ಅರಬೈಲ್ ಘಟ್ಟಗಳಲ್ಲಿ ಹೆಚ್ಚುತ್ತಿರುವ ಅಪಘಾತ, ಡಿವೈಡರ್‌ಗಳೇ ಕಾರಣ

| Published : May 14 2024, 01:00 AM IST

ಅರಬೈಲ್ ಘಟ್ಟಗಳಲ್ಲಿ ಹೆಚ್ಚುತ್ತಿರುವ ಅಪಘಾತ, ಡಿವೈಡರ್‌ಗಳೇ ಕಾರಣ
Share this Article
  • FB
  • TW
  • Linkdin
  • Email

ಸಾರಾಂಶ

ಅತ್ಯಂತ ಅಪಾಯಕಾರಿ ಘಟ್ಟ ಎಂದು ಗುರುತಿಸಲಾಗಿರುವ ರಾಷ್ಟ್ರೀಯ ಹೆದ್ದಾರಿಯ ೬೩ರ ಅರಬೈಲ್ ಘಟ್ಟದ ತಿರುವಿನಲ್ಲಿ ಕಾಂಕ್ರೀಟ್‌ ಡಿವೈಡರ್‌ ಅಳವಡಿಸಲಾಗಿದ್ದು, ಅದರಿಂದಲೇ ಅಪಘಾತಗಳು ಹೆಚ್ಚುತ್ತಿವೆ ಎಂಬ ಆರೋಪ ಕೇಳಿಬಂದಿದೆ.

ಯಲ್ಲಾಪುರ: ರಸ್ತೆಯಲ್ಲಿ ವಾಹನ ಅಪಘಾತ ತಪ್ಪಿಸಲು ಅಳವಡಿಸಿರುವ ಡಿವೈಡರ್‌ಗಳೇ ಅರಬೈಲ್ ಘಟ್ಟದಲ್ಲಿ ರಸ್ತೆ ಅಪಘಾತಕ್ಕೆ ಕಾರಣವಾಗುತ್ತಿದೆ!

ಅತ್ಯಂತ ಅಪಾಯಕಾರಿ ಘಟ್ಟ ಎಂದು ಗುರುತಿಸಲಾಗಿರುವ ರಾಷ್ಟ್ರೀಯ ಹೆದ್ದಾರಿಯ ೬೩ರ ಅರಬೈಲ್ ಘಟ್ಟದಲ್ಲಿ ಪ್ರತಿ ವರ್ಷ ನೂರಾರು ಅಪಘಾತಗಳು ಸಂಭವಿಸುತ್ತವೆ. ಹತ್ತು ಹಲವಾರು ಜನ ಸಾವು-ನೋವಿಗೆ ಒಳಗಾಗುತ್ತಿದ್ದಾರೆ. ಈ ರಸ್ತೆಯಲ್ಲಿ ಅಪಘಾತಗಳನ್ನು ಕಡಿಮೆ ಮಾಡಲು ಅರಬೈಲ್ ಘಟ್ಟದ ಯು-ಟರ್ನ್‌ನಲ್ಲಿ ರಸ್ತೆ ಸ್ವಲ್ಪ ಅಗಲ ಮಾಡಿ, ಮಧ್ಯೆ ಸಿಮೆಂಟ್ ಕಾಂಕ್ರೀಟ್‌ನಿಂದ ನಿರ್ಮಿಸಿದ ಡಿವೈಡರ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ ಕಲ್ಲು ಬಂಡೆಗಳನ್ನು ಕೂಡ ಇಡಲಾಗಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಅತಿ ಭಾರದ ವಾಹನಗಳು ತೆರಳುವಾಗ ರಸ್ತೆಯ ಅಗಲ ಕಡಿಮೆಯಿರುವ ಕಾರಣಕ್ಕೆ ವಾಹನವನ್ನು ತಿರುಗಿಸುವಾಗ ಹರಸಾಹಸ ಪಡಬೇಕಾಗಿದೆ. ಅನುಭವ ಇಲ್ಲದ ಅಥವಾ ಈ ರಸ್ತೆಯಲ್ಲಿ ಮೊದಲ ಬಾರಿಗೆ ಬಂದ ಚಾಲಕ ಅಪಘಾತಕ್ಕೆ ಒಳಗಾಗುತ್ತಿದ್ದಾನೆ. ಅಲ್ಲದೇ, ಎದುರಿನಿಂದ ಮತ್ತು ಹಿಂದಿನಿಂದ ಬರುವ ಇನ್ನಿತರ ಲಘು ವಾಹನಗಳಿಗೂ ಅಪಾಯ ತಂದು ಒಡ್ಡುತ್ತಿದ್ದಾರೆ. ಕಿರಿದಾದ ರಸ್ತೆಯಲ್ಲಿ ಯು-ಟರ್ನ್ ತೆಗೆದುಕೊಳ್ಳಲು ಕೂಡ ಅಷ್ಟೇ ಶಕ್ತಿ ಹಾಕಬೇಕಾಗುತ್ತದೆ. ಆಗ ವಾಹನದ ಮೇಲೆ ನಿಯಂತ್ರಣ ಸಾಧಿಸಲಾಗದೇ ತಮ್ಮ ವಾಹನವನ್ನು ಅಪಾಯಕ್ಕೆ ಒಡ್ಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹೀಗಾಗಿ ಈ ರಸ್ತೆಯಲ್ಲಿ ಅಳವಡಿಸಲಾದ ಕಾಂಕ್ರೀಟ್ ಡಿವೈಡರ್‌ಗಳನ್ನು ಕಲ್ಲುಗಳನ್ನು ತೆರವುಗೊಳಿಸಿ ಸರಕು ಸಾಗಾಣಿಕೆ ವಾಹನಗಳು, ಲಘುವಾಹನಗಳು, ಬಸ್ಸುಗಳು ಹಾಗೂ ಇನ್ನಿತರ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಕಟ್ಟಿಮನಿ ಹಾಗೂ ಇನ್ನಿತರ ಚಾಲಕರು ಹೇಳುತ್ತಾರೆ.