ಸಾರಾಂಶ
ಇಲ್ಲಿನ ಚಾರಣ ಪಥಗಳಲ್ಲಿ ಪ್ರವಾಸಿಗರು, ಚಾರಣಿಗರು ಕುಡಿದು ಎಸೆಯುವ ನೀರಿನ ಬಾಟಲುಗಳು, ತಿಂದು ಎಸೆಯುವ ಪ್ಲಾಸ್ಟಿಕ್ ಕವರ್‌ಗಳು ಅಲ್ಲಿನ ಪರಿಸರ ಹಾಗೂ ವನ್ಯಜೀವಿಗಳಿಗೆ ಆಪತ್ತು ತರುವ ಸಂಭವವನ್ನೂ ಹೆಚ್ಚಿಸಿದೆ.
ವನ್ಯಜೀವಿಗಳ ಜೀವಕ್ಕೆ ಆಪತ್ತು ಸಂಭವ
೮-೧೦ ಬ್ಯಾಗ್ ತುಂಬುವಷ್ಟು ಪ್ಲಾಸ್ಟಿಕ್ ಕಸ ಸಂಗ್ರಹವಿ.ಎಂ. ನಾಗಭೂಷಣಕನ್ನಡಪ್ರಭ ವಾರ್ತೆ ಸಂಡೂರುಮಳೆಗಾಲದ ಹಿನ್ನೆಲೆ ತಾಲೂಕಿನ ಹಸಿರುಟ್ಟ ಬೆಟ್ಟಗುಡ್ಡಗಳು, ಅವುಗಳ ಶಿಖರಾಗ್ರಗಳನ್ನು ಮುತ್ತಿಕ್ಕುತ್ತಾ ಸಾಗುವ ಮೋಡಗಳು, ಅಲ್ಲಲ್ಲಿ ಜುಳುಜುಳು ನಾದಗೈಯ್ಯುತ್ತ ಹರಿಯುವ ಹಳ್ಳತೊರೆಗಳು ಪ್ರವಾಸಿಗರನ್ನು, ಚಾರಣಿಗರನ್ನು ಒಂದೆಡೆ ಕೈಬೀಸಿ ಕರೆಯತ್ತಿವೆ. ಮತ್ತೊಂದೆಡೆ ಇಲ್ಲಿನ ಚಾರಣ ಪಥಗಳಲ್ಲಿ ಪ್ರವಾಸಿಗರು, ಚಾರಣಿಗರು ಕುಡಿದು ಎಸೆಯುವ ನೀರಿನ ಬಾಟಲುಗಳು, ತಿಂದು ಎಸೆಯುವ ಪ್ಲಾಸ್ಟಿಕ್ ಕವರ್‌ಗಳು ಅಲ್ಲಿನ ಪರಿಸರ ಹಾಗೂ ವನ್ಯಜೀವಿಗಳಿಗೆ ಆಪತ್ತು ತರುವ ಸಂಭವವನ್ನೂ ಹೆಚ್ಚಿಸಿದೆ.ತಾಲೂಕಿನ ಭೀಮತೀರ್ಥದ ಬಳಿಯ ಚಾರಣ ಪಥದಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಮಾರು ೮-೧೦ ಬ್ಯಾಗ್ ತುಂಬುವಷ್ಟು ಪ್ಲಾಸ್ಟಿಕ್ ಬಾಟಲಿ, ಕ್ಯಾರಿಬ್ಯಾಗ್, ಜಂಕ್‌ಫುಡ್‌ಗಳ ಪ್ಯಾಕೇಟ್ ಸಂಗ್ರಹಿಸಿದ್ದಾರೆ. ಇದನ್ನು ಗಮನಿಸಿದರೆ, ಇಲ್ಲಿನ ಚಾರಣ ಪಥಗಳು ಪ್ಲಾಸ್ಟಿಕ್‌ಮಯವಾಗುತ್ತಿರುವ ಅಂಶ ಪರಿಸರ ಪ್ರೇಮಿಗಳಲ್ಲಿ ಅಚ್ಚರಿಯ ಜೊತೆಗೆ ಆತಂಕ ಹುಟ್ಟುಹಾಕಿದೆ.
