಲ್ಲ. ಬೇರೆ ಸಂದರ್ಭದಲ್ಲಿ ಜ್ವರ ಬಂದಾಗ ವಹಿಸುವ ಎಚ್ಚರಿಕೆಗಳನ್ನು ವಹಿಸಿದರೆ ಸಾಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.

...ಕೋಟ್ ...

ಸಾಮಾನ್ಯವಾಗಿ ಜೂನ್‌ ನಿಂದ ಡಿಸೆಂಬರ್ ವರೆಗೆ ಚಳಿಗಾಲ ಮತ್ತು ಮಳೆಗಾಲ ಆಗಿರುವುದರಿಂದ ಸಣ್ಣ ಮಕ್ಕಳಲ್ಲಿ ಜ್ವರ , ನೆಗಡಿ, ಕೆಮ್ಮಿನ ಲಕ್ಷಣ ಕಾಣಿಸಿಕೊಳ್ಳುತ್ತದೆ. ಆದರೆ, ಕಳೆದ ಎರಡು ವಾರಗಳಿಂದ ಇದರ ಪ್ರಮಾಣ ಹೆಚ್ಚಾಗಿದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವ ಕಾರಣ ಬೇಗನೆ ಅನಾರೋಗ್ಯಕ್ಕೊಳಗಾಗುತ್ತಾರೆ.

- ಡಾ.ಸಂತೋಷ್ ಕುಮಾರ್, ಮಕ್ಕಳ ತಜ್ಞ ವೈದ್ಯರು, ಕಾಂಗರೊ ಕೇರ್ , ರಾಮನಗರ....ಬಾಕ್ಸ್ ....

ನ್ಯುಮೋನಿಯಾಗೆ ಪರಿವರ್ತನೆ ಎಚ್ಚರ :ಸಾಮಾನ್ಯ ಜ್ವರ, ಶೀತದೊಂದಿಗೆ ಆರಂಭವಾಗುವ ವೈರಾಣು ಜ್ವರ ಕೊನೆಯಲ್ಲಿ ನ್ಯುಮೋನಿಯವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಉಸಿರಾಟದ ತೊಂದರೆ, ರಕ್ತದಲ್ಲಿ ಆಮ್ಲಜನಕ ಕೊರತೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಜ್ವರ, ಮೈಕೈ ನೋವು, ತೀವ್ರ ದಣಿವು, ಕಣ್ಣು ಉರಿ, ಶೀತ, ಕಫ, ನೆಗಡಿ ಸತತ ಐದು ದಿನ ಜ್ವರವಿದ್ದರೆ ಡೆಂಗೆ ಪರೀಕ್ಷೆ ಮಾಡಿಕೊಳ್ಳುವುದು ಉತ್ತಮ.

ಅದರಲ್ಲಿಯೂ ಪ್ರಮುಖವಾಗಿ ಕಫ ಹಾಗೂ ಉಸಿರಾಟದ ತೊಂದರೆಯಿರುವ ಮಕ್ಕಳು ನ್ಯುಮೋನಿಯಾಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಹೀಗಾಗಿ ಲಕ್ಷಣಗಳು ಕಂಡುಬಂದ ಕೂಡಲೇ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಬೇಕು ಎನ್ನುತ್ತಾರೆ ವೈದ್ಯರು.

...ಬಾಕ್ಸ್ ...

ಪೋಷಕರೇನು ಮಾಡಬೇಕು? :ತೀವ್ರ ಶೀತಗಾಳಿಯಿರುವ ಕಾರಣದಿಂದಾಗಿ ಮಕ್ಕಳನ್ನು ಶಾಲೆಗೆ ಅಥವಾ ಹೊರಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಕಿವಿಗಳನ್ನು ಮುಚ್ಚಿಕೊಳ್ಳುವ ಟೋಪಿ ಹಾಗೂ ಚಳಿಯಾಗದಂತೆ ತುಂಬು ತೋಳಿನ ಸ್ವೆಟರ್‌ ಧರಿಸುವುದು ಉತ್ತಮ. ಮೂರು ವರ್ಷ ಮೇಲ್ಪಟ್ಟವರು ಮಾಸ್ಕ್‌ ಧರಿಸಬೇಕಿದ್ದು, ಪ್ರತಿಯೊಬ್ಬರೂ ಕಾಯಿಸಿದ ನೀರನ್ನೇ ಕುಡಿಯಬೇಕು. ಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದು, ಪ್ರೋಟಿನ್‌ ಹೆಚ್ಚಾಗಿರುವ ಆಹಾರ ಸೇವನೆ, ಮನೆಯ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಮಕ್ಕಳು ಹಾಗೂ ದೊಡ್ಡವರು ವ್ಯಾಕ್ಸಿನ್‌ ಹಾಕಿಸಿಕೊಂಡರೆ ಕಾಯಿಲೆ ಬೀಳುವುದು ತಪ್ಪಲಿದೆ.