ಗೆಜ್ಜಲಗೆರೆ ಗ್ರಾಪಂ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಕೈ ಬಿಡುವಂತೆ ಒತ್ತಾಯಿಸಿ ಗ್ರಾಪಂ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಮುಂದುವರೆದಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಗೆಜ್ಜಲಗೆರೆ ಗ್ರಾಪಂ ಸೇರಿದಂತೆ ನಾಲ್ಕು ಗ್ರಾಪಂಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಕೈ ಬಿಡುವಂತೆ ಒತ್ತಾಯಿಸಿ ಗ್ರಾಪಂ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಮುಂದುವರೆದಿದೆ. ಗ್ರಾಮದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರು ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪೌರಾಡಳಿತ ನಿರ್ದೇಶನಾಲಯ, ಜಿಲ್ಲಾಡಳಿತ ಹಾಗೂ ಶಾಸಕ ಕೆ.ಎಂ.ಉದಯ್ ವಿರುದ್ಧ ಘೋಷಣೆ ಕೂಗಿ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಯಿಂದ ಕೈ ಬಿಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಚಳವಳಿ ಸ್ವರೂಪ ಬದಲಾಗಲಿದೆ. ಇದಕ್ಕೆ ಶಾಸಕರು ಹೊಣೆಯಾಗಬೇಕಾಗಿತೆಂದು ಎಚ್ಚರಿಸಿದರು.ರೈತ ಸಂಘದ ಮುಖಂಡ ಜಿ.ಎ.ಶಂಕರ್ ಮಾತನಾಡಿ, ಧರಣಿ ಆರಂಭವಾಗಿ ಮೂರು ದಿನವಾಗಿದೆ. ಡೀಸಿ, ಸಿಇಒ ಹಾಗೂ ಶಾಸಕರು ಸ್ಥಳಕ್ಕೆ ಧಾವಿಸಿ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಎರಡು ಮೂರು ದಿನಗಳಲ್ಲಿ ಸಭೆ ಕರೆದು ಮುಂದಿನ ಹೋರಾಟದ ರೂಪುರೇಷೆಗಳನ್ನು ಕುರಿತು ಚರ್ಚೆ ನಡೆಸಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಜಿ.ಎಸ್. ರಾಧಾ ಹೇಳಿದರು. ಧರಣಿ ಸತ್ಯಾಗ್ರಹದಲ್ಲಿ ರೈತ ಸಂಘದ ಗ್ರಾಮ ಘಟಕದ ಅಧ್ಯಕ್ಷ ಜಿ.ಎಚ್.ವೀರಪ್ಪ, ಸ್ತ್ರೀಶಕ್ತಿ ಸ್ವಸಹಾಯ ಸಂಘದ ನಿಂಗಮ್ಮ, ಮಂಜುಳಾ, ಶಾಂತಮ್ಮ, ತಾಪಂ ಮಾಜಿ ಅಧ್ಯಕ್ಷ ಜಿ.ಪಿ. ಯೋಗೇಶ್ , ಬಿಜೆಪಿ ಮುಖಂಡ ಜಿ.ಸಿ .ಮಹೇಂದ್ರ, ಜಿ.ಟಿ.ಚಂದ್ರಶೇಖರ್, ಮತ್ತಿತರರು ಪಾಲ್ಗೊಂಡಿದ್ದರು.ನಾಳೆ ವಿದ್ಯುತ್ ವ್ಯತ್ಯಯ
ಮಂಡ್ಯ: ತಾಲೂಕಿನ ಚಿಕ್ಕಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ ಎಫ್-01 ಪಣಕನಹಳ್ಳಿ ಫೀಡರ್ ನಲ್ಲಿ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ ಡಿ.26ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ಗ್ರಾಮಾಂತರ ಪ್ರದೇಶಗಳಾದ ಹೊಳಲು, ಪಣಕನಹಳ್ಳಿ, ತಂಡಸನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಚಾವಿಸನಿನಿ, ಕಾ ಮತ್ತು ಪಾ ವಿಭಾಗ ಕಾರ್ಯ ನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.