ಕಾವೇರಿ ತಂತ್ರಾಂಶ ೨.0 ಜಾರಿಗೆ ಬಂದಿದ್ದರೂ ಅದರಲ್ಲಿಯೇ ನೂರಾರು ಸಮಸ್ಯೆಗಳಿಗಿವೆ. ಸಮಸ್ಯೆ ಪರಿಹರಿಸುವ ಬದಲು ರಾಜ್ಯಸರ್ಕಾರ ಕಾವೇರಿ ತಂತ್ರಾಂಶ- 3.0 ಜಾರಿಗೆ ತರಲು ಮುಂದಾಗಿದೆ. ಇದು ಜಾರಿಯಾದರೆ ಕೃತಕ ಬುದ್ದಿಮತ್ತೆ ತಂತ್ರಾಂಶ ಬಳಕೆಗೆ ಬಂದು ಪೇಪರ್ ಲೆಸ್ ಮತ್ತು ಫೇಸ್ ಲೆಸ್ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪರವಾನಗಿ ಪಡೆದ ದಸ್ತಾವೇಜು ಬರಹಗಾರರಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ ತಂತ್ರಾಂಶದಲ್ಲಿ ಪ್ರತ್ಯೇಕ ಲಾಗಿನ್ ನೀಡಬೇಕು ಮತ್ತು ನೋಂದಣಿ ಇಲಾಖೆ ಮುಂದಿನ ದಿನಗಳಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕಾವೇರಿ-3.0 ತಂತ್ರಾಂಶವನ್ನು ರದ್ದುಪಡಿಸುವಂತೆ ಆಗ್ರಹಿಸಿ ತಾಲೂಕು ಪತ್ರಬರಹಗಾರರ ಒಕ್ಕೂಟದ ಸದಸ್ಯರು ಪಟ್ಟಣದ ಉಪ ನೋಂದಣಾಧಿಕಾರಿಗಳ ಕಚೇರಿಯ ಮುಂದೆ ಲೇಖನಿ ಸ್ಥಗಿತಗೊಳಿಸಿ ಅನಿರ್ಧಿಷ್ಟ ಕಾಲದ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.ತಾಲೂಕು ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ಪಿ.ಎಸ್.ಶಿವಲಿಂಗೇಗೌಡ ಮಾತನಾಡಿ, ಸರ್ಕಾರದ ನೂತನ ನೀತಿಯಿಂದ ದಸ್ತಾವೇಜು ಬರಹಗಾರರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಸರ್ಕಾರ ಪೇಪರ್ ಲೆಸ್ ಮತ್ತು ಫೇಸ್‌ಲೆಸ್ ನೋಂದಣಿ ನೀತಿ ಜಾರಿಗೆ ತರುವುದರಿಂದ ಪತ್ರ ಬರಹಗಾರರು ತಮ್ಮ ವೃತ್ತಿಯಿಂದ ದೂರವಾಗಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ದಸ್ತಾವೇಜು ಬರಹಗಾರರ ಹಿತರಕ್ಷಣೆ ದೃಷ್ಟಿಯಿಂದ ರಾಜ್ಯ ಸರ್ಕಾರ ವಕೀಲರಿಗೆ ನೀಡಿರುವಂತೆ ಪ್ರತ್ಯೇಕ ಲಾಗಿನ್ ನೀಡಿ ಅದರ ಮೂಲಕ ಪತ್ರ ಬರಹಗಾರರು ನೋಂದಣಿ ಪ್ರಕ್ರಿಯೆ ನಡೆಸಲು ಅವಕಾಶ ನೀಡಬೇಕು. ಜನರ ಎಲ್ಲಾ ಮಾಹಿತಿಗಳು ಲಿಖಿತ ದಾಖಲೆಯಲ್ಲಿದ್ದು ಅದರ ಸಂರಕ್ಷಣೆಗೆ ಪೇಪರ್ ಲೆಸ್ ನೀತಿಯಿಂದ ತೊಂದರೆಯಾಗಲಿದೆ. ನಿರುದ್ಯೋಗ ಸಮಸ್ಯೆಗೆ ಸರ್ಕಾರದ ನೂತನ ನೋಂದಣಿ ನೀತಿ ಕಾರಣವಾಗಲಿದೆ ಎಂದು ದೂರಿದರು.ಕಾರ್ಯದರ್ಶಿ ಕೆ.ಆರ್.ಹರೀಶ್ ಮಾತನಾಡಿ, ಕಾವೇರಿ ತಂತ್ರಾಂಶ ೨.0 ಜಾರಿಗೆ ಬಂದಿದ್ದರೂ ಅದರಲ್ಲಿಯೇ ನೂರಾರು ಸಮಸ್ಯೆಗಳಿಗಿವೆ. ಸಮಸ್ಯೆ ಪರಿಹರಿಸುವ ಬದಲು ರಾಜ್ಯಸರ್ಕಾರ ಕಾವೇರಿ ತಂತ್ರಾಂಶ- 3.0 ಜಾರಿಗೆ ತರಲು ಮುಂದಾಗಿದೆ. ಇದು ಜಾರಿಯಾದರೆ ಕೃತಕ ಬುದ್ದಿಮತ್ತೆ ತಂತ್ರಾಂಶ ಬಳಕೆಗೆ ಬಂದು ಪೇಪರ್ ಲೆಸ್ ಮತ್ತು ಫೇಸ್ ಲೆಸ್ ನೋಂದಣಿ ಪ್ರಕ್ರಿಯೆ ಆರಂಭಗೊಳ್ಳಲಿದೆ. ಇದರಿಂದ ಪತ್ರ ಬರಹಗಾರರು ಮತ್ತು ಅವರನ್ನು ಅವಲಂಬಿತರ ಬದುಕು ಬೀದಿಗೆ ಬೀಳಲಿದೆ. ರಾಜ್ಯ ಸರ್ಕಾರ ಪತ್ರ ಬರಹಗಾರರ ರಕ್ಷಣೆಗೆ ಮುಂದಾಗುವಂತೆ ಆಗ್ರಹಿಸಿದರಲ್ಲದೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ (೧೫) ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.
ತಾಲೂಕು ಪತ್ರ ಬರಹಗಾರರ ಸಂಘದ ಸದಸ್ಯರಾದ ಕೆ.ಸಿ.ವೆಂಕಟರಾಮು, ಎಂ.ವಿ.ಶಂಕರ್‌ನಾಗ್, ಕೆ.ಎಸ್.ನಾಗರಾಜು, ಬಿ.ನರಸಿಂಹಮೂರ್ತಿ, ಎ.ಎನ್.ರಮೇಶ್, ಸಾವಿತ್ರಿ ಹೆಗಡೆ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.