ಸಿ ಮತ್ತು ಡಿ ಗುಂಪಿನ ಹುದ್ದೆಗಳ ಕೆಲಸಗಳನ್ನು ಸಂಪೂರ್ಣವಾಗಿ ಮಧ್ಯವರ್ತಿಗಳ ಮುಖಾಂತರ ದುಡಿಸಿಕೊಳ್ಳುತ್ತಿದೆ. ಈ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿಯಾಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುವುದು. ಗುತ್ತಿಗೆದಾರರನ್ನು ಕೇಳಿದರೆ ಅಧಿಕಾರಿಗಳ ಮೇಲೆ ಹೇಳುವುದು ನಿರಂತರವಾಗಿ ನಡೆದಿದೆ
ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ
ರಾಜ್ಯ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿ, ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ವಿದ್ಯಾವಂತ ಯುವಕ-ಯುವತಿಯರನ್ನು ದೀರ್ಘಕಾಲಿಕವಾಗಿ ದುಡಿಸಲಾಗುತ್ತಿದೆ. ಮಾದರಿ ವ್ಯವಸ್ಥಾಪಕನಾಗಬೇಕಾದ ರಾಜ್ಯ ಸರ್ಕಾರ ಅಗತ್ಯವಿದ್ದಾಗ ಬಳಸಿ ಬಿಸಾಡುವ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಕಾಯಮೇತರರ ನೌಕರರ ಒಕ್ಕೂಟ (ಸಿಐಟಿಯು) ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಆರೋಪಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿ ಮತ್ತು ಡಿ ಗುಂಪಿನ ಹುದ್ದೆಗಳ ಕೆಲಸಗಳನ್ನು ಸಂಪೂರ್ಣವಾಗಿ ಮಧ್ಯವರ್ತಿಗಳ ಮುಖಾಂತರ ದುಡಿಸಿಕೊಳ್ಳುತ್ತಿದೆ. ಈ ನೌಕರರಿಗೆ ಪ್ರತಿ ತಿಂಗಳು ವೇತನ ಪಾವತಿಯಾಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುವುದು. ಗುತ್ತಿಗೆದಾರರನ್ನು ಕೇಳಿದರೆ ಅಧಿಕಾರಿಗಳ ಮೇಲೆ ಹೇಳುವುದು ನಿರಂತರವಾಗಿ ನಡೆದಿದೆ ಎಂದು ದೂರಿದರು.2025 ಏಪ್ರಿಲ್‌ನಲ್ಲಿ ಸಿಐಟಿಯು ಮತ್ತು ಮತ್ತಿತರ ಸಂಘಟನೆಗಳ ನಿರಂತರ ಒತ್ತಡ ಮತ್ತು ಒತ್ತಾಯದ ಮೇರೆಗೆ ಕನಿಷ್ಠ ವೇತನದ ಕರಡು ಅಧಿಸೂಚನೆ ಹೊರಡಿಸಿದೆ. ಆದರೆ ಇದುವರೆಗೂ ಅದನ್ನು ಜಾರಿ ಮಾಡದೇ ರಾಜ್ಯದಲ್ಲಿ 1 ಕೋಟಿ 77 ಲಕ್ಷ ಕಾರ್ಮಿಕರು ಕಷ್ಟ ಪಡುವಂತಾಗಿದೆ. 2022-23 ರಿಂದಲೇ ಕನಿಷ್ಠ ವೇತನ ಅನ್ವಯಿಸಿ ಜಾರಿ ಮಾಡಬೇಕು. ಕರ್ನಾಟಕ ರಾಜ್ಯ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಗುತ್ತಿಗೆ ಕಾರ್ಮಿಕರನ್ನು ಕಾಯಂ ಮಾಡಬೇಕು. ಹುದ್ದೆಗಳನ್ನು ತುಂಬುವಾಗ ಗುತ್ತಿಗೆ ಕಾರ್ಮಿಕರಿಗೆ ಶೇ. 50 ಮೀಸಲಾತಿ ನೀಡಬೇಕು. ಕಾಯಂ ಮಾಡುವ ತನಕ ನೇರ ವೇತನ ಪಾವತಿಯಡಿ ತರಬೇಕು. ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ. ಮೇ 25 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷೆ ಜಿ.ಎಂ.ಲಕ್ಷ್ಮೀದೇವಮ್ಮ ಇದ್ದರು.ಸಿಕೆಬಿ-2 ಸುದ್ದಿಗೋಷ್ಠಿಯಲ್ಲಿ ಎಸ್.ವರಲಕ್ಷ್ಮಿ ಮಾತನಾಡಿದರು.