ಸಾರಾಂಶ
ನೇಹಾ ಹಿರೇಮಠ ಕೊಲೆಯಾದ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಜಲಿ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ.
ಬಳ್ಳಾರಿ: ರಾಜ್ಯದಲ್ಲಿ ಮಹಿಳೆಯರ ಕೊಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮಹಿಳಾ ರಕ್ಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಕೊಲೆ, ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ನೇಹಾ ಹಿರೇಮಠ ಕೊಲೆಯಾದ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಅಂಜಲಿ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ. ಕೊಡಗಿನ ಸೋಮವಾರಪೇಟೆಯ ಮೀನಾ ಹತ್ಯೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹೀಗಾಗಿಯೇ ಕೊಲೆಗಡುಕರು ಮಹಿಳೆಯರ ಮೇಲೆ ಹಾಡುಹಗಲೇ ದಾಳಿ ಮಾಡುತ್ತಿದ್ದಾರೆ ಎಂದರು.ರಾಜ್ಯ ಸರ್ಕಾರ ಕೂಡಲೇ ಕೊಲೆಗೈದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಮಹಿಳಾ ರಕ್ಷಣೆಗೆ ವಿಶೇಷ ಗಮನ ನೀಡಬೇಕು. ಮಹಿಳಾ ಹಕ್ಕುಗಳು ದಮನವಾಗದಂತೆ ಸರ್ಕಾರ ನಿಗಾ ವಹಿಸಬೇಕು ಎಂದು ಆಗ್ರಹಿಸಿದರು.
ಮಹಿಳಾ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಾಧನಾ ಹಿರೇಮಠ, ಜಿಲ್ಲಾ ಪದಾಧಿಕಾರಿಗಳಾದ ನಾಗವೇಣಿ, ರಾಜೇಶ್ವರಿ, ಗೌಸಿಯಾ, ಮೇಘನಾ ಜೋಷಿ, ಶೈಲಾ, ಸೀತಾರಾಮ್, ರೂಪಾ, ಪುಷ್ಪಾ, ಚಾಂದಿನಿ, ಉಷಾ ಪಾಟೀಲ್, ತನುಶ್ರೀ ಸೇರಿದಂತೆ ಮಹಿಳಾ ಮೋರ್ಚಾದ ಜಿಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಮೊಹ್ಮದ್ ಝುಬೇರ್ ಮನವಿ ಸ್ವೀಕರಿಸಿದರು.