ಸಾರಾಂಶ
ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಆ.27ರಂದು ಮುಹೂರ್ತ ನಿಗದಿ । ಕೈ ಅಧಿಕಾರಕ್ಕೆ ಬರುವುದು ಬಹುತೇಕ ಖಚಿತ
ಕನ್ನಡಪ್ರಭ ವಾರ್ತೆ ಕಾರಟಗಿಜಿಲ್ಲೆಯ ಏಕೈಕ ಇಲ್ಲಿನ ಪುರಸಭೆಗೆ ಕೊನೆಗೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಆ.27ರಂದು ಸಮಯ ನಿಗದಿಯಾಗಿದೆ. ಮತ್ತೊಂದೆಡೆ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಬಹುಮತ ಹೊಂದಿದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಒಳಬೇಗುದಿ ಹೆಚ್ಚಾಗಿದೆ.
ಪುರಸಭೆಗೆ ೨೩ ವಾರ್ಡ್‌ಗಳಿಗೆ ಎರಡು ವರ್ಷಗಳಿಂದೆ ಚುನಾವಣೆ ನಡೆದು ಸದಸ್ಯರ ಆಯ್ಕೆಯಾಗಿತ್ತು. ಆದರೆ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿಯಾಗಿರಲಿಲ್ಲ. ಈಗ ಅದಕ್ಕೂ ಸಹ ಮುಹೂರ್ತ ಫಿಕ್ಸ್ ಆಗಿದ್ದು ಆ.೨೭ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಅಧ್ಯಕ್ಷ ಹಿಂದುಳಿದ ವರ್ಗ ಎ ಮತ್ತು ಪರಿಶಿಷ್ಟ ಜಾತಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದೆ.
೨೩ ಸದಸ್ಯರ ಪೈಕಿ 11-ಕಾಂಗ್ರೆಸ್, ೧೧-ಬಿಜೆಪಿ, ಒಬ್ಬರು ಜೆಡಿಎಸ್‌ದಿಂದ ಆಯ್ಕೆಯಾಗಿದ್ದಾರೆ. ೨೧ನೇ ವಾರ್ಡಿನ ಕಾಂಗ್ರೆಸ್ ಸದಸ್ಯ ರಾಮಣ್ಣ ಭಜಂತ್ರಿ ಇತ್ತೀಚೆಗೆ ಮೃತಪಟ್ಟಿದ್ದರಿಂದ ಕಾಂಗ್ರೆಸ್ ಬಲ 10ಕ್ಕೆ ಕುಸಿದಿದೆ.ಕೈ ತೆಕ್ಕೆಗೆ:ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ನಾಲ್ವರು ಮತ್ತು ಬಿಜೆಪಿಯಲ್ಲಿ ಒಬ್ಬರು ಅರ್ಹರಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಅಷ್ಟೊಂದು ಪ್ರಾಮುಖ್ಯ ಇಲ್ಲ. ಕಾಂಗ್ರೆಸ್ ಸಹಜವಾಗಿ ಅಧಿಕಾರ ಹಿಡಿಯುವುದು ಶತಸಿದ್ಧ. ಇನ್ನೂ ಬಿಜೆಪಿ ವಿಪ್ ಜಾರಿ ಮಾಡಿದ್ದರೂ ಸಹ ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಇಬ್ಬರು ಕಾಂಗ್ರೆಸ್‌ದೊಂದಿಗೆ ಗುರುತಿಸಿಕೊಂಡಿದ್ದಾರೆ. ಕಳೆದ ಶನಿವಾರ ರಾತ್ರಿ ಮತ್ತೊಬ್ಬ ಸದಸ್ಯ ಸಚಿವ ಶಿವರಾಜ್ ತಂಗಡಗಿ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ಗೆ ಬೆಂಬಲಿಸಲು ಸಿದ್ಧವಾಗಿದ್ದಾರೆ.
