ಹಾವೇರಿ ಜಿಲ್ಲೆಯ ಶಾಸಕರಿಂದ ಮಂತ್ರಿಗಿರಿಗಾಗಿ ಹೆಚ್ಚುತ್ತಿರುವ ಲಾಬಿ

| Published : Nov 24 2025, 02:45 AM IST

ಹಾವೇರಿ ಜಿಲ್ಲೆಯ ಶಾಸಕರಿಂದ ಮಂತ್ರಿಗಿರಿಗಾಗಿ ಹೆಚ್ಚುತ್ತಿರುವ ಲಾಬಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಪುಟ ಪುನರ್‌ ರಚನೆ, ಅಧಿಕಾರ ಹಸ್ತಾಂತರ ಚರ್ಚೆ ಬಿರುಸುಗೊಂಡಿರುವ ಬೆನ್ನಲ್ಲೇ ಜಿಲ್ಲೆಯ ಹಿರಿಯ ಶಾಸಕರಲ್ಲೂ ಮಂತ್ರಿಗಿರಿ ಕನಸು ಚಿಗುರೊಡೆದಿದೆ. ಅದಕ್ಕಾಗಿ ಪಕ್ಷನಿಷ್ಠೆ, ಹಿರಿತನ, ಜಾತಿ ಇತ್ಯಾದಿ ಗುರಾಣಿ ಹಿಡಿದು ಲಾಬಿ ಆರಂಭಿಸಿದ್ದಾರೆ.

ನಾರಾಯಣ ಹೆಗಡೆ

ಹಾವೇರಿ: ಸಂಪುಟ ಪುನರ್‌ ರಚನೆ, ಅಧಿಕಾರ ಹಸ್ತಾಂತರ ಚರ್ಚೆ ಬಿರುಸುಗೊಂಡಿರುವ ಬೆನ್ನಲ್ಲೇ ಜಿಲ್ಲೆಯ ಹಿರಿಯ ಶಾಸಕರಲ್ಲೂ ಮಂತ್ರಿಗಿರಿ ಕನಸು ಚಿಗುರೊಡೆದಿದೆ. ಅದಕ್ಕಾಗಿ ಪಕ್ಷನಿಷ್ಠೆ, ಹಿರಿತನ, ಜಾತಿ ಇತ್ಯಾದಿ ಗುರಾಣಿ ಹಿಡಿದು ಲಾಬಿ ಆರಂಭಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆ, ಉಪಚುನಾವಣೆಗಳಲ್ಲಿ ಕಾಂಗ್ರೆಸ್‌ ಮಟ್ಟಿಗೆ ಭರ್ಜರಿ ಶಕ್ತಿ ನೀಡಿದ್ದು ಹಾವೇರಿ ಜಿಲ್ಲೆ. ಕಳೆದ ಚುನಾವಣೆಯಲ್ಲಿ 5 ಕ್ಷೇತ್ರಗಳನ್ನು ಗೆದ್ದು, ಬಳಿಕ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅದನ್ನೂ ಸೇರಿ ಜಿಲ್ಲೆಯ ಎಲ್ಲ 6 ಕ್ಷೇತ್ರಗಳನ್ನು ಕಾಂಗ್ರೆಸ್‌ ಗೆದ್ದು ಇತಿಹಾಸ ಸೃಷ್ಟಿಸಿದೆ. ಹಾಗೆ ನೋಡಿದರೆ ಜಿಲ್ಲೆಗೆ ಎರಡೂವರೆ ವರ್ಷದ ಹಿಂದೆಯೇ ಮಂತ್ರಿಗಿರಿ ಸಿಗಬೇಕಿತ್ತು ಎಂಬುದು ಪಕ್ಷದ ಕಾರ್ಯಕರ್ತರ ವಾದ. ಆದರೆ, ರಾಜಕೀಯ ಕಾರಣದಿಂದ ಜಿಲ್ಲೆಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿತ್ತು. ಈಗ ಸರ್ಕಾರ ಎರಡೂವರೆ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರ ಮತ್ತು ಸಂಪುಟ ಪುನಾರಚನೆ ಕುರಿತು ಚರ್ಚೆ ಜೋರಾಗಿದೆ. ಇದರಿಂದ ಜಿಲ್ಲೆಯ ಶಾಸಕರ ಮಂತ್ರಿಗಿರಿ ಕನಸು ಮತ್ತೊಮ್ಮೆ ಚಿಗುರೊಡೆದಿದ್ದು, ಈ ನಿಟ್ಟಿನಲ್ಲಿ ಕಸರತ್ತು ಆರಂಭಿಸಿದ್ದಾರೆ.

