ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ ಭಾರತದ ಶೇ. 10 ರಿಂದ 13 ರಷ್ಟು ವಯಸ್ಕರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾಯಿಲೆಗಳ ಲಕ್ಷಣಗಳು ತೀವ್ರವಾಗುವ ಮುನ್ನವೇ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ ಭಾರತದ ಶೇ. 10 ರಿಂದ 13 ರಷ್ಟು ವಯಸ್ಕರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದು, ಈ ಕಾಯಿಲೆಗಳ ಲಕ್ಷಣಗಳು ತೀವ್ರವಾಗುವ ಮುನ್ನವೇ ಎಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೈಸೂರಿನ ಮಣಿಪಾಲ್ ಆಸ್ಪತ್ರೆಯ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಸರ್ಜನ್ ಹಾಗೂ ಯುರಾಲಜಿ ಮತ್ತು ಆಂಡ್ರಾಲಜಿ ವಿಭಾಗದ ಕನ್ಸಲ್ಟಂಟ್ ಡಾ. ಕೆ.ಎ.ತಿಮ್ಮಯ್ಯ, 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರೊಸ್ಟೇಟ್ ಗ್ರಂಥಿ ದೊಡ್ಡದಾಗುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅನೇಕ ಪುರುಷರು ಪದೇ ಪದೇ ಮೂತ್ರ ವಿಸರ್ಜನೆ ಮಾಡುವುದು ಅಥವಾ ರಾತ್ರಿ ವೇಳೆ ಅತಿಯಾಗಿ ಬಾತ್‌ರೂಮ್‌ಗೆ ಹೋಗುವುದನ್ನು ವಯಸ್ಸಾದ ಮೇಲೆ ಇದೆಲ್ಲಾ ಸಾಮಾನ್ಯ ಎಂದು ನಿರ್ಲಕ್ಷಿಸುತ್ತಾರೆ. ಇದರಿಂದ ಕಾಯಿಲೆಯನ್ನು ಪತ್ತೆ ಹಚ್ಚುವುದು ತಡವಾಗುತ್ತದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಪ್ರೊಸ್ಟೇಟ್ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ. ವಯಸ್ಸು, ಕೌಟುಂಬಿಕ ಹಿನ್ನೆಲೆ ಮತ್ತು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ. 45 ವರ್ಷ ಮೇಲ್ಪಟ್ಟವರು ಮತ್ತು ಕುಟುಂಬದಲ್ಲಿ ಇಂತಹ ಕಾಯಿಲೆಯ ಹಿನ್ನೆಲೆ ಇರುವವರು ತಪ್ಪದೆ ಪಿಎಸ್‌ಎ ಪರೀಕ್ಷೆ ಮತ್ತು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರಂಭದಲ್ಲೇ ಪತ್ತೆ ಹಚ್ಚಿದರೆ ಗುಣಪಡಿಸುವುದು ಸುಲಭ ಎಂದರು.ಕಿಡ್ನಿ ಟ್ರಾನ್ಸ್‌ಪ್ಲಾಂಟ್ ಫಿಸಿಶಿಯನ್ ಹಾಗೂ ನೆಫ್ರಾಲಜಿ ವಿಭಾಗದ ಕನ್ಸಲ್ಟಂಟ್ ಡಾ. ಪಿ.ಟಿ. ವಿಪಿನ್ ಕಾವೇರಪ್ಪ ಮಾತನಾಡಿ, ಮಧುಮೇಹ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ಕಿಡ್ನಿ ಹಾನಿಗೆ ಪ್ರಮುಖ ಕಾರಣವಾಗುತ್ತಿವೆ ಎಂದು ಎಚ್ಚರಿಸಿದರು. ಇಂತಹ ಸಮಸ್ಯೆಗಳು ಯಾವುದೇ ಲಕ್ಷಣವಿಲ್ಲದೆ ಮೂತ್ರಪಿಂಡದ ಕೆಲಸವನ್ನು ಸಂಪೂರ್ಣವಾಗಿ ನಿಲ್ಲಿಸಬಹುದು. 40 ವರ್ಷ ದಾಟಿದ ಪುರುಷರು ಮತ್ತು ರೋಗದ ಲಕ್ಷಣವಿರುವವರು ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ಕಿಡ್ನಿ ಕಾರ್ಯನಿರ್ವಹಣೆಯ ತಪಾಸಣೆಯನ್ನು ನಿರ್ಲಕ್ಷಿಸಬಾರದು. ಕಡಿಮೆ ಉಪ್ಪು ತಿನ್ನುವುದು, ಹೆಚ್ಚು ನೀರು ಕುಡಿಯುವುದು, ನೋವು ನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಬಳಸುವುದನ್ನು ನಿಲ್ಲಿಸುವುದು ಮತ್ತು ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಮೂತ್ರಪಿಂಡವನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು ಎಂದು ತಿಳಿಸಿದರು.