ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಬೆಳೆಸಿ

| Published : Feb 19 2025, 12:46 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ವಿದ್ಯಾರ್ಥಿಗಳಿದ್ದಾಗಿನಿಂದಲೇ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೆಳೆಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮೀಜಿಗಳು ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ವಿದ್ಯಾರ್ಥಿಗಳಿದ್ದಾಗಿನಿಂದಲೇ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಬೆಳೆಸಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷರಾದ ಬಸವಲಿಂಗ ಮಹಾಸ್ವಾಮೀಜಿಗಳು ಸಲಹೆ ನೀಡಿದರು.

ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರೌಢಶಾಲೆ ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಹಾಗೂ ಮಕ್ಕಳ ಕಲರವ ಸಮಾರಂಭದ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ನಮ್ಮ ಮಕ್ಕಳಿಗೆ ಒಳ್ಳೆ ಶಿಕ್ಷಣ, ಅಪ್ಪಟ ಭಾರತೀಯ ಸಂಸ್ಕೃತಿ, ಸಂಸ್ಕಾರ, ಕೌಟುಂಬಿಕ ಸಂಬಂಧ ಹಾಗೂ ಮಾನವೀಯ ಗುಣಗಳು ಮತ್ತು ಮೌಲ್ಯಗಳನ್ನು ರೂಢಿಸುವುದು ಇಂದು ಅಗತ್ಯವಾಗಿದೆ. ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬಿತ್ತುತ್ತಿರುವ ಸಿದ್ದೇಶ್ವರ ಸ್ವಾಮೀಜಿ ಹೆಸರಿನ ಸಂಸ್ಥೆಯಲ್ಲಿ ಕಲಿತಿರುವ ಮಕ್ಕಳು ಹಲವಾರು ಉನ್ನತ ಉದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.ಪಾಲಕರು ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮ ನಿತ್ಯ ಬದುಕಿನ ಕೆಲ ಸಮಯವನ್ನು ಮೀಸಲಿಡುವುದು ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಉತ್ತಮ ಜೀವನ ಕಟ್ಟಿಕೊಂಡು ತನ್ನ ತಂದೆ ತಾಯಿಗಳ ಜೊತೆಗೆ ಗೌರವಯುತವಾಗಿ ಬದುಕು ಕಟ್ಟಿಕೊಳ್ಳುವುದು. ದೇಶದ ಸಂಸ್ಕೃತಿಗೆ ಗೌರವ ನೀಡುವಂತಹ ಸಂಸ್ಕಾರವಂತ ಶಿಕ್ಷಣ ಪಡೆದುಕೊಂಡು ಒಬ್ಬ ಉತ್ತಮ ನಾಗರಿಕನಾಗಬೇಕು. ಶಿಕ್ಷಕರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿಯೇ ಸಾಗಿ ಉನ್ನತ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಪಡೆಯುವ ಮೂಲಕ ಕಲಿತ ಸಂಸ್ಥೆಗೂ ಹಾಗೂ ಪಾಲಕರ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಹೇಳಿದರು.

ಅತಿಥಿಗಳಾಗಿ ವಿಜಯಪುರ ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ ಹಾಗೂ ಮಲ್ಲಿಕಾರ್ಜುನ ಕಲ್ಲೂರ ಅವರು ಮಾತನಾಡಿ, ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಸಿಗುತ್ತಿದೆ. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು ಸಮನ್ವಯದಿಂದ ಕೆಲಸ ಮಾಡುತ್ತಿರುವುದರಿಂದ ಶಾಲೆಯೂ ಸರ್ವಾಂಗೀಣ ಅಭಿವದ್ಧಿ ಕಾಣುತ್ತಿದೆ. ಮಕ್ಕಳು ಶಾಲೆ ಹಾಗೂ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಉತ್ತಮ ಪ್ರಜೆಗಳಾಗುವಂತೆ ಶುಭ ಹಾರೈಸಿದರು.

ಸಾನಿಧ್ಯವನ್ನು ಸದಯ್ಯನ ಮಠದ ವೀರಗಂಗಾಧರ ಶಿವಾಚಾರ್ಯರು ವಹಿಸಿದ್ದರು. ಅಧ್ಯಕ್ಷತೆಯನ್ನು ಜಯಶ್ರೀ ಪಾಟೀಲ ವಹಿಸಿದ್ದರು.

ಸಂಸ್ಥೆಯ ಸಂಸ್ಥಾಪಕ ವ್ಹಿ.ಕೆ.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಿದ್ದೇಶ್ವರ ಸ್ವಾಮಿಜಿಗಳ ಅವರ ಹೆಸರಿನಲ್ಲಿ ಪ್ರಾರಂಭವಾದ ಸಂಸ್ಥೆ ನಡೆದು ಬಂದ ಹಾದಿ, ಸಹಕಾರ ನೀಡಿದ ಮಹನೀಯರನ್ನು ಸ್ಮರಿಸಿದರು. ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶ, ರಾಜ್ಯ ಹಾಗೂ ವಿವಿಧ ರಾಜ್ಯಗಳಲ್ಲಿ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು, ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಮಕ್ಕಳ ಕಲರವ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಕೆ.ಎಸ್.ಪಾಟೀಲ, ಸೌಮ್ಯ. ಎಂ.ಕಲ್ಲೂರ, ಐ.ಎಸ್.ನರೂಣಿ, ಎಂ.ಎಸ್.ಸ್ಥಾವರಮಠ, ಪತ್ರಕರ್ತ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ರೇಷ್ಮಾ ಜಾಧವ, ಎಸ್.ಕೆ.ಪಾಟೀಲ, ವೈ.ಜೆ.ಬೋಳೆಗಾಂವ, ಮಲ್ಲಿಕಾರ್ಜುನ ಹಡಪದ ಸೇರಿದಂತೆ ಪಟ್ಟಣದ ಪ್ರಮುಖರು, ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.