ಸಾರಾಂಶ
ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ಕಲಾ ಪರಿಷತ್ ಸಹಯೋಗದಲ್ಲಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಹ್ಯಾದ್ರಿ ಸಿರಿ-2024ನ್ನು ಖ್ಯಾತ ವೈದ್ಯ, ಸಾಹಿತಿ ಡಾ.ಕೆ.ಎನ್.ಗುರುದತ್ತ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸಾಂಸ್ಕೃತಿಕ ಕಾರ್ಯಕ್ರಮಗಳು ಸೃಜನಶೀಲತೆ ಹೆಚ್ಚಿಸುತ್ತವೆ ಎಂದು ಖ್ಯಾತ ವೈದ್ಯ, ಸಾಹಿತಿ ಡಾ.ಕೆ.ಎನ್.ಗುರುದತ್ತ ಹೇಳಿದರು.ಸಹ್ಯಾದ್ರಿ ಕಲಾ ಕಾಲೇಜು, ಸಹ್ಯಾದ್ರಿ ಕಲಾ ಪರಿಷತ್ ಸಹಯೋಗದಲ್ಲಿ ಕಾಲೇಜಿನ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಹ್ಯಾದ್ರಿ ಸಿರಿ-2024ನ್ನು ಉದ್ಘಾಟಿಸಿ ಮಾತನಾಡಿ, ಕ್ರೀಡೆ ಮತ್ತು ಸಾಹಿತ್ಯ ಕಾರ್ಯಕ್ರಮಗಳು ಶಿಕ್ಷಣದ ಒಂದು ಭಾಗವೇ ಆಗಿದೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆ ಅರಳಿಸಲು ಸಹಾಯಕವಾಗುತ್ತವೆ. ಶಿಕ್ಷಣ ಇಲಾಖೆ ಮಾನವೀಯತೆ ಪ್ರತೀಕ ಬುದ್ಧಿ ಭಾವಗಳ ವಿವೇಕವೇ ಆಗಿದೆ. ಹಾಗಾಗಿ ಶಿಕ್ಷಣದ ಭಾಗವಾಗಿರುವ ಕ್ರೀಡೆ, ಸಾಹಿತ್ಯ, ಲಲಿತಕಲೆಗಳಿಗೆ ವಿದ್ಯಾರ್ಥಿಗಳು ಹೆಚ್ಚು ಗಮನಹರಿಸಬೇಕು ಎಂದರು.ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಕೆ.ಎನ್. ಮಂಜುನಾಥ್ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಮಾನವೀಯತೆ ಬೆಳೆಸುತ್ತವೆ, ಕಲ್ಪನಾಶೀಲತೆ ಹೆಚ್ಚಿಸುತ್ತವೆ. ಹೊರಜಗತ್ತಿಗೆ ಸ್ನೇಹ, ಪ್ರೀತಿ ಉತ್ತೇಜಿಸುತ್ತದೆ. ಸಹ್ಯಾದ್ರಿ ಸಿರಿ ಕಾರ್ಯಕ್ರಮ ಕುವೆಂಪು ವಿವಿ ವ್ಯಾಪ್ತಿ ಹಲವು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ಪರಸ್ಪರ ಪ್ರೀತಿ, ವಿಶ್ವಾಸ, ಸಾಮರಸ್ಯ ಹೆಚ್ಚುತ್ತವೆ ಎಂದರು.
ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಅವಿನಾಶ್ ಮಾತನಾಡಿ, ಸಹ್ಯಾದ್ರಿ ಕಾಲೇಜು ಎಂದರೆ ಅದು ಒಂದು ರೀತಿ ತವರು ಮನೆಯಾಗಿದೆ. ಒಂದು ಶ್ರೇಷ್ಠ ಪರಂಪರೆ ಇಲ್ಲಿದೆ. ಇಲ್ಲಿ ಪಾಠ ಮಾಡುವುದೇ ಒಂದು ಪುಣ್ಯದ ಕೆಲಸ ಎಂದರು.ಪ್ರಾಂಶುಪಾಲ ಡಾ.ಸೈಯ್ಯದ್ ಸನಾವುಲ್ಲಾ ಮಾತನಾಡಿ, ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ರೀತಿಯಲ್ಲಿ ಗೆದ್ದ ಹಾಗೆ ಸಹ್ಯಾದ್ರಿ ಸಿರಿ ಎಂಬುವುದು ಒಂದು ಬಹು ದೊಡ್ಡ ಕಾರ್ಯಕ್ರಮವಾಗಿದೆ. ಕುವೆಂಪು ವಿವಿ ವ್ಯಾಪ್ತಿಯಲ್ಲಿಯೇ ಸಹ್ಯಾದ್ರಿ ಮೂರು ಕಾಲೇಜುಗಳಿಗೂ ಒಂದು ದೊಡ್ಡ ಹೆಸರಿದೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಪರಿಷತ್ತಿನ ಉಪಾಧ್ಯಕ್ಷ ಭರತ್ ಬಿ. ಕುಸ್ಕೂರು ಇದ್ದರು. ಪ್ರಣತಿ ಪ್ರಾರ್ಥಿಸಿದರು, ಮಸ್ಕಾನ್ ನಿರೂಪಿಸಿದರು. ನಂತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.