ಅಧಿಕಾರ ಹಸ್ತಾಂತರದ ಬಗ್ಗೆ ರಾಜಕೀಯ ಚಟುವಟಿಕೆ ಶುರುವಾದ ಬೆನ್ನಲ್ಲೇ ಜಿಲ್ಲೆಯ ಕೆಲ ಶಾಸಕರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಬಂದಿರುವುದು ಕುತೂಹಲ ಕೆರಳಿಸಿದೆ. ಶಾಸಕ ಶ್ರೀನಿವಾಸ ಮಾನೆ, ಯಾಸೀರ್ ಖಾನ್ ಪಠಾಣ, ಪ್ರಕಾಶ ಕೋಳಿವಾಡ ಅವರು ಇಬ್ಬರೂ ನಾಯಕರನ್ನು ಭೇಟಿಯಾಗಿ ಬಂದಿದ್ದಾರೆ. ಇದು ಅಧಿಕಾರ ಹಸ್ತಾಂತರದ ಸುಳಿವು ಎಂಬ ಗುಸುಗುಸು ಎದ್ದಿದೆ. ಇದು ಸಹಜ ಭೇಟಿ ಎಂದು ಇದಕ್ಕೆ ಈ ಶಾಸಕರು ಸ್ಪಷ್ಟನೆಯನ್ನೂ ನೀಡಿದ್ದಾರೆ. ಎರಡೂ ಕಡೆ ಟವೆಲ್‌ ಇಟ್ಟು ಗೇಮ್‌ ಆಡುತ್ತಿದ್ದಾರೆ ಎಂಬ ಚರ್ಚೆಯೂ ನಡೆದಿದೆ.

ಮಂತ್ರಿಗಿರಿಗೆ ಹಲವರ ಪ್ರಯತ್ನ: ಸಂಪುಟ ಪುನಾರಚನೆಯಾದರೆ ಮಂತ್ರಿ ಸ್ಥಾನಕ್ಕೆ ಅರ್ಹರು ಜಿಲ್ಲೆಯಲ್ಲಿ ಹಲವು ಶಾಸಕರಿದ್ದಾರೆ. ವಿಧಾನಸಭೆ ಉಪಾಧ್ಯಕ್ಷರಾಗಿರುವ ರುದ್ರಪ್ಪ ಲಮಾಣಿ ಅವರು ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವಿಯಾಗಿದ್ದಾರೆ. ಅಲ್ಲದೇ ತಾನು ಬಂಜಾರ ಸಮುದಾಯದ ಏಕೈಕ ಶಾಸಕನಾಗಿದ್ದು, ಮೊದಲ ಅವಧಿಯಲ್ಲೇ ಸಚಿವ ಸ್ಥಾನ ಸಿಗಬೇಕಿತ್ತು, ಮುಂದೆ ಅವಕಾಶ ನೀಡುತ್ತೇವೆ ಎಂದು ಹೈಕಮಾಂಡ್‌ ಭರವಸೆ ನೀಡಿದ್ದರು. ಆದ್ದರಿಂದ ಈ ಸಲ ಸಂಪುಟ ಪುನಾರಚನೆಯಾದರೆ ಅವಕಾಶ ಸಿಗುತ್ತದೆ ಎಂಬ ಭರವಸೆಯನ್ನು ರುದ್ರಪ್ಪ ಲಮಾಣಿ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಇನ್ನು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಕೂಡ ಮಂತ್ರಿ ಸ್ಥಾನದ ಮೇಲೆ ಒಂದು ಕಣ್ಣಿಟ್ಟಿದ್ದಾರೆ. ಜನತಾದಳ ಸರ್ಕಾರವಿದ್ದಾಗಲೇ ಮಂತ್ರಿಯಾಗಿದ್ದ ಅವರಿಗೆ ನಂತರ ಅವಕಾಶ ಸಿಕ್ಕಿರಲಿಲ್ಲ. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಲ್ಲೇ ತೃಪ್ತಿಪಟ್ಟುಕೊಳ್ಳುವಂತಾಗಿತ್ತು. ಸಿದ್ದರಾಮಯ್ಯ ಸಿಎಂ ಆಗಿರುವುದರಿಂದ ಕುರುಬ ಸಮುದಾಯಕ್ಕೆ ಸೇರಿದ ಬಸವರಾಜ ಶಿವಣ್ಣನವರಗೆ ಅವಕಾಶ ಸಿಕ್ಕಿರಲಿಲ್ಲ. ಉತ್ತರ ಕರ್ನಾಟಕ ಭಾಗದಲ್ಲಿ ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಬೇಕು, ಹಿರಿತನದ ದಾಳ ಇಟ್ಟುಕೊಂಡು ಮಂತ್ರಿಗಿರಿಗೆ ಪ್ರಯತ್ನ ನಡೆಸಿದ್ದಾರೆ.

