ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಹೋರಾಟ ಸಮಿತಿಯಿಂದ ನಗರದ ಅಂಬೇಡ್ಕರ ಸರ್ಕಲ್‌ನಲ್ಲಿ ಅನಿರ್ದಿಷ್ಟ ಧರಣಿ ಹಮ್ಮಿಕೊಳ್ಳಲಾಯಿತು.ಈ ವೇಳೆ ಹೋರಾಟ ಸಮಿತಿ ಸದಸ್ಯ ಅರವಿಂದ ಕುಲಕರ್ಣಿ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಸೂಕ್ತ ಸುಮಾರು 149 ಎಕರೆಗೂ ಹೆಚ್ಚು ಸ್ಥಳಾವಕಾಶ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿದೆ. ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆಯೂ ಇದೆ. ರಾಜ್ಯದ ಯಾವ ಜಿಲ್ಲೆಯಲ್ಲಿಯೂ ಇಲ್ಲ. ಪಿಪಿಪಿ ಮಾದರಿಯನ್ನು ವಿಜಯಪುರಕ್ಕೆ ತರಲು ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅಣ್ಣರಾಯ ಈಳಗೇರ ಮಾತನಾಡಿ, ಖಾಸಗಿ ಸಹಭಾಗಿತ್ವದಲ್ಲಿ ಕಾಲೇಜು ಆರಂಭವಾದರೆ ಅಲ್ಲಿ ಬಡ ಮತ್ತು ಮಧ್ಯಮ ವರ್ಗದ ಹಾಗೂ ಜನಸಾಮಾನ್ಯರ ಮಕ್ಕಳು ಕಲಿಯಲು ಸಾಧ್ಯವಾಗುವುದಿಲ್ಲ. ನಾವೆಲ್ಲರೂ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟಕ್ಕೆ ಅಣಿಯಾಗಬೇಕಿದೆ ಎಂದು ತಿಳಿಸಿದರು.ಜಗದೀಶ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಆರಂಭಿಸಲು ಸೂಕ್ತ ಜಾಗವಿರುವ ಏಕೈಕ ಜಿಲ್ಲೆ ಇದಾಗಿದ್ದು, ವಿದ್ಯಾರ್ಥಿಗಳು, ಯುವಕರು ಇದರ ವಿರುದ್ದ ಗಟ್ಟಿ ದ್ವನಿಯಾಗಬೇಕು. ಒಂದು ವೇಳೆ ಖಾಸಗಿಯವರಿಗೆ ಅವಕಾಶ ಕೊಟ್ಟರೆ ಜಿಲ್ಲಾ ಬಂದ್‌ಗೆ ಕರೆ ಕೊಡಬೇಕಾಗುತ್ತದೆ ಎಂದರು.ಸುರೇಶ ಬಿಜಾಪುರ ಮಾತನಾಡಿ, ವಿಜಯಪುರ ಜಿಲ್ಲೆಯ ಜನರು ಉದ್ದೇಶಿತ ಖಾಸಗಿ ಸಹಭಾಗಿತ್ವದಡಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸುವುದನ್ನು ತೀವ್ರವಾಗಿ ವಿರೋಧಿಸಿ ಹೋರಾಟವನ್ನು ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲ ಸಂಘ ಸಂಸ್ಥೆಗಳು ತೀವ್ರ ಪ್ರತಿರೋಧವನ್ನು ತೋರಿಸಿದ್ದು, ಕೆಲವು ಜನಪ್ರತಿನಿಧಿಗಳು ಪಬ್ಲಿಕ್ ಪ್ರೈವೇಟ್ ಪಾರ್ಟನರ್ಶಿಪ್ ಮಾದರಿಯನ್ನು ವಿರೋಧಿಸಿದ್ದಾರೆ. ಹೀಗಿರುವಾಗ ರಾಜ್ಯ ಸರ್ಕಾರ ಹಠಾತ್ ಆಗಿ ಪಿಪಿಪಿ ಯೋಜನೆ ಅನುಷ್ಠಾನಗೊಳಿಸಲು ನೋಡಲ್ ಅಧಿಕಾರಿ ನೇಮಕ ಮಾಡಿದ್ದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ವಿದ್ಯಾವತಿ ಅಂಕಲಗಿ ಮಾತನಾಡಿ, ಜಿಲ್ಲೆಯ ಜನತೆ ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯನ್ನು ಅಳವಡಿಸಲು ಬಿಡಬಾರದು. ಇದರ ವಿರುದ್ದ ಹೋರಾಟಕ್ಕೆ ಮುಂದಾಗಬೇಕು ಎಂದು ಹೇಳಿದರು.
ಶ್ರೀನಾಥ ಪೂಜಾರಿ ಮಾತನಾಡಿ, ಸರ್ಕಾರ ಖಾಸಗಿ ವ್ಯಕ್ತಿಗಳ ಮುಂದೆ ಮಂಡಿಯೂರುತ್ತಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಸರ್ಕಾರಿ ವೈದ್ಯಕೀಯ ಕಾಲೇಜು ಜಿಲ್ಲೆಯ ಜನರ ಹಲವಾರು ವರ್ಷಗಳ ಬೇಡಿಕೆಯಾಗುಳಿದಿಲ್ಲ. ಬದಲಾಗಿ ಅದು ಈಗ ಜಿಲ್ಲೆಯ ಜನರ ಭಾವನೆಯಾಗಿ ಪರಿವರ್ತನೆಗೊಂಡಿದೆ. ಇದನ್ನು ಇಡೇರಿಸುವಂತೆ ಮುಖ್ಯಂತ್ರಿಗಳಿಗೆ ಅಲ್ಲೇ ಇದ್ದ ಜಿಲ್ಲೆಯ ಜನಪ್ರತಿನಿಧಿಗಳು ಸಚಿವರು ಮನವಿ ಮಾಡಬೇಕಿತ್ತು. ಒತ್ತಡ ಹೇರಬೇಕಿತ್ತು. ಆದರೆ ಇವರು ಅಸಹಾಯಕರಂತೆ ನಿಂತಿದ್ದು ದೊಡ್ಡ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.ಧರಣಿಯಲ್ಲಿ ಅನಿಲ ಹೊಸಮನಿ, ಅಕ್ರಮ ಮಾಷಾಳಕಾರ, ಮಲ್ಲಿಕಾರ್ಜುನ ಕೆಂಗನಾಳ, ಲಲಿತಾ ಬಿಜ್ಜರಗಿ, ದಸ್ತಗಿರ ಉಕ್ಕಲಿ, ಗೀತಾ.ಹೆಚ್, ಮಹಾದೇವಿ ಧರ್ಮಶೆಟ್ಟಿ, ಮಲ್ಲಿಕಾರ್ಜುನ ಬಟಗಿ, ಸಂಜೀವ ಕಂಬಾಗಿ, ಮಲ್ಲಿಕಾರ್ಜುನ್.ಹೆಚ್.ಟಿ ಮುಂತಾದವರು ಭಾಗವಹಿಸಿದ್ದರು.