ಪಕ್ಷಾಂತರ ಪರ್ವ ಆರಂಭ, ಬಿಜೆಪಿ, ಜೆಡಿಎಸ್ ಅನೇಕರು ಕಾಂಗ್ರೆಸ್‌ಗೆ ಸೇರ್ಪಡೆ. ಪುತ್ರ ಸಾಗರ ಖಂಡ್ರೆಯನ್ನ ಚುನಾವಣೆಯಲ್ಲಿ ಗೆಲ್ಲಿಸಲು ಸಚಿವ ಈಶ್ವರ ಖಂಡ್ರೆ ಕಸರತ್ತು.
ಕನ್ನಡಪ್ರಭ ವಾರ್ತೆ ಬೀದರ್
ದಿನೇ ದಿನೇ ಬಿಜೆಪಿಯಲ್ಲಿ ಬಿರುಕುಗಳು ಹೆಚ್ಚುತ್ತ ಪಕ್ಷದಿಂದ ಉಚ್ಛಾಟನೆ, ರಾಜೀನಾಮೆಗಳ ಬೆನ್ನಲ್ಲಿಯೇ ಯುವ ಜನಾಂಗವು ಮೋದಿ ಬಿಟ್ಟು ಕಾಂಗ್ರೆಸ್ ಕೈ ಹಿಡಿಯುತ್ತಿರುವದು ಕಮಲ ಪಾಳಯವನ್ನು ಚಿಂತೆಗೀಡು ಮಾಡಿದೆ.ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ವಿರುದ್ಧ ಭುಗಿಲೇಳುತ್ತಿರುವ ಅಹಂಕಾರ, ದರ್ಪದ ಆರೋಪಗಳು, ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಈ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ ಆರಂಭ ಮಾಡಿಸಿದಂತಾಗಿ ಬಿಜೆಪಿ, ಜೆಡಿಎಸ್ ತೊರೆದು ಹಲವು ಮುಖಂಡರು, ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಕಮಲ ಪಾಳಯಕ್ಕೆ ಉತ್ತಮ ಸಂದೇಶವೇನಲ್ಲ ಎಂಬುವದು ಸ್ವತಃ ಬಿಜೆಪಿ ಮುಖಂಡರಲ್ಲಿ ಚರ್ಚೆಗಳು ಆರಂಭವಾಗುವಂತೆ ಮಾಡಿದೆ.
ಬಿಜೆಪಿಯಿಂದ ಈಗಾಗಲೇ ಮರಾಠಾ ಮುಖಂಡ ದಿನಕರ ಮೋರೆ ಹಾಗೂ ವಕೀಲರಾದ ಜೈರಾಜ್ ಬುಕ್ಕಾ ಬಿಜೆಪಿಯಿಂದ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು ಅವರನ್ನು ಮತ್ತು ಭಾಲ್ಕಿ ಮಂಡಲ ಮಾಜಿ ಅಧ್ಯಕ್ಷ ರಾವಸಾಬ್ ಮತ್ತಿತರರನ್ನ 6 ವರ್ಷಗಳ ಕಾಲ ಉಚ್ಛಾಟಿಸಿದ್ದರೆ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪದ್ಮಾಕರ ಪಾಟೀಲ್ ಪಕ್ಷಕ್ಕೆರಾಜೀನಾಮೆ ನೀಡಿದ್ದರ ಜೊತೆಗೆ ಜಿಲ್ಲೆಯ ವಿವಿಧೆಡೆ ಕಾಂಗ್ರೆಸ್‌ನ ಕೈ ಹಿಡಿಯುತ್ತಿರುವ ಯುವ ಪಡೆಗಳ ಬೆಳವಣಿಗೆಗಳು ಕಮಲ ಪಾಳಯಕ್ಕೆ ಭಾರಿ ಪೆಟ್ಟು ನೀಡ್ಯಾವು ಎಂಬುವುದು ಗಮನಾರ್ಹ.ಪ್ರಥಮ ಪ್ರಯತ್ನದಲ್ಲೇ ಪುತ್ರ ಸಾಗರನನ್ನು ಸಂಸತ್‌ಗೆ ಕಳುಹಿಸಲು ಸಚಿವ ಈಶ್ವರ ಖಂಡ್ರೆ ಪಣ ತೊಟ್ಟಿದ್ದರಿಂದ. ಗಡಿ ಜಿಲ್ಲೆ ಬೀದರ್‌ನಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಬಿಜೆಪಿ ಹಾಗೂ ಜೆಡಿಎಸ್ ಅಸಮಾಧಾನಿತ ಮುಖಂಡರು, ಕಾರ್ಯಕರ್ತರಿಗೆ ಗಾಳ ಹಾಕುತ್ತಿರುವದು ಸ್ಪಷ್ಟವಾಗಿದ್ದು ಪ್ರಸಕ್ತ ಚುನಾವಣೆ ಸಮೀಪಿಸುತ್ತಿದ್ದಂತೆ ಕೈ ಬಲಪಡಿಸಿಕೊಳ್ಳುವಲ್ಲಿ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.
ಕೈ ಹಿಡಿದ ಬಿಜೆಪಿ, ಜೆಡಿಎಸ್ ಪ್ರಮುಖರು:ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರರೆಡ್ಡಿ ಬೆಳ್ಳೂರ, ಬಿಜೆಪಿ ಮಹಾಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ರಾಮಚಂದ್ರ ಪಾಟೀಲ್, ವಿಜಯಕುಮಾರ ಕೋಡ್ಗೆ, ನವೀನರೆಡ್ಡಿ ತಾದಲಾಪೂರ್ ಸೇರಿ ಹಲವರು ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.
ಇದಲ್ಲದೆ ಜೆಡಿಎಸ್‌ನ ಯುವ ಜನತಾದಳ ರಾಜ್ಯ ಕಾರ್ಯದರ್ಶಿ ವಿಷ್ಣುವರ್ಧನ, ಉದಯಕುಮಾರ, ಜೆಡಿಎಸ್‌ನ ಕೆಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಏನೇ ಆಗಲಿ ಸಾಗರ ಖಂಡ್ರೆ ಅವರನ್ನು ಗೆಲ್ಲಿಸಲೇಬೇಕು ಎಂದು ಸಚಿವ ಈಶ್ವರ ಖಂಡ್ರೆ ಅವರು ಎಲ್ಲಿಲ್ಲದ ಪ್ರಯತ್ನಗಳು ನಡೆಸುತ್ತಿದ್ದಾರೆ.