ಸಂಪುಟ ಪುನಾರಚನೆಯಾದರೆ ವಿಧಾನ ಪರಿಷತ್‌ನತ್ತಿನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್‌ ಕೂಡ ಸಚಿವ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವವರಲ್ಲಿ ಪ್ರಮುಖರಾಗಿದ್ದಾರೆ. ಕಳೆದ ಅವಧಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದವರೆಲ್ಲ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಗಳಾಗಿದ್ದರೆ, ಪರಿಷತ್‌ ಸದಸ್ಯ ಎಂಬ ಕಾರಣಕ್ಕೆ ಇವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಪಕ್ಷ ನಿಷ್ಠೆ, ದೆಹಲಿ ಮಟ್ಟದಲ್ಲಿ ನಾಯಕರೊಂದಿಗೆ ಉತ್ತಮ ಸಂಪರ್ಕ, ಪಕ್ಷದ ತತ್ವ, ಸಿದ್ಧಾಂತಕ್ಕೆ ಸದಾ ಬದ್ಧರಾಗಿರುವ ಹಿನ್ನೆಲೆಯಲ್ಲಿ ಈ ಸಲ ಸಂಪುಟ ಸೇರಲು ಎಲ್ಲ ಅರ್ಹತೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಅವರು, ಮಂತ್ರಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದಾರೆ.

ಈ ಮೂವರೊಂದಿಗೆ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸುತ್ತಿದ್ದಾರೆ. ಹಾನಗಲ್ಲ ಉಪಚುನಾವಣೆ ಮೂಲಕ ಪಕ್ಷಕ್ಕೆ ಟಾನಿಕ್‌ ನೀಡಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಪುನರಾಯ್ಕೆಯಾಗಿ ವರ್ಚಸ್ಸು ಹೆಚ್ಚಿಸಿಕೊಂಡಿದ್ದು, ಎರಡು ಅವಧಿ ಪರಿಷತ್‌ ಸದಸ್ಯರಾಗಿ ಅನುಭವ, ಯುವ ನಾಯಕತ್ವ ಹೀಗೆ ತಮ್ಮ ಹಲವು ಸಾಧನೆ ಹಿಡಿದು ಸಂಪುಟ ಸೇರಲು ಪ್ರಯತ್ನ ನಡೆಸಿದ್ದಾರೆ.

ಇನ್ನುಳಿದ ಮೂರು ಕ್ಷೇತ್ರದ ಶಾಸಕರಲ್ಲಿ ಪ್ರಕಾಶ ಕೋಳಿವಾಡ, ಯಾಸೀರ್ ಖಾನ್‌ ಪಠಾಣ ಮೊದಲ ಬಾರಿ ಗೆದ್ದವರು. ಹಿರೇಕೆರೂರಿನ ಯು.ಬಿ. ಬಣಕಾರ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದವರು. ಆದ್ದರಿಂದ ಈ ಮೂವರು ಸದ್ಯಕ್ಕೆ ಸಂಪುಟ ಸೇರುವ ಬಗ್ಗೆ ಮಹತ್ವಾಕಾಂಕ್ಷೆ ಇಟ್ಟುಕೊಂಡಿಲ್ಲ.

ಜಿಲ್ಲೆಯವರು ಮಂತ್ರಿಯಾಗಲಿ:ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿರುವುದು ಹಲವರಿಗೆ ಬೇಸರ ತಂದಿದೆ. ಅದಕ್ಕಾಗಿ ಜಿಲ್ಲೆಯ ಶಾಸಕರು ಮಂತ್ರಿಯಾಗಬೇಕು, ಅವರಿಗೇ ಉಸ್ತುವಾರಿ ನೀಡಬೇಕು ಎಂಬ ಒತ್ತಾಯ ಹೆಚ್ಚಿದೆ. ಅದಕ್ಕಾಗಿ ಜಿಲ್ಲೆಯ ಯಾರಿಗಾದರೂ ಮಂತ್ರಿ ಸ್ಥಾನ ನೀಡಬೇಕು ಎಂಬುದು ಪಕ್ಷದ ಕಾರ್ಯಕರ್ತರ ಒತ್ತಾಯವಾಗಿದೆ.