ಇತ್ತೀಚೆಗೆ ತಾಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿಯೂ ಭೀಮತೀರ್ಥದ ಬಳಿ ಪ್ರವಾಸಿಗರು ಪ್ಲಾಸ್ಟಿಕ್‌ನ ನೀರಿನ ಬಾಟಲ್, ಕ್ಯಾರಿಬ್ಯಾಗ್‌ಗಳ ಎಸೆದು ಹೋಗುತ್ತಿರುವ ಕುರಿತು ಶಾಸಕಿ ಈ. ಅನ್ನಪೂರ್ಣ ತುಕಾರಾಂ ಕಳವಳ ವ್ಯಕ್ತಪಡಿಸಿದ್ದಲ್ಲದೆ, ಚಾರಣಕ್ಕೆ ಬರುವ ಪ್ರವಾಸಿಗರು ಹಾಗೂ ಚಾರಣಿಗರಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯದಂತೆ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದನ್ನು ಗಮನಿಸಿದರೆ, ಇದರ ಗಂಭೀರತೆ ಹೆಚ್ಚಿದೆ ಎನ್ನಬಹುದಾಗಿದೆ.ಚಾರಣ ಪಥಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಿ ಎಸೆಯುವುದರಿಂದ, ಅವು ಪರಿಸರಕ್ಕೆ ಮಾರಕವಾಗುವುದಲ್ಲದೆ, ವನ್ಯಜೀವಿಗಳ ಜೀವಕ್ಕೂ ಕುತ್ತು ತರುವ ಸಂಭವವಿದೆ. ಈಗಾಗಲೇ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ಜನರ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯಗಳು ನಡೆಯುತ್ತಿವೆ. ಜನರ ಮೇಲೆ ದುಷ್ಟರಿಣಾಮ ಉಂಟು ಮಾಡಿದ್ದ ಪ್ಲಾಸ್ಟಿಕ್ ಇದೀಗ ಕೆಲ ಪ್ರವಾಸಿಗರು ಹಾಗೂ ಕೆಲ ಚಾರಣಿಗರ ಮೂಲಕ ಚಾರಣ ಪಥ ಹಾಗೂ ಪ್ರವಾಸಿ ತಾಣಗಳನ್ನು ಸೇರುತ್ತಿರುವುದು ಪರಿಸರದ ಸ್ವಾಸ್ಥ್ಯಕ್ಕೂ ಹಾಗೂ ಅಲ್ಲಿನ ಜೀವಿಗಳಿಗೂ ಆಪತ್ತನ್ನು ಉಂಟು ಮಾಡುವ ಸಂಭವ ಹೆಚ್ಚಾಗುತ್ತಿದೆ. ಇಲ್ಲಿನ ಚಾರಣ ಪಥಗಳು ಹಾಗೂ ಪ್ರವಾಸಿ ತಾಣಗಳ ಬಳಿ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲು ಚಾರಣ ಹಾಗೂ ಪ್ರಕೃತಿಯನ್ನು ಆಸ್ವಾದಿಸಲು ಬರುವ ಪ್ರವಾಸಿಗರಲ್ಲಿ ಪ್ಲಾಸ್ಟಿಕ್ ಬಳಕೆಯ ದುಷ್ಟರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂಬ ಮಾತು ಪರಿಸರಾಸಕ್ತರಿಂದ ಕೇಳಿ ಬರುತ್ತಿದೆ. ಚಾರಣಕ್ಕೆ ಹೋಗುವ ಜನರೂ ಈ ಕುರಿತು ಜಾಗ್ರತೆ ವಹಿಸುವುದು ಅಗತ್ಯವಿದೆ. ಪ್ರಕೃತಿ ಆರಾಧಿಸಿ, ಆಸ್ವಾದಿಸಬೇಕು. ಹಾಗೆಯೇ ಪರಿಸರವನ್ನು ಸಂರಕ್ಷಿಸಿ, ಅದರ ಸ್ವಾಸ್ಥ್ಯವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ.