ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ದರೋಡೆ ಪ್ರಕರಣಗಳು ನಡೆದಿವೆ. ಈ ಎಲ್ಲ ಸಂದರ್ಭಗಳಲ್ಲೂ ಪೊಲೀಸರು ಆರೋಪಿಗಳ ಪತ್ತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸುವಲ್ಲಿ ವಿಫಲವಾಗಿರುವುದೇ ಇಂತಹ ದರೋಡೆ ಪ್ರಕರಣಗಳು ಹೆಚ್ಚಳವಾಗಲು ಕಾರಣವಾಗಿದೆ ಎಂಬ ಮಾತು ಕೇಳಿಬರುತ್ತಿದೆ.ಉಳಾಯಿಬೆಟ್ಟು ದರೋಡೆ ಪ್ರಕರಣ:
2024ರ ಜೂ.21ರಂದು ಉಳಾಯಿಬೆಟ್ಟುವಿನಲ್ಲಿ ಉದ್ಯಮಿ ಪದ್ಮನಾಭ ಕೋಟ್ಯಾನ್ ಅವರ ಮನೆ ದರೋಡೆ ರಾತ್ರಿ 8.00-8.30ರ ಸುಮಾರಿಗೆ ನಡೆದು ಗ್ರಾಮಾಂತರ ಪೊಲೀಸರು 8.45ಕ್ಕೆ ಘಟನಾ ಸ್ಥಳಕ್ಕೆ ಬಂದಿದ್ದರು. ದರೋಡೆಕೋರರು ಒಂದು ಗಂಟೆ ಬಳಿಕ ಸುಮಾರು 10.05ಕ್ಕೆ ತಲಪಾಡಿ ಟೋಲ್‌ಗೇಟ್ ದಾಟಿದ್ದರು. ಬೋಳಂತೂರು ಪ್ರಕರಣ:ಬೋಳಂತೂರು ನಾರ್ಶದ ಬೀಡಿ ಉದ್ಯಮಿಯ ಮನೆಗೆ 2025ರ ಜ.3ರಂದು ಇಡಿ ಅಧಿಕಾರಿಗಳ ಸೋಗಿನಲ್ಲಿ ಬಂದ ದರೋಡೆಕೋರರು 30 ಲಕ್ಷ ರು. ದೋಚಿದ್ದರು. ಈ ಪ್ರಕರಣದಲ್ಲೂ ಆರೋಪಿಗಳು ಕೇರಳ ಗಡಿ ದಾಟಿ ಹೋಗಿದ್ದು, ಗಡಿ ಭಾಗದಲ್ಲಿ ಪೊಲೀಸರ ಬಿಗುತಪಾಸಣೆ ಇಲ್ಲದಿರುವುದೇ ದರೋಡೆಕೋರರಿಗೆ ಸುರಕ್ಷೆಯಾಗಿದೆ.ಕೋಟೆಕಾರು ದರೋಡೆ ಪ್ರಕರಣ:
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಶುಕ್ರವಾರ ಮಧ್ಯಾಹ್ನ 1.15ರ ವೇಳೆಗೆ ನಡೆದು ದರೋಡೆಕಾರರು ಎರಡು ಕಾರಿನಲ್ಲಿ ಪರಾರಿಯಾಗಿದ್ದಾರೆ. ಒಂದು ಕಾರು ತಲಪಾಡಿ ಟೋಲ್ ಗೇಟ್ ಮೂಲಕ ಸಂಚರಿಸಿದರೆ, ಇನ್ನೊಂದು ಕಾರು ಮಂಗಳೂರಿಗೆ ತೆರಳಿ, ಸಿಎಂ ಪೊಲೀಸ್ ಬಂದೋಬಸ್ತ್ ಮಧ್ಯೆಯೂ ಬಂಟ್ವಾಳಕ್ಕೆ ತೆರಳಿ ಸಂಜೆ 3 ಗಂಟೆಯ ನಂತರ ಕೇರಳ ಗಡಿ ದಾಟಿ ಹೋದ ಮಾಹಿತಿ ಲಭಿಸಿದೆ. ಒಂದು ವೇಳೆ ಗಡಿ ಭಾಗ ಬಿಗು ತಪಾಸಣೆ ನಡೆಯುತ್ತಿದ್ದರೆ ದರೋಡೆಕೋರರು ಸೆರೆಯಾಗುವ ಸಂಭವ ಜಾಸ್ತಿ ಇತ್ತು. ಕೇರಳ ಪ್ರವೇಶಿಸಿದರೆ ಬಚಾವ್!: ಈ ಮೂರು