ಕೊಪ್ಪಳದಲ್ಲಿ ಹೆಚ್ಚಾದ ಸಂಚಾರ ದಟ್ಟಣೆ

| Published : Oct 16 2024, 12:49 AM IST

ಸಾರಾಂಶ

ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಅವರೇ ಆರಂಭದ ಶೂರತ್ವ ಈಗ ಎಲ್ಲಿ ಎಂದು ನಗರದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ನಿತ್ಯವೂ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ. ಸರ್ಕಲ್ ಬಳಿ ಪೊಲೀಸ್ ನಿಯಂತ್ರಣವೂ ಇಲ್ಲ.

ಆರಂಭದ ಶೂರತ್ವ ಮರೆಯಾಯಿತೇ ಎಸ್ಪಿಯವರೇ

ಕನ್ನಡಪ್ರಭ ವಾರ್ತೆ ಕೊಪ್ಪಳ

ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಎಲ್. ಅರಸಿದ್ದಿ ಅವರೇ ಆರಂಭದ ಶೂರತ್ವ ಈಗ ಎಲ್ಲಿ ಎಂದು ನಗರದ ಜನತೆ ಪ್ರಶ್ನೆ ಮಾಡುತ್ತಿದ್ದಾರೆ. ನಿತ್ಯವೂ ನಗರದಲ್ಲಿ ಟ್ರಾಫಿಕ್ ಜಾಮ್ ಆಗುತ್ತಲೇ ಇದೆ. ಸರ್ಕಲ್ ಬಳಿ ಪೊಲೀಸ್ ನಿಯಂತ್ರಣವೂ ಇಲ್ಲ.

ಹೌದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಡಾ. ರಾಮ ಎಲ್. ಅರಸಿದ್ದಿ ಅಧಿಕಾರ ವಹಿಸಿಕೊಂಡಾಗ ಒಂದು ತಿಂಗಳ ಕಾಲ ಭರ್ಜರಿಯಾಗಿಯೇ ಸದ್ದು ಮಾಡಿದ್ದರು. ಕೊಪ್ಪಳ ನಗರದಲ್ಲಿ ಟ್ರಾಫಿಕ್ ನಿಯಂತ್ರಣ ಮಾಡಿ, ಸರ್ಕಲ್ ಗಳಲ್ಲಿ ಟ್ರಾಫಿಕ್ ಪೊಲೀಸ್ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಮಾಡುವ ಮೂಲಕ ಗಮನ ಸೆಳೆದಿದ್ದರು.

ಈ ಹಿಂದಿನ ಎಸ್ಪಿ ಯಶೋದಾ ವಂಟಿಗೋಡಿ ಕೊಪ್ಪಳದಲ್ಲಿ ಯಾಕೆ ಬೇಕು ಟ್ರಾಫಿಕ್ ನಿಯಂತ್ರಣ ಎಂದು ಟೀಕೆಗೆ ಗುರಿಯಾಗಿದ್ದರು. ಇಲ್ಲೇನು ಅಷ್ಟೇನು ಟ್ರಾಫಿಕ್ ಇಲ್ಲ ಎನ್ನುವ ಮಾತನಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಅವರ ವರ್ಗಾವಣೆಯಾದ ನಂತರ ಬಂದಿದ್ದ ಎಸ್ಪಿ ಡಾ. ರಾಮ ಎಲ್. ಅರಸಿದ್ದಿ ಬಂದ ತಕ್ಷಣ ಕೊಪ್ಪಳ ನಗರದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಭಾರಿ ಒತ್ತು ನೀಡಿ ಪ್ರಸಂಶೆಗೆ ಪಾತ್ರವಾಗಿದ್ದರು. ಈಗ ಅಂಧೇರಿ ದರ್ಭಾರ ಎನ್ನುವಂತೆ ಆಗಿದೆ.

ಯಾವ ರಸ್ತೆಯಲ್ಲಿಯೂ ಟ್ರಾಫಿಕ್ ನಿಯಂತ್ರಣ ಇಲ್ಲ. ರಸ್ತೆಯಲ್ಲಿ ಸಂಚಾರವೂ ನಿಯಂತ್ರಣ ಇಲ್ಲ. ಸರ್ಕಲ್ ಗಳಲ್ಲಿಯಂತೂ ನೋಡಬಾರದು ಆ ಸ್ಥಿತಿಗೆ ಬಂದಿದೆ. ಸಿಗ್ನಲ್ ಲೈಟ್ ಗಳು ಒಮ್ಮೆ ಇರುತ್ತವೆ, ಮತ್ತೊಮ್ಮೆ ಇರುವುದಿಲ್ಲ, ಟ್ರಾಫಿಕ್ ನಿಯಮ ಪಾಲಿಸುವಂತೆ ನೋಡಿಕೊಳ್ಳಬೇಕಾದ ಪೊಲೀಸರು ಅಷ್ಟಾಗಿ ಗಮನ ಹರಿಸಿ ಕಾರ್ಯ ನಿರ್ವಹಿಸುತ್ತಲೇ ಇಲ್ಲ. ಹೀಗಾಗಿ, ಈಗ ಕೊಪ್ಪಳ ಸಂಚಾರ ಅಡ್ಡಾದಿಡ್ಡಿಯಾಗಿದೆ.

ಕೊಪ್ಪಳಕ್ಕೆ ವರ್ಗಾವಣೆಯಾಗಿ ಬಂದಾಗ ತೋರಿದ ಕಾಳಜಿ, ಕರ್ತವ್ಯ ಪ್ರಜ್ಞೆ ಈಗ ಎಸ್ಪಿಯವರಲ್ಲಿಯೂ ಕಾಣುತ್ತಿಲ್ಲ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

ಟ್ರಾಫಿಕ್ ರೂಲ್ಸ್ ನಿಯಂತ್ರಣ ಮಾಡಿದ್ದೇನು, ಹೆಲ್ಮೆಟ್ ಕಡ್ಡಾಯ ಮಾಡಿದ್ದೇನೆ, ಸರ್ಕಲ್ ಗಳಲ್ಲಿ ಸಿಗ್ನಲ್ ಜಂಪ್ ಮಾಡಿದವರೇ ಮೇಲೆ ಕೇಸ್ ಹಾಕಿದ್ದೇನು, ಈಗ ಅದ್ಯಾವುದು ಕಾಣುತ್ತಿಲ್ಲ ಯಾಕೆ ಎನ್ನುವುದಕ್ಕೆ ಎಸ್ಪಿ ಅವರೇ ಉತ್ತರಿಸಬೇಕಾಗಿದೆ.