ಜಿಲ್ಲಾ ಕೇಂದ್ರದಲ್ಲಿ ಹೆಚ್ಚಿದ ಸರಣಿ ಕಳವು: ಆತಂಕ

| Published : Jun 09 2024, 01:30 AM IST

ಸಾರಾಂಶ

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮನೆಗಳ್ಳತನ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ ಸರಣಿಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಆರೇಳು ಅಂಗಡಿ ಮಳಿಗೆಗಳಲ್ಲಿ ಒಂದೇ ಮಾದರಿಯಲ್ಲಿ ಕಳ್ಳತನ ಆಗಿದೆ. ಅಲ್ಲದೆ, ಮನೆಗಳ್ಳತನಕ್ಕೆ ವಿಫಲ ಯತ್ನವೂ ನಡೆದಿದೆ.

ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮನೆಗಳ್ಳತನ ಹಾಗೂ ವಾಣಿಜ್ಯ ಮಳಿಗೆಗಳಲ್ಲಿ ಸರಣಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಮೇ ತಿಂಗಳಲ್ಲಿ ಸರಣಿಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಆರೇಳು ಅಂಗಡಿ ಮಳಿಗೆಗಳಲ್ಲಿ ಒಂದೇ ಮಾದರಿಯಲ್ಲಿ ಕಳ್ಳತನ ಆಗಿದೆ. ಅಲ್ಲದೆ, ಮನೆಗಳ್ಳತನಕ್ಕೆ ವಿಫಲ ಯತ್ನವೂ ನಡೆದಿದೆ.

ಕಳೆದ ಮೇ 7ರಂದು ರಾಮನಗರದ ಜಾಲಮಂಗಲ ರಸ್ತೆ ಮತ್ತು ಬಿ.ಎಂ.ರಸ್ತೆಯಲ್ಲಿನ 4 ಕಡೆ ಸರಣಿ ಕಳವು ಮಾಡಲಾಗಿತ್ತು. ಮೇ 26 ರ ರಾತ್ರಿ ಸಹ ಬಿಎಂ ರಸ್ತೆಯ ಎರಡು ಕಡೆ ಸರಣಿ ಕಳವು ಮಾಡಲಾಗಿದೆ. ಕೇವಲ 15 ದಿನಗಳ ಅಂತರದಲ್ಲಿ ನಗರದ ಆರೇಳು ಕಡೆಗಳಲ್ಲಿ ಸರಣಿ ಕಳವು ನಡೆದಿರುವುದು ವ್ಯಾಪಾರಸ್ಥರಲ್ಲಿ ಆತಂಕ ಮೂಡಿಸಿದೆ.

ಮೇ 7ರಂದು ನಡೆದ ಸರಣಿ ಕಳ್ಳತನದಲ್ಲಿ ಕಳ್ಳರು ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದಲ್ಲಿರುವ ಬ್ರಿಟೀಷ್ ಲಿಕ್ಕರ್‌ನಲ್ಲಿ 1.5 ಲಕ್ಷ ರು., ಪ್ರೆಶ್ ಲ್ಯಾಂಡ್ ಮಳಿಗೆಯಲ್ಲಿ 80 ಸಾವಿರ ರು., ಸಾಯಿ ಎಲೆಕ್ಟ್ರಿಕ್ ಮಳಿಗೆಯಲ್ಲಿ 50 ಸಾವಿರ ರು., ವಿವೈಧ್ಯ ರೆಸ್ಟೋರೆಂಟ್‌ನಲ್ಲಿ 20 ಸಾವಿರ ರು. ಕಳವು ಮಾಡಿದ್ದರು.

ಮೇ 26ರಂದು ನಗರದ ರಾಮಘಡ್ ಹೋಟೆಲ್‌ನಲ್ಲಿ 20 ಸಾವಿರ ರೂ., ಯುನಿಲೆಟ್ ಶೋ ರೂಂ ನಲ್ಲಿ 1.90 ಲಕ್ಷ ರು. ಹಣವನ್ನು ದುಷ್ಕರ್ಮಿಗಳ ಗ್ಯಾಂಗ್ ಕಳವು ಮಾಡಿದೆ. ಶಾಂತಿನಿಕೇತನ ಕಾಲೇಜು ಬಳಿಯಿರುವ ಶ್ರೀ ರಾಮ ಫೈನಾನ್ಸ್ ನಲ್ಲಿ ಕಳೆದ ಮೇ 27ರ ಬೆಳಗಿನ ಜಾವ 3.15ರ ಸಮಯದಲ್ಲಿ ಕಳ್ಳತನಕ್ಕೆ ವಿಫಲಯತ್ನ ನಡೆದಿದೆ.

