ಸಾರಾಂಶ
ಸಾಲಬಾಧೆ: ಮನನೊಂದು ರೈತ ಆತ್ಮಹತ್ಯೆ
ಶಹಾಪುರ: ಸಾಲಬಾಧೆ ತಾಳಲಾರದೆ ಮನನೊಂದು ರೈತನೊಬ್ಬ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹುರಸಗುಂಡಿಗಿ ಗ್ರಾಮದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ. ಮಕ್ಬುಲ್ ಸಾಬ್ (55) ಆತ್ಮಹತ್ಯೆ ಮಾಡಿಕೊಂಡ ರೈತ. ಮೃತನಿಗೆ ಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಿದ್ದಾರೆ. ಇತನು ಶಹಾಪುರ ಶಾಖೆ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕಿನಲ್ಲಿ 1 ಲಕ್ಷ ರು.ಗಳ ಬೆಳೆ ಸಾಲ ಹಾಗೂ ಕೈಗಡವಾಗಿ 12 ಲಕ್ಷ ರು.ಗಳ ಸಾಲ ಮಾಡಿದ್ದ ಎನ್ನಲಾಗಿದೆ.
ಮೃತನ ಹೆಸರಲ್ಲಿ 5.20 ಎಕರೆ ಜಮೀನಿದೆ. ಕಳೆದ ಮುರ‍್ನಾಲ್ಕು ವರ್ಷಗಳಿಂದ ಹತ್ತಿ ಮತ್ತು ತೊಗರಿ ಬೆಳೆ ಸರಿಯಾಗಿ ಬಾರದೆ, ಮಾಡಿದ ಸಾಲ ತೀರಿಸಲಾಗದೆ, ಹತ್ತಿ ಬೆಳೆಗೆ ಸಿಂಪಡಿಸಲು ಮನೆಯಲ್ಲಿ ತಂದಿಟ್ಟಿದ್ದ ಕ್ರಿಮಿನಾಶಕ ಸೇವಿಸಿ, ಮೃತಪಟ್ಟಿದ್ದಾನೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಈ ಬಗ್ಗೆ ಮೃತನ ಹೆಂಡತಿ ಮುಮ್ತಾಜ್ ಬೇಗಂ ನೀಡಿರುವ ದೂರಿನನ್ವಯ ಭೀಮರಾಯನಗುಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.