ಅನಿರ್ದಿಷ್ಟಾವಧಿ ಧರಣಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯ

| Published : Sep 28 2024, 01:20 AM IST

ಅನಿರ್ದಿಷ್ಟಾವಧಿ ಧರಣಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯ ಗ್ರಾಮಾಡಳಿತಾಧಿಕಾರಿಗಳ (ಗ್ರಾಮ ಲೆಕ್ಕಾಧಿಕಾರಿಗಳ) ಸಂಘ ತಾಲೂಕು ಘಟಕದ ಸದಸ್ಯರು ಗುರುವಾರ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಕೈಗೆ ಕಪ್ಪು ಬಟ್ಟೆ ಧರಿಸಿ ಅನಿರ್ದಿಷ್ಟಾವಧಿವರೆಗೆ ಧರಣಿ ಆರಂಭಿಸಿದರು.

ಬ್ಯಾಡಗಿ: ಬಡ್ತಿ, ಸೇವಾ ಸೌಲಭ್ಯ, ಮೂಲಭೂತ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮಾಡಳಿತಾಧಿಕಾರಿಗಳ (ಗ್ರಾಮ ಲೆಕ್ಕಾಧಿಕಾರಿಗಳ) ಸಂಘ ತಾಲೂಕು ಘಟಕದ ಸದಸ್ಯರು ಗುರುವಾರ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಕೈಗೆ ಕಪ್ಪು ಬಟ್ಟೆ ಧರಿಸಿ ಅನಿರ್ದಿಷ್ಟಾವಧಿವರೆಗೆ ಧರಣಿ ಆರಂಭಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕಾಧ್ಯಕ್ಷ ಈಶ್ವರ ಮಳಿಯಣ್ಣನವರ, ರಾಜ್ಯಾದ್ಯಂತ ಗ್ರಾಮ ಆಡಳಿತ ಅಧಿಕಾರಿಗಳನ್ನು ಸರ್ಕಾರ ಗಾಣದೆತ್ತಿನಂತೆ ದುಡಿಸಿಕೊಳ್ಳುತ್ತಿದೆ. ಆದರೆ ಕೆಲಸಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸುತ್ತಿಲ್ಲ, ಕನಿಷ್ಠ ಸೌಲಭ್ಯ ಬಳಸಿಕೊಂಡು ಸರ್ಕಾರದ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿದರೂ ಸಹ ನಮ್ಮ ಮೇಲೆ ಅಧಿಕಾರಿಗಳ ಗದಾಪ್ರಹಾರ ಮಾತ್ರ ನಿಂತಿಲ್ಲ ಎಂದರು.

ಅಮಾನತು ಅಸ್ತ್ರ ಕೈಬಿಡಿ: ಗುಂಡಪ್ಪ ಹುಬ್ಬಳ್ಳಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ನಮಗೆ ಸ್ವಂತ ಕಚೇರಿ ಇಲ್ಲ, ಟೇಬಲ್ ಖುರ್ಚಿಗಳಿಲ್ಲ. ಪರಿಣಾಮ ಸಾರ್ವಜನಿಕ ಕಟ್ಟೆಗಳ ಮೇಲೆ ಕುಳಿತು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೇ ಗುಣಮಟ್ಟದ ಮೊಬೈಲ್ ಹಾಗೂ ಲ್ಯಾಪಟಾಪ್ ಪ್ರಿಂಟರ್ ಸೇರಿದಂತೆ ಯಾವುದೇ ಎಲೆಕ್ಟ್ರಿ ಕಲ್ ವಸ್ತುಗಳನ್ನು ಸರಕಾರ ಒದಗಿಸಿಲ್ಲ, ಇದರಿಂದ ಕೆಲಸದಲ್ಲಿ ವಿಳಂಬವಾಗುತ್ತಿದ್ದು, ಸಮಸ್ಯೆಗಳ ಬಗ್ಗೆ ಗೊತ್ತಿದ್ದರು ಮೇಲಧಿಕಾರಿಗಳು ತಾಂತ್ರಿಕ ಸಮಸ್ಯೆ ಪರಿಗಣಿಸದೇ ನಮ್ಮ ಮೇಲೆ ಮೆಮೋ ಅಸ್ತ್ರ ಬಳಸುತ್ತಿದ್ದಾರೆ. ಇದರಿಂದ ಈಗಾಗಲೇ ಹಲವಾರು ಅಮಾನತು ಸಹ ಆಗಿದ್ದಾರೆ. ಆದ್ದರಿಂದ ನಮಗೆ ಮೊದಲು ಅಗತ್ಯ ಸೌಲಭ್ಯ ಒದಸುವಂತೆ ಆಗ್ರಹಿಸಿದರು.