ಕಳ್ಳನೊಬ್ಬ ಫೈನಾನ್ಸ್ ಬಳಿ ಬಂದು ಶೆಟರ್ ಗೆ ಹಾಕಿದ್ದ ಬೀಗವನ್ನು ಹೊಡೆದಿದ್ದಾನೆ. ಶೆಟರ್ ಅನ್ನು ಸ್ವಲ್ಪ ಮೇಲಕ್ಕೆ ಎತ್ತಿ ಒಳ ಪ್ರವೇಶಿಸಿರುವ ಕಳ್ಳ ಲಾಕರ್ ಅನ್ನು ರಾಡ್ ನಿಂದ ಮೀಟಿದ್ದು, ಅದು ಓಪನ್ ಆಗದ ಕಾರಣ ಅಲ್ಲಿನ ಡ್ರಾಯರ್ ಗಳನ್ನು ರಾಡ್ ನಿಂದ ಮೀಟಿ ತೆಗೆದು ನೋಡಿದ್ದಾನೆ. ಎಲ್ಲಿಯೂ ಹಣ ಮತ್ತು ಒಡವೆಗಳನ್ನು ಸಿಗದೆ ವಾಪಸ್ಸಾಗಿದ್ದಾನೆ. ಜೂನ್ 4ರಂದು ನಗರದ ಬಾಲಾಜಿ ಲೇಔಟ್ ನಲ್ಲಿ ಆರೇಳು ದುಷ್ಕರ್ಮಿಗಳ ತಂಡವೊಂದು ಕುಮಾರ್ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ.

ಪೊಲೀಸರು ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯದ ಬಂದೋಬಸ್ತಿನಲ್ಲಿ ಬ್ಯೂಸಿಯಾಗಿದ್ದರು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ದುಷ್ಕರ್ಮಿಗಳ ತಂಡ ಬಾಲಾಜಿ ಲೇ ಔಟ್ ನಲ್ಲಿ ಮನೆ ಗಳ್ಳತನಕ್ಕೆ ಹೊಂಚು ಹಾಕಿದ್ದಾರೆ.

ಅದರಂತೆ ಕುಮಾರ್ ಎಂಬುವರ ಮನೆಯ ಕಿಟಕಿ ಸರಳಗಳನ್ನು ದುಷ್ಕರ್ಮಿಗಳು ಯಂತ್ರದ ಸಹಾಯದಿಂದ ಕತ್ತರಿಸಿದ್ದಾರೆ. ಈ ವೇಳೆ ಬೀದಿ ನಾಯಿಗಳು ಬೋಗಳಲು ಆರಂಭಿಸಿವೆ. ಆಗ ಮನೆಯವರು ಲೈಟ್ ಗಳನ್ನು ಆನ್ ಮಾಡಿದಾಗ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಸಿಸಿ ಕ್ಯಾಮೆರಾವನ್ನು ವೀಕ್ಷಣೆ ಮಾಡಿದಾಗ ಚಡ್ಡಿ ಮತ್ತು ಟೀ ಶರ್ಟ್ ನಲ್ಲಿರುವ ಆರೇಳು ಮಂದಿ ದುಷ್ಕರ್ಮಿಗಳು ಕಂಡು ಬಂದಿದ್ದಾರೆ. ಇವರಲ್ಲಿ ಕೆಲವರು ಮಂಕಿ ಕ್ಯಾಪ್ ಧರಿಸಿದ್ದರೆ, ಉಳಿದವರು ಮಾಸ್ಕ್ ಹಾಕಿಕೊಂಡಿದ್ದಾರೆ. ರಸ್ತೆಯಲ್ಲಿ ರಾತ್ರಿ ದುಷ್ಕರ್ಮಿಗಳು ನಡೆದು ಹೋಗುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ಎಲ್ಲ ಕಳ್ಳತನ ಪ್ರಕರಣಗಳು ಒಂದೇ ಶೈಲಿಯಲ್ಲಿ ನಡೆದಿವೆ.

ಮುಂದುವರೆದ ಪೊಲೀಸರ ಕಾರ್ಯಾಚರಣೆ:

ಪೊಲೀಸ್ ಅಧಿಕಾರಿಗಳು ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕರೆಯಿಸಿ ಕಳ್ಳರ ಪತ್ತೆಗೆ ಪ್ರಯತ್ನಿಸಿದ್ದರು. ಅಲ್ಲದೆ, ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ಕಳ್ಳರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ.

