ಮೇ 27ರಿಂದ ಪೌರ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

| Published : May 25 2025, 01:49 AM IST / Updated: May 25 2025, 01:50 AM IST

ಸಾರಾಂಶ

ಪೌರ ನೌಕರರು ಸರ್ಕಾರಕ್ಕೆ ನೀಡಿದ್ದ ಗಡವು ಮೇ 26ಕ್ಕೆ ಕೊನೆಗೊಳ್ಳಲಿದ್ದು, ಕಚೇರಿ ಇತರೆ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ಮೇ 27 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿವಿಧ ಬೇಡಿಕೆ ಈಡೇರಿಸಲು ಜಿಲ್ಲೆಯ ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ನೌಕರರು ಸರ್ಕಾರಕ್ಕೆ ನೀಡಿದ್ದ ಗಡವು ಮೇ 26ಕ್ಕೆ ಕೊನೆಗೊಳ್ಳಲಿದ್ದು, ಕಚೇರಿ ಇತರೆ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ, ಮೇ 27 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ಕಳೆದ ಏ.12ರಿಂದ ಮೇ 26ವರೆಗೆ ನೌಕರರು ಬಲಗೈ ತೋಳಿಗೆ ಕಪ್ಪು ಬಟ್ಟೆ ಧರಿಸಿ, 45 ದಿನಗಳ ಕಾಲ ಮುಷ್ಕರವನ್ನು ನಡೆಸುತ್ತಿದ್ದರು. ಇದೀಗ ಈ ಮುಷ್ಕರ ಅಂತ್ಯಗೊಳ್ಳಲಿದ್ದು, ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಅಣಿಯಾಗಿದ್ದಾರೆ.

ಬೇಡಿಕೆಗಳು:

ಪೌರ ವೃಂದದ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಕೆಜಿಐಡಿ, ಜಿಪಿಎಸ್ ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಇತರೆ ಸೌಲಭ್ಯಗಳನ್ನು ಪೌರ ನೌಕರರಿಗೂ ಜಾರಿ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಲೋಡರ್, ಕ್ಲೀನರ್, ಪೌರಕಾರ್ಮಿಕರು, ಸೂಸರ್‌ವೈಸರ್, ಕಂಪ್ಯೂಟರ್ ಆಪರೇಟರ್, ಪ್ರೋಗ್ರಾಮರ್ ಸೇರಿದಂತೆ ಗುತ್ತಿಗೆ, ಹೊರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ ಜ್ಯೂನಿಯರ್ ಸಿಬ್ಬಂದಿಗೂ ನೇರ ವೇತನ ಪಾವತಿ ಮಾಡಿ, ಕಾಯಂ ಮಾಡಬೇಕು. 2022-23ನೇ ಸಾಲಿನಲ್ಲಿ ವಿಶೇಷ ನೇಮಕಾತಿಯಡಿ ನೇಮಕಾತಿ ಹೊಂದಿರುವ ಪೌರ ಕಾರ್ಮಿಕರು, ನೌಕರರಿಗೆ ಸ್ಥಳೀಯ ನಿಧಿಯಲ್ಲಿ ವೇತನ ನೀಡುವುದನ್ನು ರದ್ದುಪಡಿಸಿ, ಎಸ್.ಎಫ್.ಸಿ ಅನುದಾನದಡಿ ವೇತನ ಪಾವತಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ, ಪೌರ ನೌಕರರು, ಸರ್ಕಾರಕ್ಕೆ 45 ದಿನಗಳ ಗಡುವು ನೀಡಿದ್ದರು. ಆದರೆ, ಸರ್ಕಾರ ಈವರೆಗೂ ಪೌರನೌಕರರ ಬೇಡಿಕೆ ಈಡೇರಿಸಲು ಮುಂದೆ ಬಂದಿಲ್ಲ. ಈ ಹಿನ್ನೆಲೆ ಹೊಸಪೇಟೆ ನಗರಸಭೆಯ ಪೌರನೌಕರರು, ಕಚೇರಿ ಕೆಲಸ, ಸ್ವಚ್ಛತಾ ಕಾರ್ಯ, ನೀರು ಸರಬರಾಜು ಹಾಗೂ ಬೀದಿ ದೀಪ ನಿರ್ವಹಣೆಯನ್ನು ಸ್ಥಗಿತಗೊಳಿಸಿ, ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.ಮನವಿ:

ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ಪದಾಧಿಕಾರಿಗಳು, ಹೊಸಪೇಟೆ ನಗರಸಭೆಯ ಪೌರಾಯುಕ್ತ ಸಿ.ಚಂದ್ರಪ್ಪರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಕಂದಾಯ ಅಧಿಕಾರಿ ನಾಗರಾಜ, ಎಫ್‌ಡಿಸಿ ಓಬಣ್ಣ, ಸುರೇಶ್, ಯಲ್ಲಪ್ಪ ಮತ್ತಿತರರಿದ್ದರು.