ಖಾಸಗಿತನಕ್ಕೆ ಧಕ್ಕೆ: ಪ್ರಭಾವತಿ ಬಡಿಗೇರ ಮಾತನಾಡಿ, ಅತಿಯಾದ ಕೆಲಸದ ಒತ್ತಡದಿಂದ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50 ಹೆಚ್ಚು ಸಿಬ್ಬಂದಿ ವಿವಿಧ ಕಾರಣಗಳಿಂದ ಈಗಾಗಲೇ ಸಾವನ್ನಪ್ಪಿದ್ದಾರೆ. ಇದರಿಂದ ಅವರ ಕುಟುಂಬಗಳು ಬೀದಿಗೆ ಬಿದ್ದಿವೆ. ಇದರೊಟ್ಟಿಗೆ ಸಮಯದ ಮಿತಿಯಿಲ್ಲದೇ ಗೂಗಲ್ ಮೀಟಿಂಗ್ ನಡೆಸುವ ಕಾರಣ ನಮ್ಮ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತಿದೆ. ಅಲ್ಲದೇ ರಜೆ ದಿನಗಳಲ್ಲಿಯೂ ಕೆಲಸ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದರು.

ಹಲ್ಲೆಗಳನ್ನು ತಪ್ಪಿಸಿ: ಶಬ್ಬೀರ ಬಾಗೇವಾಡಿ, ರಾಜ್ಯಾದ್ಯಂತ ಗ್ರಾಮಾಡಳಿತ ಅಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿರುವುದು ಖಂಡನೀಯ. ಸಾರ್ವಜನಿಕರ ಕೆಲಸ ಮಾಡಿದರೂ ಸಹ ಈ ರೀತಿಯ ಹಲ್ಲೆಗಳು ನಡೆಯುತ್ತಿರುವುದು ಸರಿಯಲ್ಲ. ಸರ್ಕಾರ ಇಂತವರ ವಿರುದ್ಧ ಕಠಿಣ ಕಾನೂನು ಜಾರಿಗೆ ತರಬೇಕಿದೆ. ಇದರೊಟ್ಟಿಗೆ ಆಹಾರ ಇಲಾಖೆ ಕೆಲಸವನ್ನು ನಾವುಗಳೇ ಮಾಡಬೇಕಿದ್ದು ಇದು ಮತ್ತಷ್ಟು ಒತ್ತಡಕ್ಕೆ ಸಿಲುಕುವಂತೆ ಮಾಡಿದೆ. ಇಷ್ಟೆಲ್ಲ ಕೆಲಸ ಮಾಡಿದರೂ ಸಹ ನಮಗೆ ಬಡ್ತಿ ಸಿಗುತ್ತಿಲ್ಲ ಆದ್ದರಿಂದ ನಮ್ಮೆಲ್ಲ ಬೇಡಿಕೆಗಳನ್ನ ಈಡೇ ರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಹೇಮಾ ಗಳಗನಾಥ, ನಂದಾ ಮಲ್ಲನಗೌಡರ, ರೇಖಾ ಗಾಣಿಗೇರ, ತೇಜು ರೆಡ್ಡಿ, ಜಾಫರ ತಹಸೀಲ್ದಾರ್, ಬಿ.ಎನ್. ಖವಾಸ್, ರಾಜು ಬೇಗೂರ, ಶೋಭಾ ಹುಣಸೀಮರದ, ಸಂತೋಷ ವಿಭೂತಿ, ಲಕ್ಷ್ಮೀ ಹೊಂಬಾಳೆ, ಸರಸ್ವತಿ ಕುರುಬನಹಳ್ಳಿ, ಶೃತಿ ಮೈದೂರ, ರಂಗಪ್ಪಗೌಡ, ಸವಿತಾ ರಟ್ಟಿಹಳ್ಳಿ, ರೇಖಾ ದುಮ್ಮಿಹಾಳ, ಪ್ರೀತಿ ಕುಲಕರ್ಣಿ, ಗ್ರಾಮ ಸಹಾಯಕರಾದ ಮಾಲತೇಶ ಕೊತನೇರ, ಚಿದಾನಂದ ಆನವಟ್ಟಿ, ಮಹದೇವಪ್ಪ ಹಾವನೂರ, ಮಂಜುನಾಥ ನಾಯ್ಕರ, ಶರಣಪ್ಪ ದೊಡ್ಡರಾಮಣ್ಣನವರ, ಮಹದೇವಪ್ಪ ಓಲೇಕಾರ, ಮಾಲತೇಶ ಮಡಿವಾಳರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.