ಲೆಕ್ಕಾಚಾರ ಹುಸಿ:೬ನೇ ವಾರ್ಡಿನ ಹಿರೇಬಸಪ್ಪ ಸಜ್ಜನ್, ೧೦ನೇ ವಾರ್ಡಿನ ಮಂಜುನಾಥ ಮೇಗೂರು, ೧೪ನೇ ವಾರ್ಡಿನ ರೇಖಾ ರಾಜಶೇಖರ ಆನೆಹೊಸರು, ೧೯ನೇ ವಾರ್ಡಿನ ಹುಸೇನ್‌ಬಿ ನನುಸಾಬ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದರು. ಇವರಲ್ಲಿ ಸಚಿವರು ಯಾರ ಹೆಸರನ್ನು ಸೂಚಿಸುತ್ತಾರೆ ಅವರೇ ಅಧ್ಯಕ್ಷರು ಎಂದು ಬಿಂಬಿಸಲಾಗಿತ್ತು. ಆದರೆ, ಈಗ ಸಚಿವರು ಅಭ್ಯರ್ಥಿ ಆಯ್ಕೆ ಮಾಡುವುದಕ್ಕೆ ಕಾಂಗ್ರೆಸ್ಸಿಗರೆ ವಿರೋಧ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಸಚಿವ ಭೈರತಿ ಸುರೇಶ ಮತ್ತು ಸಂಸದ ರಾಜಶೇಖರ ಹಿಟ್ನಾಳರನ್ನು ಖುಷಿ ಪಡಿಸಲು ಹಾಗೂ ಮಾಜಿ ಸಚಿವ ನಾಗಪ್ಪ ಸಾಲೋಣಿ ಪುತ್ರ ಪುರಸಭೆ ಮಾಜಿ ಅಧ್ಯಕ್ಷರಾಗಿದ್ದ ಶರಣೇಶ ಸಾಲೋಣಿ ಅವರನ್ನು ಸೋಲಿಸುವ ಮೂಲಕ ೧೦ನೇ ವಾರ್ಡ್‌ದಿಂದ ಆಯ್ಕೆಯಾಗಿದ್ದ ಮಂಜುನಾಥ ಮೇಗೂರು ಅವರನ್ನು ಸಹಜವಾಗಿ ಸಚಿವರು ಆಯ್ಕೆ ಮಾಡಿ ವಿರೋಧಿಗಳಿಗೆ ಟಾಂಗ್ ನೀಡುತ್ತಾರೆ ಎನ್ನುವ ಎಲ್ಲ ಲೆಕ್ಕಾಚಾರವನ್ನು ಮೂಲ ಕಾಂಗ್ರೆಸ್ಸಿಗರೆ ಹುಸಿ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್‌ನ ಒಳಬೇಗುದಿಯಿಂದಾಗಿ ಸಚಿವ ಶಿವರಾಜ್ ತಂಗಡಗಿ ಸದಸ್ಯರ, ಮುಖಂಡರ ಸಭೆ ನಡೆಸಿದ್ದು, ಯಾವುದೇ ಸ್ಪಷ್ಟ ತೀರ್ಮಾನಕ್ಕೆ ಬಂದಿಲ್ಲ. ಸದಸ್ಯರು ಮತ್ತು ಮೂಲ ಕಾಂಗ್ರೆಸ್ಸಿಗರು, ಹೊಸ ಕಾಂಗ್ರೆಸ್ಸಿಗರೆಲ್ಲ ಒಕ್ಕೂರಲಿನಿಂದ ಸಜ್ಜನ್, ಮೇಗೂರು ಆಯ್ಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಈಗಾಗಲೇ ಗೋವಾ ಪ್ರವಾಸದಲ್ಲಿರುವ ಬಿಜೆಪಿಯ ೮ ಸದಸ್ಯರು ಬೆಂಬಲ ಸೂಚಿಸಿ ಮಂಜುನಾಥ ಮೇಗೂರು ಮತ್ತು ಹಿರೇಬಸಪ್ಪ ಸಜ್ಜನ್ ಅವರನ್ನೂ ಅಧ್ಯಕ್ಷ ಸ್ಥಾನಕ್ಕೆ ಸೂಚಿಸಬೇಡಿ ಎಂದು ಸಚಿವರಿಗೆ ದೂರವಾಣಿ ಮೂಲಕ ತಿಳಿಸಿದ್ದಾರೆ. ಅಲ್ಲಿಗೆ ಸಚಿವರ ಎಲ್ಲ ಲೆಕ್ಕಾಚಾರ ತಲೆ ಕೆಳಗಾಗಿದೆ. ಸದ್ಯದ ಮಟ್ಟಿಗೆ ವಾರ್ಡ್ ೧೪ರ ರೇಖಾ ಆನೆಹೊಸೂರು ಆಯ್ಕೆ ಬಹುತೇಕ ಖಚಿತವಾಗುವ ಲಕ್ಷಣ ಇದೆ. ಅತ್ತ ಬಿಜೆಪಿ ಪಾಳೆಯದಲ್ಲಿ ಸಹ ಸಭೆಗಳು ನಡೆಯುತ್ತಿವೆ.