ಈ ಎಲ್ಲ ಕಳ್ಳತನದ ಪ್ರಯತ್ನಗಳು ಒಂದೇ ರೀತಿಯಲ್ಲಿ ನಡೆದಿರುವುದು ಕಂಡು ಬರುತ್ತಿದ್ದು, ಒಂದೇ ಗುಂಪಿಗೆ ಸೇರಿದ ದುಷ್ಕರ್ಮಿಗಳೇ ಈ ಕಳ್ಳತನದ ಸರಣಿ ಆರಂಭಿಸಿರಬಹುದೆಂದು ತರ್ಕಿಸಲು ಅವಕಾಶವಾಗಿದೆ. ಅಲ್ಲದೇ, ಕೆಲವು ದಿನಗಳಿಂದ ನಗರದಲ್ಲೇ ಈ ಕಳ್ಳರು ವಾಸ್ತವ್ಯ ಹೊಂದಿರಬಹುದೆಂದು ಅನುಮಾನಪಟ್ಟುಕೊಳ್ಳುವಂತಾಗಿದೆ. ಹಗಲು ಹೊತ್ತಿನಲ್ಲಿ ತಿರುಗಾಡಿಕೊಂಡಿದ್ದು ಕಳ್ಳತನಕ್ಕೆ ಸ್ಕೆಚ್ ಹಾಕಿ ರಾತ್ರಿ ಬೀಗ ಮುರಿದು ಒಳನುಗ್ಗುವ ಪ್ರಯತ್ನ ನಡೆಸಿರಬೇಕೆಂಬ ಸಂಶಯವಿದೆ. ಅಲ್ಲದೇ ಮನೆಯಲ್ಲಿ ಮನೆಯವರು ಇಲ್ಲದ ಸಮಯವನ್ನು ಕರಾರುವಕ್ಕಾಗಿ ಗುರುತಿಸಿ ಮನೆಯ ಬೀಗ ಮುರಿದು ಕಳ್ಳರು ಒಳನುಗ್ಗಿ ಕಳ್ಳತನ ನಡೆಸಿದ ಉದಾಹರಣೆಗಳೇ ಹೆಚ್ಚಿರುವುದು ಕಂಡು ಬರುತ್ತಿದ್ದು ಇದರಿಂದ ಕಳ್ಳರು ಹಗಲು ಹೊತ್ತಿನಲ್ಲಿ ಮನೆಯ ಸದಸ್ಯರ ಚಲನವಲನವನ್ನು ಅಭ್ಯಸಿಸಿ ಕಳವಿಗೆ ಮುಂದಾಗುತ್ತಿದ್ದಾರೆಯೆಂದು ಊಹಿಸುವಂತೆ ಮಾಡಿವೆ ನಡೆದ ಪ್ರಕರಣಗಳು.

ಈ ಹಿಂದೆ ಅಂಗಡಿ ಮಳಿಗೆಗಳಲ್ಲಿ ಕಳವು ಮಾಡಿದ ಸಮಯದಲ್ಲಿ ಅಲ್ಲಿ ಸಾಕಷ್ಟು ಬೆಲೆ ಬಾಳುವ ಎಲೆಕ್ಟ್ರಿಕ್ ವಸ್ತುಗಳು, ಮದ್ಯ ಸೇರಿದಂತೆ ಇನ್ನಿತರ ವಸ್ತುಗಳು ಇದ್ದವಾದರೂ ಕಳ್ಳರು ಕ್ಯಾಶ್‌ಬಾಕ್ಸ್‌ನಲ್ಲಿ ಇದ್ದ ಹಣವನ್ನು ಹೊರತು ಪಡಿಸಿ ಬೇರೇನೂ ಕಳವು ಮಾಡಿಲ್ಲ. ಕಳ್ಳರ ಗುರಿ ಗಲ್ಲದಲ್ಲಿರುವ ಹಣವನ್ನು ದೋಚುವುದೇ ಆಗಿದೆ. ಇದಷ್ಟೇ ಅಲ್ಲ ಜಿಲ್ಲೆಯಲ್ಲಿ ಹಾರೋಹಳ್ಳಿ, ಬಿಡದಿ, ಚನ್ನಪಟ್ಟಣ ಗ್ರಾಮಾಂತರ, ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಸಹ ಅಂಗಡಿ ಮಳಿಗೆಗಳನ್ನು ಗುರುಯಾಗಿಸಿಕೊಂಡು ಕಳವು ನಡೆದಿದ್ದು ಹಣವನ್ನು ದೋಚಲಾಗಿದೆ. ಈ ಎಲ್ಲಾ ಕಳ್ಳತನ ಪ್ರಕರಣದಲ್ಲೂ ಬಾಗಿಲು ಮೀಟಿ ಒಳಗೆ ನುಗ್ಗುವ ಕಳ್ಳರು ಹಣವನ್ನು ಬಿಟ್ಟು ಬೇರೆ ಏನನ್ನೂ ಕಳವು ಮಾಡಿಲ್ಲ ಎಂಬುದು ವಿಶೇಷ.

ಬಾಕ್ಸ್‌...........

