ಘಟಪ್ರಭಾ ನದಿಗೆ ಹೆಚ್ಚಿದ ಹರಿವು - ಜಲಾಶಯದ ಮೇಲ್ಭಾಗದಲ್ಲಿ ಮತ್ತೆ ಹೆಚ್ಚಾದ ಮಳೆ : ನದಿ ಪಾತ್ರದ ಜನರಲ್ಲಿ ಆತಂಕ

| Published : Aug 02 2024, 01:00 AM IST / Updated: Aug 02 2024, 11:41 AM IST

ಘಟಪ್ರಭಾ ನದಿಗೆ ಹೆಚ್ಚಿದ ಹರಿವು - ಜಲಾಶಯದ ಮೇಲ್ಭಾಗದಲ್ಲಿ ಮತ್ತೆ ಹೆಚ್ಚಾದ ಮಳೆ : ನದಿ ಪಾತ್ರದ ಜನರಲ್ಲಿ ಆತಂಕ
Share this Article
  • FB
  • TW
  • Linkdin
  • Email

ಸಾರಾಂಶ

66000 ಕ್ಯುಸೆಕ್‌ ನೀರನ್ನು ಘಟಪ್ರಭಾ ನದಿಗೆ ಹರಿಬಿಟ್ಟಿರುವುದರಿಂದ ಮತ್ತೆ ಘಟಪ್ರಭ ನದಿಗೆ ಪ್ರವಾಹ ಹೆಚ್ಚಳವಾಗಿದೆ. ಹೀಗಾಗಿ ನದಿ ಪಾತ್ರದ ಜನರು ಆತಂಕ ಪಡುವಂತಾಗಿದೆ.

  ಮುಧೋಳ :  ಹಿಡಕಲ್ ಜಲಾಶಯದಿಂದ ಘಟಪ್ರಭ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಮುಧೋಳ-ಚಿಂಚಖಂಡಿ ಸೇತುವೆ ಮೇಲೆ ಗುರುವಾರ ಬೆಳಗ್ಗೆ ವಾಹನ ಸಂಚಾರ ಆರಂಭಗೊಂಡಿತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಮತ್ತೆ ಸೇತುವೆ ಮೇಲೆ ನೀರು ಬಂದಿದ್ದರಿಂದ ವಾಹನ ಸಂಚಾರ ನಿರ್ಬಂಧಿಸಲಾಯಿತು. 66000 ಕ್ಯುಸೆಕ್‌ ನೀರನ್ನು ಘಟಪ್ರಭಾ ನದಿಗೆ ಹಿರಿಬಿಟ್ಟಿರುವುದರಿಂದ ಮತ್ತೆ ಘಟಪ್ರಭ ನದಿಗೆ ಪ್ರವಾಹ ಹೆಚ್ಚಳವಾಗಿದೆ. ಹೀಗಾಗಿ ನದಿ ಪಾತ್ರದ ಜನರು ಆತಂಕ ಪಡುವಂತಾಗಿದೆ.

ಜಲಾಶಯದ ಮೇಲ್ಭಾಗದಲ್ಲಿ ಮತ್ತೆ ಮಳೆ ಆರಂಭವಾಗಿದ್ದರಿಂದ ಜಲಾಶಯದ ಒಳಹರಿವು ಹೆಚ್ಚಾಗಿದ್ದರ ಪರಿಣಾಮ ಗುರುವಾರ ಹಿಡಕಲ್ ಮತ್ತು ಹಿರಣ್ಯಕೇಶಿ ಡ್ಯಾಂನಿಂದ 55,415 ಕ್ಯುಸೆಕ್‌, ಮಾರ್ಕಂಡೆಯ ದಿಂದ 6300 ಕ್ಯುಸೆಕ್‌, ಬಳ್ಳಾರಿ ನಾಲಾದಿಂದ 2174 ಕ್ಯುಸೆಕ್‌ ಸೇರಿದಂತೆ ಒಟ್ಟು 66000 ಕ್ಯುಸೆಕ್‌ ನೀರನ್ನು ಘಟಪ್ರಭಾ ನದಿಗೆ ಹಿರಿಬಿಟ್ಟಿರುವುದರಿಂದ ಮತ್ತೆ ಘಟಪ್ರಭ ನದಿಗೆ ಪ್ರವಾಹ ಹೆಚ್ಚಳವಾಗಿದ್ದರಿಂದ ನದಿ ಪಾತ್ರದ ಜನರು ಆತಂಕ ಪಡುವಂತಾಗಿದೆ.

ಘಟಪ್ರಭ ನದಿಯ ನೀರು ಇನ್ನೇನು ಇಳಿಯುತ್ತೆ ಎನ್ನುವಷ್ಟರಲ್ಲಿ ಮತ್ತೆ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಏರಿಕೆಯಾಗುತ್ತಿರುವುದು ನದಿ ಪಾತ್ರದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಮುಧೋಳ-ಚಿಂಚಖಂಡಿ ಸೇತುವೆ ಮುಳುಗಿ ಮೂರ್ನಾಲ್ಕು ದಿನಗಳಾದವು. ಈ ಸೇತುವೆಯ ಮೇಲೆ ಸಂಚರಿಸುತ್ತಿದ್ದ ವಾಹನಗಳು ಕನಿಷ್ಠ 40 ಕಿಮೀ ಸುತ್ತುವರಿಯಬೇಕಾಗಿದೆ. ಕಳೆದ ಒಂದು ವಾರದಿಂದ ಮುಧೋಳ-ಯಾದವಾಡ ಸೇತುವೆ ಮುಳುಗಿದ್ದು, ಈ ಸೇತುವೆ ಮೇಲೆ ಸಂಚರಿಸುತ್ತಿದ್ದ ವಾಹನಗಳು ಬೇರೆ ಬೇರೆ ಮಾರ್ಗಗಳ ಮುಲಕ ತೆರಳಬೇಕಾಗಿದೆ. ಇದರಿಂದ ಸಮಯ ಮತ್ತು ಪ್ರಯಾಣ ವೆಚ್ಚ ಹೆಚ್ಚಾಗಲಿದೆ ಎಂದು ಪ್ರಯಾಣಿಕರು ಹೇಳುತ್ತಿದ್ದಾರೆ.