ದರೋಡೆ ಪ್ರಕರಣದಲ್ಲೂ ಆರೋಪಿಗಳ ವಾಹನಗಳು ಕೇರಳ ಕಡೆ ಪರಾರಿಯಾಗಿರುವುದು ಸಾಬೀತಾಗಿದೆ. ಕರ್ನಾಟಕ ಗಡಿ ದಾಟಿ ಕೇರಳ ಪ್ರವೇಶಿಸಿದರೆ ದರೋಡೆಕೋರರು ಬಚಾವ್ ಆಗುತ್ತಿದ್ದಾರೆ. ಈ ಕಾರಣದಿಂದಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದರೋಡೆ ಕೃತ್ಯಗಳು ಹೆಚ್ಚಾಗುತ್ತಿದೆ. ಹೀಗಾಗಿ ಗಡಿ ಭಾಗಗಳಲ್ಲಿ ತಪಾಸಣೆ, ಭದ್ರತೆ, ಸಿಸಿ ಕ್ಯಾಮೆರಾ ಕಣ್ಗಾವಲು ಮತ್ತಷ್ಟು ಬಿಗುಗೊಳಿಸಬೇಕಾಗಿದೆ.ಸರಿಯಾದ ದಿಕ್ಕಿನಲ್ಲಿ ತನಿಖೆ, ಆತಂಕ ಬೇಡ: ಪೊಲೀಸ್ ಕಮಿಷನರ್‌ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ 8 ತಂಡವನ್ನು ರಚಿಸಲಾಗಿದೆ. ತನಿಖೆ ಸರಿಯಾಗ ದಿಕ್ಕಿನಲ್ಲಿ ಸಾಗುತ್ತಿದ್ದು, ಜನತೆ ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರೋಡೆಯ ಬಗ್ಗೆ ಮಾಹಿತಿ ಬಂದ ಕೂಡಲೇ ಅಂತರ್ ಜಿಲ್ಲೆ, ಅಂತಾರಾಜ್ಯದ ಗಡಿಭಾಗದಲ್ಲಿ ನಾಕಾಬಂಧಿ ತಪಾಸಣೆ ನಡೆಸಲಾಗಿದೆ. ದರೋಡೆ ವೇಳೆ ಬಳಸಲಾದ ಕಾರು ಹಾಗೂ ಅದು ಸಾಗಿದ ರಸ್ತೆಯ ಬಗ್ಗೆ ಮಾಹಿತಿ ಲಭಿಸಿದೆ. ಈ ಪ್ರಕರಣದಲ್ಲಿ ಸ್ಥಳೀಯ ಆರೋಪಿಗಳು ಶಾಮೀಲಾಗಿರುವ ಬಗ್ಗೆಯೂ ನಾನಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಈ ಹಿಂದೆ ನಡೆದ ದರೋಡೆ, ಕಳವು ಕೃತ್ಯಗಳ ಹಿನ್ನಲೆ, ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ಕಲೆ ಹಾಕಿ ತನಿಖಾ ತಂಡ ಕೆಲಸ ಮಾಡುತ್ತಿದೆ. ಮೊಬೈಲ್ ದಾಖಲೆ, ಸಿಸಿ ಕ್ಯಾಮೆರಾ ಡಿವಿಆರ್ ಸೇರಿದಂತೆ ಪ್ರತಿಯೊಂದು ದಾಖಲೆಗಳನ್ನು ತಂತ್ರಜ್ಞರ ತಂಡ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಕೆಲವೊಂದು ಸೂಕ್ಷ್ಮ ಮಾಹಿತಿಗಳನ್ನು ಹೇಳಲು ಸಾಧ್ಯವಿಲ್ಲ, ನಮ್ಮ ನಿರೀಕ್ಷೆಯಂತೆ ತನಿಖೆ ಸಾಗಿದರೆ ಆದಷ್ಟು ಶೀಘ್ರದಲ್ಲೇ ಈ ಪ್ರಕರಣವನ್ನು ಬೇಧಿಸುತ್ತೇವೆ ಎಂದಿದ್ದಾರೆ.