ಮಂಕಿ ಕ್ಯಾಪ್ ಧರಿಸುವ ದುಷ್ಕರ್ಮಿಗಳು

ನಗರದ ಎಲ್ಲಾ ಅಂಗಡಿ, ಕಚೇರಿಗಳಲ್ಲಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿರುತ್ತದೆ. ದಿನದ 24 ತಾಸುಗಳ ಕಾಲ ಸಿಸಿ ಕ್ಯಾಮರಾಗಳು ಕೆಲಸ ಮಾಡುತ್ತಿರುತ್ತವೆ. ಈ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯಗಳಲ್ಲಿ ಕಳ್ಳತನ ಮಾಡಿರುವ ವ್ಯಕ್ತಿಗಳು ಮುಖಕ್ಕೆ ಮಾಸ್ಕ್‌ ಹಾಕಿಕೊಂಡು ಕಳವು ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಇನ್ನು ಇವರು ನಂಬರ್ ಪ್ಲೇಟ್ ಇಲ್ಲದ ದ್ವಿಚಕ್ರವಾಹನದಲ್ಲಿ ಬಂದಿರುವುದು ಕೆಲ ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿಯಿಂದ ಬಹಿರಂಗವಾಗಿದೆ. ಆಗಾಗ ಕಳವು ಪ್ರಕರಣ ನಡೆಯುತ್ತಲೇ ಇವೆ. ಆದರೆ, ದುಷ್ಕರ್ಮಿಗಳು ಪತ್ತೆಯಾಗದಿರುವುದು ಪೊಲೀಸರಿಗೂ ತಲೆ ನೋವಿನ ಸಂಗತಿಯಾಗಿದೆ. ಕಳ್ಳರು ಪ್ರದರ್ಶಿಸುತ್ತಿರುವ ಚಾಕಚಕ್ಯತೆಯನ್ನು ಗಮನಿಸಿದರೆ ಕಳ್ಳರು ಈ ಕೆಲಸದಲ್ಲಿ ಸಾಕಷ್ಟು ಪಳಗಿದವರೇ ಇರಬೇಕು ಎಂಬ ಗುಮಾನಿ ಮೂಡುತ್ತಿದೆ. ಇವರಿಂದ ಇನ್ನಷ್ಟು ಸರಣಿ ಕಳ್ಳತನ ನಡೆಯಬಹುದೆಂದು ವ್ಯಾಪಾರಿಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ನಗರದ ಕೆಲವು ಭಾಗಗಳಲ್ಲಿ ರಾತ್ರಿ ವೇಳೆ ಪೊಲೀಸರ ಗಸ್ತನ್ನು ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಬಾಕ್ಸ್ ...............

ಹೊರ ರಾಜ್ಯದ ಕಳ್ಳರ ತಂಡ

ಜಿಲ್ಲೆಯಲ್ಲಿ ಅಂಗಡಿ ಮುಂಗ್ಗಟ್ಟುಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಕಳ್ಳತನ ಪ್ರಕರಣಗಳ ಹಿಂದೆ ಹೊರರಾಜ್ಯದ ಕಳ್ಳರ ಕೈವಾಡ ಇದೆ ಎಂಬ ಶಂಕೆ ಪೊಲೀಸ್ ಅಧಿಕಾರಿಗಳಿಗೆ ಕಾಡುತ್ತಿದೆ. ಈಗಾಗಲೇ ತನಿಖೆ ಕೈಗೊಂಡಿದ್ದು, ಅನುಮಾನಸ್ಪದ ವ್ಯಕ್ತಿಗಳನ್ನು ಕರೆತಂದು ವಿಚಾರಣೆ ನಡೆಸಿದ್ದಾರೆ. ಆದರೆ, ಇದುವರೆಗೆ ಯಾವುದೇ ಪ್ರಗತಿ ಮಾತ್ರ ಕಂಡಿಲ್ಲ.8ಕೆಆರ್ ಎಂಎನ್ 4,5,6.ಜೆಪಿಜಿ

4.ಸರಣಿ ಕಳ್ಳತನ ನಡೆದ ಬ್ರಿಟಿಷ್ ಲಿಕ್ಕರ್ ನಲ್ಲಿ ಪೊಲೀಸರು ಪರಿಶೀಲನೆ ನಡೆಸಿದರು.

5.ರಾಮನಗರದ ಬಾಲಾಜಿ ಲೇಔಟ್ ನಲ್ಲಿ ಮನೆಗಳ್ಳತನಕ್ಕೆ ಯತ್ನಿಸಿದ ಕಳ್ಳರ ಗ್ಯಾಂಗ್.

6.ಬಾಲಾಜಿ ಲೇಔಟ್ ನಲ್ಲಿ ಮನೆಯ ಕಿಟಕಿ ಸರಳ ಕತ್ತರಿಸಿರುವ ದುಷ್ಕರ್ಮಿಗಳು.